ADVERTISEMENT

ಸಾಧನೆಯ ಹಾದಿ ಬಿಂಬಿಸುವ ಚಿತ್ರ

ಅಭಿಲಾಷ್ ಎಸ್‌.ಡಿ.
Published 23 ಸೆಪ್ಟೆಂಬರ್ 2017, 17:04 IST
Last Updated 23 ಸೆಪ್ಟೆಂಬರ್ 2017, 17:04 IST
ಸಾಧನೆಯ ಹಾದಿ ಬಿಂಬಿಸುವ ಚಿತ್ರ
ಸಾಧನೆಯ ಹಾದಿ ಬಿಂಬಿಸುವ ಚಿತ್ರ   

ಕುಮಾರ ಗಂಧರ್ವ...

ಭಾರತೀಯ ಸಂಗೀತ ಪರಂಪರೆ ಕಂಡ ಮೇರು ಕಲಾವಿದ. ಶಾಸ್ತ್ರೀಯ ಸಂಗೀತ ಲೋಕದ ಮಿತಿಗಳನ್ನು ಮೀರಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟ ಅಪರೂಪದ ಸಂಗೀತ ಜ್ಞಾನಿ.

1924ರಲ್ಲಿ ಈಗಿನ ಬೆಳಗಾವಿಗೆ ಹತ್ತಿರದ ಸೂಳಿಭಾವಿಯಲ್ಲಿ ಜನಿಸಿದ ಇವರಿಗೆ ಸಂಗೀತ ಕ್ಷೇತ್ರದ ತಾರೆಯಾಗಿ ಮಿನುಗಲು ಸಾಧ್ಯವಾದದ್ದು ಪಕ್ಕದ ಮಹಾರಾಷ್ಟ್ರದಲ್ಲಿ. ಮನೆಯಲ್ಲಿ ಸದಾ ಮೊಳಗುತ್ತಿದ್ದ ಬಾಲ ಗಂಧರ್ವರ ಗಾಯನವನ್ನು ಕೇಳುತ್ತಾ 8ರ ವಯಸ್ಸಿನಲ್ಲಿ ಹಾಡಲಾರಂಭಿಸಿದ ಕುಮಾರ ಗಂಧರ್ವರ ಪೂರ್ವದ ಹೆಸರು ಶಿವಪುತ್ರ ಸಿದ್ದರಾಮಯ್ಯ ಕೋಮಾಲ್ಕಿ ಮಠ್.

ADVERTISEMENT

ಆ ಕಾಲಕ್ಕೆ ಬಹಳ ಜನಪ್ರಿಯರಾಗಿದ್ದ ಉಸ್ತಾದ್ ಫಯಾಜ್ ಖಾನ್, ಅಬ್ದುಲ್ ಅಜೀಬ್ ಖಾನ್, ಹಫೀಜ್ ಅಲಿ ಖಾನ್, ನಾರಾಯಣ ರಾವ್ ವ್ಯಾಸ್, ಕುಂದನ್ ಲಾಲ್ ಸೆಹಗಲ್ ಅವರಂತಹ ದೊಡ್ಡ ಹೆಸರಿನವರೆದುರು ಬೆರಗು ಮೂಡುವಂತೆ ಹಾಡಿ ‘ಗಂಧರ್ವ’ ಬಿರುದಾಂಕಿತರಾದಾಗ ಇವರ ವಯಸ್ಸು ಕೇವಲ 11.

ಸಂಗೀತಾನುಭವ ಹೆಚ್ಚಿದಂತೆ ಖ್ಯಾತಿ ವರ್ಧಿಸಿತು. ಶಿಷ್ಯೆ ಭಾನುಮತಿ ಕನ್ಸ್‌ ಅವರನ್ನೇ ಮದುವೆಯಾಗಿ ಹೊಸ ಬಾಳು ಆರಂಭಿಸುವ ಹೊತ್ತಿಗೆ ಮಾರಕ ಕ್ಷಯರೋಗ ಮೈಗಂಟಿತು. ಕಾಯ ಬಡಕಲಾಯಿತು. ಮತ್ತೆಂದೂ ಹಾಡಲಾರದ ಸ್ಥಿತಿ ತಲುಪಿದರು. ವೈದ್ಯರೂ ಎಚ್ಚರಿಸಿದರು. ಸತತ ಆರು ವರ್ಷಗಳ ಕಾಲ ಸಂಗೀತ ಕ್ಷೇತ್ರದಿಂದ ಕಳೆದೇಹೋಗಿದ್ದ ಗಂಧರ್ವರು, ಮಡದಿಯ ಆರೈಕೆಯ ಫಲ ಹಾಗೂ ಅಚ್ಚರಿಯೆಂಬಂತೆ 1953ರಲ್ಲಿ ಮತ್ತೆ ಗಂಟಲು ಬಿಚ್ಚಿದರು.

ಅವರೊಳಗಿದ್ದ ಸೃಜನಶೀಲ ಕಲಾರಾಧಕನಿಂದ ಸಂಗೀತದ ಸಂಪ್ರದಾಯಗಳನ್ನೆಲ್ಲಾ ಮುರಿದು ಕಟ್ಟುವ ಪ್ರಯತ್ನ ನಡೆಯಿತು. ಜನಪದ ಹಾಡುಗಳ ಕೆಲವು ಶೈಲಿಯನ್ನು ಹಿಂದೂಸ್ತಾನಿ ಶಾಸ್ತ್ರೀಯದೊಳಗೆ ಆಳವಡಿಸಿದ್ದರಿಂದ ಹಲವು ಹೊಸ ರಾಗಗಳು ಹುಟ್ಟಿಕೊಂಡವು. ಇದರಿಂದ ಶಾಸ್ತ್ರೀಯ ಸಂಗೀತದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಹಲವು ಮಹಾನ್ ಸಂಗೀತ ತಜ್ಞರು ತೆಗಳಿದರು. ಸಂಗೀತ ಹೇಳಿಕೊಟ್ಟ ಗುರು ದಿಯೋಧರರೂ ಟೀಕಿಸಿದರು. ಯಾವುದಕ್ಕೂ ಹಿಂಜರಿಯದ ಗಂಧರ್ವರು ಹೊಸ ರಾಗಗಳನ್ನು ಹರಿಬಿಟ್ಟರು. ಜನರು ರಾಗ ತಾಳಗಳ ಏಳುಬೀಳುಗಳೊಂದಿಗೆ ಹುಚ್ಚೆದ್ದು ಕುಣಿದರು. ಜನಪ್ರಿಯತೆ ಮತ್ತೂ ಹೆಚ್ಚಿತು. ಕೊನೆಗೆ ಟೀಕಿಸಿದವರೂ ತಲೆದೂಗಿದರು.

***

ಇದು ಕುಮಾರ ಗಂಧರ್ವರ ಮಹಾಯಾನದಂಥ ಬದುಕಿನ ಕತೆ. ಈ ಕತೆಯನ್ನು ಬಿಚ್ಚಿಡುವ 78 ನಿಮಿಷಗಳ 'ಹಾನ್ಸ್ ಅಕೇಲಾ' ಎಂಬ ಹಿಂದಿ ಸಾಕ್ಷ್ಯಚಿತ್ರವನ್ನು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಇತ್ತೀಚೆಗೆ ಪ್ರದರ್ಶಿಸಲಾಯಿತು. ಸಂಗೀತದ ಒಳ–ಹೊರಗಿನ ಮಹತ್ವದ ಮಾಹಿತಿ ನೀಡುವ ಈ ಚಿತ್ರವನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರ ವಿಭಾಗದ ವತಿಯಿಂದ ನಿರ್ಮಿಸಲಾಗಿದ್ದು, ಖ್ಯಾತ ನಿರ್ದೇಶಕ ಜಬ್ಬರ್ ಪಟೇಲ್ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.