ADVERTISEMENT

ಸೀರೆ ಉಡಲು ರೀತಾ ಪಾಠ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಸೀರೆ ಉಡಲು ರೀತಾ ಪಾಠ
ಸೀರೆ ಉಡಲು ರೀತಾ ಪಾಠ   

ಸೀರೆ ಉಡುವ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದ ದೆಹಲಿಯ ರೀತಾ ಕಪೂರ್‌ ಚಿಷ್ಟಿ ಎಲ್ಲೇ ಕಾರ್ಯಾಗಾರ ನಡೆಸಿದರೂ ಉತ್ತಮ ಸ್ಪಂದನ ಸಿಗುತ್ತದೆ. ಜಯನಗರದ ಮೂರನೇ ಬ್ಲಾಕ್‌ನಲ್ಲಿರುವ ‘ತನೈರಾ’ ಮಳಿಗೆಯಲ್ಲಿ ಮಂಗಳವಾರ ಮತ್ತು ಬುಧವಾರ ನಡೆದ ಕಾರ್ಯಾಗಾರ, ಬೆಂಗಳೂರಿನಲ್ಲಿಯೂ ರೀತಾ ಅಭಿಮಾನಿಗಳಿದ್ದಾರೆ ಎಂಬುದನ್ನು ಸಾಬೀತುಪಡಿಸಿತು.

ಮಳಿಗೆಯ ಮೇಲ್ಮಹಡಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಹತ್ತಾರು ಬಗೆಯಲ್ಲಿ ಸೀರೆ ಉಡಿಸಿ ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಟ್ಟರು. ಅಲ್ಲದೆ, ಯಾವ ರಾಜ್ಯದಲ್ಲಿ ಯಾವ ಬಗೆಯ ಸೀರೆಗಳ ನೇಯ್ಗೆ ಹೇಗಿರುತ್ತದೆ ಎಂಬ ಮಾಹಿತಿಯನ್ನೂ ನೀಡಿದರು. ‘ತನೈರಾ’ ಸಂಗ್ರಹದಲ್ಲಿ ಲಭ್ಯವಿರುವ ಸೀರೆಗಳ ಕುರಿತೂ ರೀತಾ ವಿವರ ನೀಡಿದರು.

ಫ್ಯಾಬ್ರಿಕ್‌ ಮತ್ತು ಟೆಕ್ಸ್‌ಟೈಲ್‌ ತಜ್ಞರೂ ಆಗಿರುವ ರೀತಾ, ನೂರಾರು ಶೈಲಿಯಲ್ಲಿ ಸೀರೆ ಉಡುವುದನ್ನು ಜಗತ್ತಿನೆಲ್ಲೆಡೆ ಹೆಣ್ಣುಮಕ್ಕಳಿಗೆ ತೋರಿಸಿಕೊಟ್ಟವರು. ದೆಹಲಿಯಲ್ಲಿ ಅವರ ‘ದಿ ಸ್ಯಾರಿ ಸ್ಕೂಲ್‌’, ಹೆಸರಿನಂತೆ ಕಾರ್ಯವಿಧಾನದಿಂದಲೂ ವಿಶಿಷ್ಟವಾದುದು.

ADVERTISEMENT

ಅವರ ಪಾಲಿಗೆ ಸೀರೆ ಎಂಬುದು ಆರು ಮೀಟರ್‌, ಒಂಬತ್ತು ಮೊಳ, ಹದಿನಾರು ಮೊಳಗಳ ಫ್ಯಾಬ್ರಿಕ್‌ ಅಷ್ಟೇ ಅಲ್ಲ. ಅದೊಂದು ಉಡುಪು ಮಾತ್ರವಲ್ಲ. ಪರಂಪರೆ ಮತ್ತು ವಸ್ತ್ರ ಸಂಸ್ಕೃತಿಯ ಸಮೀಕರಣ. ಒಂದೊಂದು ರಾಜ್ಯದಲ್ಲೂ ಹೆಣ್ಣು ಮಕ್ಕಳು ಸೀರೆ ಉಡುವ ವಿಧಾನ ಆ ನೆಲದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕರ್ನಾಟಕದಲ್ಲಿ ಕೊಡಗಿನವರ ಸಾಂಪ್ರದಾಯಿಕ ಶೈಲಿಯನ್ನು ರೀತಾ ತಮ್ಮ ‘ದಿ ಸ್ಯಾರಿ ಸ್ಕೂಲ್‌’ನಲ್ಲಿ ದಾಖಲಿಸಿದ್ದಾರೆ.

‘ಸೀರೆ ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ’ ಎಂದು ಯಾರಾದರೂ ಮೆಚ್ಚಿ ನುಡಿದಿದ್ದರೆ ನಿಮ್ಮ ಮೈಮಾಟಕ್ಕೆ ಒಪ್ಪುವಂತೆ ಸೀರೆ ಉಟ್ಟಿದ್ದೀರಿ ಎಂದೇ ಅರ್ಥ. ಹತ್ತಿ ಸೀರೆ, ರೇಷ್ಮೆ ಸೀರೆ, ಖಾದಿ ಅಥವಾ ಪ್ರಾದೇಶಿಕ ಮಹತ್ವವಿರುವ ಸೀರೆಗಳನ್ನು ಆಯಾ ಪ್ರದೇಶಕ್ಕೆ ತಕ್ಕುದಾಗಿ ಉಟ್ಟರೆ ಚಂದ ಎಂಬುದು ಅವರ ಅಭಿಪ್ರಾಯ. ಬೇರೆ ಬೇರೆ ರೀತಿಯಲ್ಲಿ ಸೀರೆ ಉಡುವುದನ್ನು ಕಲಿತುಕೊಳ್ಳಲು ಹೆಣ್ಣುಮಕ್ಕಳಲ್ಲಿ ಈಗ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂಬುದು ಅವರ ಮಾತು.

‘ಈಗ ಪ್ರಚಲಿತದಲ್ಲಿರುವ ಸೀರೆ ಉಡುವ ಶೈಲಿಗಳು ಕೇವಲ 200 ವರ್ಷಗಳಷ್ಟು ಹಳೆಯವು. ಆದರೆ ಸೀರೆಗೆ 4,000 ವರ್ಷಗಳ ಇತಿಹಾಸವಿದೆ. ಹಾಗಾಗಿ ಸಾಂಪ್ರದಾಯಿಕ ಶೈಲಿಗಳನ್ನು ಬೆಂಗಳೂರಿನ ಮಹಿಳೆಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಯಿತು’ ಎಂದು ‘ತನೈರಾ’ದ ಬಿಸಿನೆಸ್‌ ಹೆಡ್‌ ಶ್ಯಾಮಲಾ ರಮಣನ್‌ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.