ADVERTISEMENT

ಸಿಮೆಂಟ್‌ನಲ್ಲಿ ಅರಳಿದ ‘ಮಹಾತ್ಮ’

ಅನುಪಮಾ ಫಾಸಿ
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST

ಯಾವುದೋ ವಿಚಾರದಲ್ಲಿ ಮಗ್ನವಾಗಿದ್ದ ಮಂದಸ್ಮಿತ ಗಾಂಧಿ, ತನ್ಮಯತೆಯಿಂದ ಚರಕದಲ್ಲಿ ನೂಲು ತೆಗೆಯುತ್ತಿದ್ದ ಗಾಂಧಿ, ಕೈಯಲ್ಲಿ ಕೋಲು ಹಿಡಿದು ದಂಡಿ ಯಾತ್ರೆಗೆ ಹೊರಟ ಗಾಂಧಿ...
ಹೀಗೆ ಮಹಾತ್ಮ ಗಾಂಧೀಜಿ ಅವರ ಅನೇಕ ರೂಪಗಳು, ಅವರ ಜೀವನದ ಕೆಲ ಭಾಗಗಳು ಇಲ್ಲಿ ಅನಾವರಣಗೊಂಡಿವೆ. ಗಾಂಧೀಜಿ ಅವರ ಜೀವನವನ್ನು ಶಿಲ್ಪದಲ್ಲಿ ತೆರೆದಿಡುವ ಪ್ರಯತ್ನ ನಗರದ ಗಾಂಧಿ ಭವನದಲ್ಲಿ ನಡೆಯುತ್ತಿದೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಸಂಯೋಜನೆಯೊಂದಿಗೆ  ಗಾಂಧಿ ಭವನದಲ್ಲಿ ನಡೆಯುತ್ತಿರುವ ‘ಮಹಾತ್ಮ ಗಾಂಧಿ ಸಿಮೆಂಟ್‌ ಶಿಲ್ಪಕಲಾ ಶಿಬಿರ’ದಲ್ಲಿ ಬಹುಮುಖಿ ಮಹಾತ್ಮರು ಒಡಮೂಡುತ್ತಿದ್ದಾರೆ.

‘ಗಾಂಧಿ ಭವನದಲ್ಲಿ ಎಲ್ಲ ಕಡೆಯೂ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸಬೇಕು.  ಇಂದು ಮರೆತು ಹೋಗಿರುವ ಗಾಂಧೀಜಿಯ ಸಂದೇಶಗಳನ್ನು ಮತ್ತೆ ನೆನಪಿಸಬೇಕು. ಇದಕ್ಕಾಗಿ ಮಹಾತ್ಮ ಗಾಂಧಿಯ ಈ ಶಿಲ್ಪವನದ ಪ್ರಯತ್ನ’ ಎನ್ನುತ್ತಾರೆ ಶಿಬಿರದ ಸಂಚಾಲಕ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ವೈ.ಕುಮಾರ್‌.

‘ಗಾಂಧೀಜಿಯ ಪ್ರತಿಮೆಗಳ ಮೂಲಕ ಜನಸಾಮಾನ್ಯರಿಗೆ ಹಾಗೂ ಮುಖ್ಯವಾಗಿ ಮಕ್ಕಳಿಗೆ ಅವರ ತತ್ವಾದರ್ಶಗಳನ್ನು ತಿಳಿ ಹೇಳಬೇಕು ಮತ್ತು ಕಳೆದುಹೋದ ಮಾನವೀಯತೆಯನ್ನು ಮತ್ತೆ ಹುಡುಕಬೇಕೆಂಬ ತಹತಹದಿಂದ ಈ ಶಿಬಿರ ಏರ್ಪಡಿಸಲಾಗಿದೆ’ ಎಂದು ಶಿಬಿರದ ಆಶಯವನ್ನು ಹೇಳಿಕೊಂಡರು ಅವರು.

‘ಇನ್ನು ಸ್ವಲ್ಪ ದಿನಗಳು ಕಳೆದ ಮೇಲೆ ಗಾಂಧೀಜಿ ಹೇಗಿದ್ದರು ಎನ್ನುವ ಕಲ್ಪನೆಯೇ ಜನಮಾನಸದಿಂದ ಮಾಸಿ ಹೋಗುವ ಸಂದರ್ಭವಿದೆ. ಹೀಗಾಗಿ ನಮ್ಮ ಮುಂದಿನ ಪೀಳಿಗೆಗೆ, ನಮ್ಮ ಮಕ್ಕಳಿಗೆ ನಮ್ಮ ದಿವ್ಯ ಭಾರತದಲ್ಲಿ ಇಂತಹ ಮಹಾತ್ಮನೊಬ್ಬ ಜನ್ಮ ತಳೆದಿದ್ದ ಎಂಬುದನ್ನು ಹೇಳಿಕೊಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ಶಿಬಿರವು ಸೆ.12ರಂದು ಆರಂಭವಾಗಿದೆ. ಸೆ.26ರಂದು ಮುಕ್ತಾಯವಾಗುತ್ತದೆ. ಆಗ ಶಿಲ್ಪಗಳ ಅನಾವರಣ ಕಾರ್ಯಕ್ರಮ ನಡೆಯಲಿದೆ. ಎಲ್ಲ ಪ್ರತಿಮೆಗಳ ತಯಾರಿಕೆಗೂ ಸಿಮೆಂಟ್‌ ಬಳಸಲಾಗುತ್ತಿದೆ.

ಶಿಲ್ಪ ಪ್ರತಿಮೆಗಳು
ಇಲ್ಲಿ ಮುಖ್ಯವಾಗಿ ದಂಡಿ ಸತ್ಯಾಗ್ರಹಕ್ಕೆ ಹೊರಟ ಗಾಂಧೀಜಿ, ಚರಕವನ್ನು ನೂಲುತ್ತಿರುವ ಗಾಂಧಿ, ಗಾಂಧೀಜಿಯ ಉಬ್ಬು ಶಿಲ್ಪ, ಗಾಂಧೀಜಿ ಅವರ ಮಕ್ಕಳ ಪ್ರೇಮ ತೋರಿಸುವ ಗಾಂಧೀಜಿ ಮತ್ತು ಮಗುವಿನ ಶಿಲ್ಪ, ಯೋಚಿಸುತ್ತ ಕುಳಿತಿರುವ ಗಾಂಧೀಜಿ, ವಿಶ್ವಕ್ಕೆ ಸಂದೇಶ ನೀಡಲು ಹೊರಟ ಗಾಂಧೀಜಿ, ಪುಸ್ತಕವನ್ನು ಓದುತ್ತಿರುವ ಗಾಂಧೀಜಿ, ಮೊಮ್ಮಗನೊಂದಿಗಿನ ಗಾಂಧೀಜಿ ಶಿಲ್ಪಗಳು ಸೇರಿದಂತೆ ಒಟ್ಟು 30 ಪ್ರತಿಮೆಗಳು ಗಾಂಧಿಭವನದಲ್ಲಿ ಕಂಗೊಳಿಸಲಿವೆ.

ಕಲಾವಿದರು : ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಗುಲ್ಬರ್ಗ, ಧಾರವಾಡ, ಹೊಸಪೇಟೆ, ರಾಯಚೂರು, ಚಿಕ್ಕಮಗಳೂರು  ಹೀಗೆ ಬೇರೆ ಜಿಲ್ಲೆಗಳಿಂದ 14 ಹಿರಿಯ ಶಿಲ್ಪಿಗಳು ಹಾಗೂ 15 ಸಹಾಯಕ ಶಿಲ್ಪಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

‘ಗಾಂಧಿ ಭವನದಲ್ಲಿ ಗಾಂಧೀಜಿಯ ಶಿಲ್ಪವನ್ನು ತಯಾರಿಸಲು ನನಗೆ ಹೆಮ್ಮೆಯಾಗುತ್ತಿದೆ. ನನಗೆ ಇದೊಂದು ಹೊಸ ಅನುಭವ. ಗಾಂಧೀಜಿಯನ್ನು ಮತ್ತೆ ನೆನಪಿಸುವ ಕಾರ್ಯದಲ್ಲಿ ನಮ್ಮ ಕಿರು ಕಾಣಿಕೆ ಇದು’ ಎಂದು ಬಳ್ಳಾರಿ ಜಿಲ್ಲೆಯಿಂದ ಬಂದಿರುವ ಶಿಲ್ಪ ಕಲಾವಿದ ಡಿ.ಹುಸೇನ್‌ ಸಂತಸ ಹಂಚಿಕೊಂಡರು.

‘ಗಾಂಧೀಜಿ ಮಹಾತ್ಮರು. ಅವರ ಹೆಸರಿನಲ್ಲಿಯೇ ಏನೋ ಶಕ್ತಿಯಿದೆ. ಅವರ ಹೆಸರಿನ ಉಚ್ಚಾರಣೆಯಿಂದಲೇ ನಮಗೆ ಜೀವಸಂಚಲನವಾಗುತ್ತದೆ. ಆದರೆ, ಅಂತಹ ಮಹಾತ್ಮನನ್ನೇ ನಾವು ಇಂದು ಮರೆತಿದ್ದೇವೆ. ಹೀಗಾಗಿ, ಗಾಂಧೀಜಿಯ ತತ್ವಾದರ್ಶಗಳನ್ನು ನೆನಪಿಸಲು ಗಾಂಧಿ ಸ್ಮಾರಕ ಭವನದಲ್ಲಿ ಗಾಂಧೀಜಿ ಅವರ ಜೀವನದ ವಿವಿಧ ಭಾಗಗಳನ್ನು ತಿಳಿಸುವ ಶಿಲ್ಪಗಳನ್ನು ಅನಾವರಣ ಮಾಡುತ್ತಿರುವುದು ಸಂತಸ ನೀಡಿದೆ’ ಎಂದವರು ಧಾರವಾಡದ ಕಲಾವಿದ ಕೆ.ಎಂ.ಸಾಬಣ್ಣವರ್‌.

‘ಮಹಾತ್ಮ ಸಾರಿದ ಅಹಿಂಸೆ, ಶಾಂತಿಯ ಸಂದೇಶಗಳು ಇಂದು ಎಲ್ಲೋ ಮರೆಯಾಗುತ್ತಿವೆ. ಅವುಗಳನ್ನು ಮತ್ತೆ ಜನರಿಗೆ ನೆನಪಿಸುವ ಕಾರ್ಯವಾಗುತ್ತಿದೆ. ಇದರಲ್ಲಿ ನನ್ನದು ಒಂದು ಅಳಿಲು ಸೇವೆಯಾಗಿದೆ. ಜೀವನ ಸಾರ್ಥಕವಾಯಿತು ಎಂದೆನಿಸುತ್ತಿದೆ’ ಎಂದು ಗುಲ್ಬರ್ಗ ಜಿಲ್ಲೆಯ ಕಲಾವಿದ ಎಚ್‌.ಬಾಬುರಾವ್‌ ಹೇಳಿದರು.

ತೆರೆದ ಸಂಗ್ರಹಾಲಯ
ಇಂದಿನ ನಿರುತ್ಸಾಹಿ ಜಗತ್ತಿನಲ್ಲಿ ಗಾಂಧೀಜಿ­ಯು ಜೀವಕಳೆಯನ್ನು ತುಂಬಬಲ್ಲರು ಎಂಬ ವಿಶ್ವಾಸವಿದೆ. ಹೀಗಾಗಿ, ಇಲ್ಲಿ ಗಾಂಧೀಜಿಯ ಪ್ರತಿಯೊಂದು ಶಿಲ್ಪ ಕ್ರಿಯಾಶೀಲ­ವಾಗಿದೆ ಮತ್ತು ಸಂದೇಶವನ್ನು ನೀಡುತ್ತದೆ. ಇದು ತೆರೆದ ಸಂಗ್ರ­ಹಾ­ಲಯ. ಮಕ್ಕಳು, ಜನಸಾಮಾನ್ಯರು, ವೃದ್ಧರು ಯಾರು ಬೇಕಾ­ದರೂ ಗಾಂಧಿ ಭವನಕ್ಕೆ ಬಂದು ಈ ಪ್ರತಿಮೆಗಳನ್ನು ನೋಡಬಹುದು. ಗಾಂಧೀಜಿ ಅವರ ಸಂದೇಶಗಳನ್ನು ತಿಳಿಯಬಹುದು.
–ಹೊ. ಶ್ರೀನಿವಾಸಯ್ಯ,
ಅಧ್ಯಕ್ಷರು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.