ADVERTISEMENT

ಸರ್ಕಾರಿ ಶಾಲೆಗಳ ಕತ್ತಲು ನೀಗಿದ ಸೌರ ವಿದ್ಯುತ್‌

ಅನಿತಾ ಎಚ್.
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ರಾಮಗೊಂಡನಹಳ್ಳಿ ಶಾಲೆ ವಿದ್ಯಾರ್ಥಿಗಳೊಂದಿಗೆ ‘ಯುವಿ ಗ್ರೀನ್‌’ ಸಿಇಒ ವಿನಯ್‌
ರಾಮಗೊಂಡನಹಳ್ಳಿ ಶಾಲೆ ವಿದ್ಯಾರ್ಥಿಗಳೊಂದಿಗೆ ‘ಯುವಿ ಗ್ರೀನ್‌’ ಸಿಇಒ ವಿನಯ್‌   

‘ನಾನು ನನ್ನ ಹಣವನ್ನು ಸೌರಶಕ್ತಿ ಮೇಲೆ ಹೂಡುತ್ತೇನೆ. ವಿದ್ಯುತ್‌ ದರವನ್ನು ಎಷ್ಟು ಅಗ್ಗವಾಗಿಸಲು ಬಯಸುತ್ತೇನೆಂದರೆ ಶ್ರೀಮಂತರು ಮಾತ್ರವೇ ಮೇಣದಬತ್ತಿಗಳನ್ನು ಉರಿಸಬೇಕು...’

– ಇದು ಅಮೆರಿಕದ ಹೆಸರಾಂತ ವಾಣಿಜ್ಯೋದ್ಯಮಿ, ಹಲವು ಉಪಕರಣಗಳ ಸೃಷ್ಟಿಕರ್ತ ಥಾಮಸ್‌ ಆಲ್ವ ಎಡಿಸನ್‌ ಅವರ ಮಾತು.
ಎಡಿಸನ್‌ ಅವರ ಮಾತನ್ನು ಅಕ್ಷರಶಃ ನಿಜವಾಗಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ನಗರದ  ‘ಯುವಿ ಗ್ರೀನ್‌’ ವಿದ್ಯುತ್‌ ಸೇವಾ ಸಂಸ್ಥೆ.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ನೆರವು ನೀಡಲು ಬಯಸುವ ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ರೋಟರಿ ಬೆಂಗಳೂರು ಐ.ಟಿ ಕಾರಿಡಾರ್‌ ಸಹಯೋಗದಲ್ಲಿ ನವೀಕರಿಸಬಹುದಾದ ಇಂಧನ ಸೌರಶಕ್ತಿ ವ್ಯವಸ್ಥೆ ಅಳವಡಿಸಿಕೊಡುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಬೆಂಗಳೂರಿನ ರಾಮಗೊಂಡನಹಳ್ಳಿ, ಇಮದಹಳ್ಳಿ, ವರ್ತೂರು, ಸಿದ್ದಾಪುರ, ನಲ್ಲೂರಹಳ್ಳಿ, ಗಾಂಧಿಪುರನ ಸರ್ಕಾರಿ ಶಾಲೆಗಳಲ್ಲಿ ಸೌರಶಕ್ತಿ ಉತ್ಪಾದನಾ ವ್ಯವಸ್ಥೆ ಅಳವಡಿಸಿದೆ.

ನಲ್ಲೂರಹಳ್ಳಿಯ ಉದ್ಯಾನಗಳು ಮತ್ತು ಗಾಂಧಿಪುರ ಗ್ರಾಮಕ್ಕೆ ಸೌರಶಕ್ತಿ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಿದೆ. ಇದಕ್ಕೆ ಭಾರತೀಯ ಸ್ಟೇಟ್‌ ಬ್ಯಾಂಕ್‌, ಟೆಸ್ಕೊ ಮೊದಲಾದ ಸಂಸ್ಥೆಗಳು ಹಣಕಾಸಿನ ನೆರವು ಒದಗಿಸಿವೆ.

‘ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ರೋಟರಿ ಬೆಂಗಳೂರು ಸಂಸ್ಥೆಯು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ನೀರು ಶುದ್ಧೀಕರಣ ಸಾಧನ ನೀಡಿತ್ತು. ಆದರೆ ವಿದ್ಯುತ್‌ ಅಭಾವದ ಕಾರಣ ವಿದ್ಯಾರ್ಥಿಗಳು ಈ ಸೌಲಭ್ಯದ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನು ಗಮನಿಸಿದ ರೋಟರಿ ಸಂಸ್ಥೆಯ ಅಧ್ಯಕ್ಷ ನಿತೇಶ್‌ ಅವರು ಪರ್ಯಾಯ ಇಂಧನ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದರು. ಸೌರಶಕ್ತಿ ಈಗ ಶಾಲೆಗಳನ್ನು ಬೆಳಗುತ್ತಿದೆ’ ಎನ್ನುತ್ತಾರೆ ‘ಯುವಿ ಗ್ರೀನ್‌’ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್‌ ಶಿಂಧೆ.

‘ಗಾಂಧಿಪುರನ ಕೊಳಚೆ ಪ್ರದೇಶ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿತ್ತು. ಬೀದಿದೀಪಗಳಿಲ್ಲದ ಕಾರಣ ರಾತ್ರಿಯಾದರೆ ಜನ ತಿರುಗಾಡಲು ಭಯ ಪಡುತ್ತಿದ್ದರು. ಅಲ್ಲಿಗೂ ಸೌರಶಕ್ತಿ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ಅವರು.

‘ಸೌರಶಕ್ತಿ ಬಳಕೆಯಿಂದ ವಿದ್ಯುತ್‌ ಬಿಲ್‌ ಕಡಿಮೆ ಬರುತ್ತಿದೆ. ವಿದ್ಯುತ್‌ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ’ ಎಂದು ಪ್ರತಿಪಾದಿಸುತ್ತಾರೆ ವಿನಯ್‌.
‘ಬಿಸಿಲು ಚೆನ್ನಾಗಿ ಇದ್ದಾಗ ಇರುಳಿನಲ್ಲಿ 8ರಿಂದ 10 ಗಂಟೆ ಕಾಲ ಮತ್ತು ಮೋಡವಿದ್ದಾಗ ಕನಿಷ್ಠ 5 ಗಂಟೆ ಕಾಲ ಬೀದಿ ದೀಪಗಳು ಬೆಳಗುತ್ತವೆ. ಇದೊಂದು ಪರಿಸರ ಸ್ನೇಹಿ ಯೋಜನೆ’ ಎನ್ನುತ್ತಾರೆ ಅವರು.

‘ಆಗಾಗ ವಿದ್ಯುತ್‌ ಕೈ ಕೊಡುತ್ತಿದ್ದ ಕಾರಣ ಕಂಪ್ಯೂಟರ್‌ ತರಗತಿಗೆ ಅಡಚಣೆಯಾಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ.  ತರಗತಿಗಳು ನಿರಾತಂಕವಾಗಿ ನಡೆಯುತ್ತಿವೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ವರ್ತೂರು ಶಾಲೆಯ 9ನೇ ತರಗತಿ ವಿದ್ಯಾರ್ಥಿ ಬಾಬು.

‘ಗ್ರಾಮಕ್ಕೆ ಹಲವು ವರ್ಷಗಳಿಂದ ಬೀದಿ ದೀಪಗಳು ಇರಲಿಲ್ಲ. ರಾತ್ರಿ ವೇಳೆ ನಡೆದು ಬರುವಾಗ ಅನೇಕರು ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳಿವೆ. ಈಗ ನಡೆದಾಡಲು ಸುಲಭವಾಗಿದೆ. ಇಂತಹ ಉತ್ತಮ ಕಾರ್ಯಗಳು ಇತರೆಡೆಯೂ ನಡೆಯಬೇಕು’ ಎಂದು ಆಶಿಸುತ್ತಾರೆ ನಲ್ಲೂರಹಳ್ಳಿ ಮತ್ತು ಗಾಂಧಿಪುರಂ ಗ್ರಾಮಸ್ಥರು.

ಮಾಹಿತಿಗೆ: 9845091409 

*
ತಗ್ಗಿದ ವಿದ್ಯುತ್ ಬಿಲ್ಸೌ

ರಶಕ್ತಿ ಬಳಕೆಗೆ ಮೊದಲು ₹ 8 ಸಾವಿರದವರೆಗೆ ವಿದ್ಯುತ್‌ ಬಿಲ್‌ ಬರುತ್ತಿತ್ತು. ಈಗ ಈ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಶಾರ್ಟ್‌ ಸರ್ಕಿಟ್‌ ಭಯವಿಲ್ಲ. ವಿದ್ಯುತ್‌ ಅಭಾವ ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲಿ  ಇದೊಂದು ಮಾದರಿ ಯೋಜನೆ. ನವೀಕರಿಸ ಬಹುದಾದ ಇಂಧನದ ಬಗ್ಗೆ ವಿಜ್ಞಾನ ಪಾಠದಲ್ಲಿ ಮಕ್ಕಳಿಗೆ ಕಲಿಸುತ್ತೇವೆ. ಸೋಲಾರ್ ಫಲಕ ಅಳವಡಿಸಿರುವು ದರಿಂದ ಪ್ರಾಯೋಗಿಕವಾಗಿ ತಿಳಿಸಲು ಸಾಧ್ಯವಾಗಿದೆ.
-ಎಂ.ತನುಜಾ
ಉಪ ಪ್ರಾಂಶುಪಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ವರ್ತೂರು

ADVERTISEMENT

*
ವಿದ್ಯುತ್ ಅಡಚಣೆ ಮಾತಿಲ್ಲ
ರೋಟರಿ ಸಂಸ್ಥೆಯವರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ನೀಡಿ, ಶಿಕ್ಷಕರನ್ನೂ ನೇಮಿಸಿದ್ದರು. ಆದರೆ ವಿದ್ಯುತ್ ಅಡಚಣೆಯಿಂದ ಮಕ್ಕಳಿಗೆ ಅದರ ಲಾಭ ಸಿಗುತ್ತಿರಲಿಲ್ಲ. ಇದೀಗ ಸೌರಶಕ್ತಿ ಬಳಕೆಯಿಂದ ವಿದ್ಯುತ್‌ ಅಡಚಣೆಯ ತೊಂದರೆ ನಿವಾರಣೆಯಾಗಿದೆ. ಯಾವುದೇ ಅಡಚಣೆ ಇಲ್ಲದೆ ತರಗತಿಗಳು ಸಾಗಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಬಹುಮಾಧ್ಯಮ ಬಳಕೆ ಸಾಧ್ಯವಾಗಿದೆ.
–ವಿ.ವನಜಾಕ್ಷಮ್ಮ
ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಗೊಂಡನಹಳ್ಳಿ

*
ಅಗತ್ಯ ಸೌಕರ್ಯ ಕಲ್ಪಿಸಿದೆವು
ವಿವಿಧ ಸಂಸ್ಥೆಗಳ ನೆರವಿನಿಂದ ನಲ್ಲೂರಹಳ್ಳಿ ಸರ್ಕಾರಿ ಶಾಲೆಗೆ ಆಟದ ಮೈದಾನ, ಬೀದಿ ದೀಪಗಳು ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಿದೆವು. ಗಾಂಧಿಪುರಂನ ಕೊಳಚೆಪ್ರದೇಶದಲ್ಲಿ ಬೀದಿ ದೀಪಗಳೇ ಇರಲಿಲ್ಲ. ಈಗ ಸೌರಶಕ್ತಿ ಮೂಲಕ ದೀಪಗಳ ವ್ಯವಸ್ಥೆ ಮಾಡಿರುವುದರಿಂದ ಎಲ್ಲರೂ ತಿರುಗಾಡಲು ಅನುಕೂಲವಾಗಿದೆ.
-ಶ್ರೀನಿವಾಸ್‌
ವೈಟ್‌ಫೀಲ್ಡ್‌ ರೈಸಿಂಗ್‌ ಸದಸ್ಯ, ನಲ್ಲೂರಹಳ್ಳಿ

*
ಖಾಸಗಿ ಶಾಲೆಗಳಂತೆಯೇ ಸರ್ಕಾರಿ ಶಾಲೆಗಳ ಮಕ್ಕಳೂ ಕಂಪ್ಯೂಟರ್‌ ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ವೈಟ್‌ಫೀಲ್ಡ್‌ ಪ್ರದೇಶದ ವಿವಿಧ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಿದ್ದೆವು. ಆದರೆ ವಿದ್ಯುತ್‌ ಅಭಾವದ ಸಂದರ್ಭದಲ್ಲಿ ಮಕ್ಕಳು ಸುಮ್ಮನೆ ಕೂರಬೇಕಿತ್ತು. ಇದನ್ನು ಮನಗಂಡು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಸೌರಶಕ್ತಿ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಯಿತು.
–ನಿತೇಶ್‌
ಅಧ್ಯಕ್ಷ, ರೋಟರಿ ಬೆಂಗಳೂರು ಐ.ಟಿ ಕಾರಿಡಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.