ADVERTISEMENT

‘ಸಿರಿಧಾನ್ಯಗಳಿಗೂ ರಾಜಧಾನಿಯಾಗಬೇಕು’

ಹೇಮಾ ವೆಂಕಟ್
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
‘ಸಿರಿಧಾನ್ಯಗಳಿಗೂ  ರಾಜಧಾನಿಯಾಗಬೇಕು’
‘ಸಿರಿಧಾನ್ಯಗಳಿಗೂ ರಾಜಧಾನಿಯಾಗಬೇಕು’   

*ಬೆಂಗಳೂರಿನಲ್ಲೇಕೆ ಸಿರಿಧಾನ್ಯ ವಾಣಿಜ್ಯ ಮೇಳ?
ನಾವು ನಾಲ್ಕು ವರ್ಷಗಳಿಂದ ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕನಿಷ್ಠ ಬೆಂಬಲ ಬೆಲೆಯ ಜತೆ ಬೋನಸ್‌ ಬೆಲೆ ನೀಡಿ ಖರೀದಿಸುತ್ತಿದ್ದೇವೆ. ಸಬ್ಸಿಡಿಯನ್ನೂ ಕೊಡುತ್ತಿದ್ದೇವೆ. ಆದರೂ ನಿರೀಕ್ಷಿತ ಫಲ ಸಿಕ್ಕಿಲ್ಲ.

ಬೆಳೆಗೆ ಸರಿಯಾದ ಮಾರುಕಟ್ಟೆ ಮತ್ತು ಬೆಲೆ ಸಿಗದೇ ಉತ್ಪಾದನೆಗೆ ರೈತರು ಮುಂದಾಗುವುದಿಲ್ಲ. ಹಾಗಾಗಿ ನಗರದಲ್ಲಿ ಮಾರುಕಟ್ಟೆ ಸೃಷ್ಟಿಸಬೇಕು, ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ನಗರವನ್ನು ಗುರಿಯಾಗಿಟ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆವು. ಅದು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಅದರ ಮುಂದುವರಿದ ಭಾಗವಾಗಿ ವಾಣಿಜ್ಯ ಮೇಳ ಆಯೋಜಿಸಲಾಗಿದೆ.
ಬೆಂಗಳೂರು  ಐಟಿ ರಾಜಧಾನಿ  ಎನಿಸಿಕೊಂಡಂತೆ, ಸಿರಿಧಾನ್ಯಗಳಿಗೂ ರಾಜಧಾನಿಯಾಗಬೇಕೆಂಬುದು ನನ್ನ ಕನಸು.

*ಮಾರುಕಟ್ಟೆ ಸೃಷ್ಟಿಸಲು ಏನು ಕ್ರಮ ಕೈಗೊಂಡಿದ್ದೀರಿ?
ತಮ್ಮ ಬೆಳೆಗೆ ಬೆಲೆ ಸಿಕ್ಕರೆ ಉಳಿದೆಲ್ಲವನ್ನೂ ನಮ್ಮ ರೈತರೇ ಮಾಡುತ್ತಾರೆ. ಸಿರಿಧಾನ್ಯ ಬಳಕೆ ಹೆಚ್ಚಬೇಕು. ಆ ನಿಟ್ಟಿನಲ್ಲಿ ಪ್ರಮುಖ ಆಹಾರ ಉತ್ಪಾದನಾ ಕಂಪೆನಿಗಳ ಜೊತೆ ಸಭೆ ನಡೆಸಲಾಗಿದೆ. ಎಂಟಿಆರ್‌, ಐಟಿಸಿ ಹೋಟೆಲ್‌ನವರು ಉತ್ಸಾಹದಲ್ಲಿದ್ದಾರೆ. ಅಲ್ಲಿನ ಬಾಣಸಿಗರಿಗೆ ಕಾರ್ಯಾಗಾರ ನಡೆಸುವ ಬಗ್ಗೆಯೂ ಮಾತುಕತೆ ನಡೆದಿದೆ.

ADVERTISEMENT

*ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಹೇಗಿದೆ?
ಈ ವರ್ಷ ಐದಾರು ಕಡೆ ಸಿರಿಧಾನ್ಯಮೇಳ ನಡೆಸಿದ್ದೇವೆ. ಹತ್ತರಿಂದ ಇಪ್ಪತ್ತು ಸಾವಿರ ಜನ ಮೇಳಗಳಿಗೆ ಭೇಟಿ ನೀಡಿದ್ದಾರೆ.   ಮೆಟ್ರೊ ಕ್ಯಾಷ್‌ ಅಂಡ್‌ ಕ್ಯಾರಿ ರಿಟೇಲ್‌ ಮಳಿಗೆಗಳಲ್ಲಿಯೂ ಐದಾರು ತಿಂಗಳಿಂದ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ ಎಂಬ ಮಾಹಿತಿ ಬಂದಿದೆ. ರಿಟೇಲ್‌ ಮಾರಾಟಗಾರರು ಸಿರಿಧಾನ್ಯಗಳಿಗಾಗಿ ಎಪಿಎಂಸಿಗಳನ್ನು  ಸಂಪರ್ಕಿಸುತ್ತಿದ್ದಾರೆ. 

*ನಗರದ ಜನರಿಗೆ ಸಿರಿಧಾನ್ಯಗಳ ರುಚಿ ಹತ್ತಿಸಲು ಏನು ಮಾಡಬಹುದು?
ಸಿರಿಧಾನ್ಯಗಳಿಂದ ಈಗ ಎಲ್ಲಾ ಬಗೆಯ ಖಾದ್ಯಗಳನ್ನೂ  ತಯಾರಿಸುತ್ತಿದ್ದಾರೆ. ರಾಗಿಯಿಂದ ದೋಸೆ, ಇಡ್ಲಿ, ಬಿಸ್ಕತ್ತು, ಕುಕೀಸ್‌, ಪಿಜಾ ತಯಾರಿಸುತ್ತಾರೆ. ಗೋಧಿ, ನವಣೆಯಿಂದ ಬಿಸಿಬೇಳೆ ಬಾತ್‌, ಮೊಸರನ್ನ, ವಾಂಗಿಬಾತ್‌ ಹೀಗೆ ಎಲ್ಲವೂ  ಸಾಧ್ಯ. ಮೌಂಟ್‌ ಕಾರ್ಮೆಲ್‌ ಕಾಲೇಜು, ವಿಎಚ್‌ಡಿ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫುಡ್‌ ಸೈನ್ಸ್‌ನವರು ನೂರಾರು ರೆಸಿಪಿಗಳನ್ನು ಸಿದ್ಧಪಡಿಸಿದ್ದಾರೆ. ಈ ರೆಸಿಪಿಗಳ ಪುಸ್ತಕವನ್ನು ಶೇ 50 ಕಡಿಮೆ ದರದಲ್ಲಿ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಇವು ಸಿರಿಧಾನ್ಯಪ್ರಿಯರಿಗೆ  ಉಪಯುಕ್ತವಾಗಲಿವೆ.

*ಇಂದಿರಾ ಕ್ಯಾಂಟೀನ್‌ನಲ್ಲಿ ಸಿರಿಧಾನ್ಯ ತಿಂಡಿಗಳನ್ನು ನೀಡುವ ಯೋಜನೆ ಇದೆಯೇ?
ಸದ್ಯ ಆ ಯೋಚನೆ ಇಲ್ಲ. ಯಾಕೆಂದರೆ ಬೇಡಿಕೆಗೆ ಅನುಗುಣವಾಗಿ ಎಲ್ಲ ಧಾನ್ಯಗಳ ಪೂರೈಕೆಗೆ ವ್ಯವಸ್ಥೆ ಆಗಿಲ್ಲ. ಒಂದುವೇಳೆ ಸಿರಿಧಾನ್ಯದ ತಿಂಡಿ ಸಿಗುತ್ತೆ ಅಂತ ಬೋರ್ಡ್‌ ಹಾಕಿದರೆ ಪ್ರತಿದಿನವೂ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅದೇ ದೊಡ್ಡ ಸುದ್ದಿಯಾಗುತ್ತದೆ. ಮೊದಲು ಬೇಡಿಕೆಗೆ ಸರಿಯಾಗಿ ಉತ್ಪಾದನೆಯಾಗಬೇಕು. ಸಿರಿಧಾನ್ಯ ಬೆಳೆಯುವ ಪ್ರದೇಶ ವಿಸ್ತರಿಸಬೇಕು ಎಂಬುದು ನಮ್ಮ ಗುರಿ.

*ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು  ಏನೆಲ್ಲ ಕ್ರಮ ಕೈಗೊಂಡಿದ್ದೀರಿ?
ಡಯಟೀಷಿಯನ್‌, ಬಾಣಸಿಗರು, ಆರೋಗ್ಯ ಬರಹಗಾರರು, ಫುಡ್‌ ಬ್ಲಾಗರ್‌ಗಳಿಗೆ ಕಾರ್ಯಾಗಾರಗಳನ್ನು ಮಾಡಿದ್ದೇವೆ.  ಮುಂದೆ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸಲಿದ್ದೇವೆ. ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುವತ್ತ ಗಮನ ಹರಿಸಿದ್ದೇವೆ. ಮಾಧ್ಯಮಗಳಲ್ಲಿ ಸಿರಿಧಾನ್ಯ ಖಾದ್ಯಗಳ ರೆಸಿಪಿಗಳನ್ನು ಪರಿಚಯಿಸಲಿದ್ದೇವೆ.   

ಸಿರಿಧಾನ್ಯಗಳ ಬಗ್ಗೆ ಒಂದಿಷ್ಟು...
ರಾಗಿ, ನವಣೆ, ಆರ್ಕ, ಸಾಮೆ,ಊದಲು, ಹಾರಕ, ಬರಗು, ಜೋಳ ಮತ್ತು ಸಜ್ಜೆ ನಮ್ಮ ರಾಜ್ಯದಲ್ಲಿ ಬೆಳೆಯುವ ಪ್ರಮುಖ ಸಿರಿಧಾನ್ಯಗಳು. ಇವಕ್ಕೆ ಬರಗಾಲ ಸಹಿಸಿಕೊಳ್ಳುವ ಶಕ್ತಿ ಇದೆ. ಕಡಿಮೆ ನೀರು, ದಿಣ್ಣೆ ಭೂಮಿಯಲ್ಲಿಯೂ ಉತ್ತಮ ಇಳುವರಿ ನೀಡಬಲ್ಲವು. ಸಿರಿಧಾನ್ಯಗಳಲ್ಲಿ ನಾರಿನ ಅಂಶ ಹೆಚ್ಚು. ಸ್ವಲ್ಪವೇ ತಿಂದರೂ ಹಸಿವು ನೀಗುತ್ತದೆ. ಬೊಜ್ಜು ಕಡಿಮೆಯಾಗುತ್ತದೆ. ಹೃದಯದ ಕಾಯಿಲೆ, ರಕ್ತದೊತ್ತಡ, ಮಲಬದ್ಧತೆ, ಪಿತ್ತದ ಕಲ್ಲು, ಹೊಟ್ಟೆಹುಣ್ಣು, ಅಸ್ತಮಾ, ರಕ್ತಹೀನತೆ, ಮಧುಮೇಹ ತಡೆಯುತ್ತದೆ.

* ರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಏನೇನಿರುತ್ತದೆ?
ಇದು ರೈತರಿಗಾಗಿ ನಡೆಸುತ್ತಿರುವ ಮೇಳವಲ್ಲ. ವಾಣಿಜ್ಯ ಉದ್ದೇಶದ ಮೇಳ. ಸಾವಯವ ಸಿರಿಧಾನ್ಯ ಬೆಳೆಗಾರರು, 14  ಒಕ್ಕೂಟಗಳಿಂದ ಹದಿನೈದು ಸಾವಿರ ರೈತರು ಬರಲಿದ್ದಾರೆ. ಅವರಿಗೆ ರಿಟೇಲ್ ಕಂಪೆನಿಗಳ ಜೊತೆ ಸಂಪರ್ಕ ಸಾಧ್ಯವಾಗಲಿದೆ.

ಸುಮಾರು ನೂರು ಮಂದಿ ಸಿರಿಧಾನ್ಯ ತಜ್ಞರು ಭಾಗವಹಿಸಲಿದ್ದಾರೆ. ಪೌಷ್ಟಿಕಾಂಶ ತಜ್ಞರು ಆರೋಗ್ಯ ಮಾಹಿತಿ ನೀಡಲಿದ್ದಾರೆ. 250 ಕಂಪೆನಿಗಳು ಭಾಗವಹಿಸಲಿವೆ. ಸಿರಿಧಾನ್ಯಗಳ ಕುರಿತು ವಿಚಾರಸಂಕಿರಣ, ಕಾರ್ಯಾಗಾರ,  ಸಿರಿಧಾನ್ಯ ಖಾದ್ಯ ಸ್ಪರ್ಧೆಯೂ ಇರುತ್ತದೆ. ಖಾದ್ಯಗಳ ಪ್ರದರ್ಶನ ಇರುತ್ತದೆ.
(ಮಾಹಿತಿಗೆ:www.organics-millets.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.