ADVERTISEMENT

‘ಸುಖಿ’ ಸಂಗೀತ ಲಹರಿ

ನಗರದ ಅತಿಥಿ

ರಮೇಶ ಕೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಸುಖ್ವಿಂದರ್‌ ಸಿಂಗ್‌
ಸುಖ್ವಿಂದರ್‌ ಸಿಂಗ್‌   

ಬಾಲಿವುಡ್‌ನ ಬೇಡಿಕೆಯ ಗಾಯಕ ಸುಖ್ವಿಂದರ್‌ ಸಿಂಗ್‌ ಕನ್ನಡದ ಚಿತ್ರ ‘ರಂಕಾಲ್‌ ರಾಟೆ’ಗೆ ಒಂದು ಗೀತೆ ಹಾಡಿದ್ದಾರೆ. ಇದು ‘ಚಕ್‌ ದೇ ಇಂಡಿಯಾ’  ಟೈಟಲ್‌ ಹಾಡು ನೆನಪು ಮಾಡುತ್ತದೆಯಂತೆ.

ಶಾರುಕ್‌ ಖಾನ್‌ ನಟನೆಯ ‘ದಿಲ್‌ ಸೆ’ ಚಿತ್ರದ ‘ಚಯ್ಯ ಚಯ್ಯ’ ಗೀತೆಯ ಮೂಲಕ ದೇಶದಾದ್ಯಂತ ಮನೆಮಾತಾದ ಗಾಯಕ ಸುಖ್ವಿಂದರ್‌ ಸಿಂಗ್‌ (ಸುಖಿ).  ಇದೇ ಗೀತೆಗೆ 1999ರಲ್ಲಿ ಶ್ರೇಷ್ಠ ಹಿನ್ನೆಲೆ ಗಾಯಕ  ‘ಫಿಲ್ಮ್‌ಫೇರ್‌ ಪ್ರಶಸ್ತಿ’ ಮುಡಿಗೇರಿಸಿಕೊಂಡವರು. ಕನ್ನಡದಲ್ಲಿ ‘ಹುಡುಗರು’ ಚಿತ್ರದ ‘ಏನ್‌ ಚಂದಾನೇ ಹುಡುಗಿ’, ‘ಸಂತೆಯಲ್ಲಿ ನಿಂತ ಕಬೀರ’ದ ‘ಲೀಲಾಮಯನ ಲೀಲೆಯು ಮೂರು ಲೋಕಕು ಮಿಗಿಲು...’ ಸೇರಿದಂತೆ ಹಲವು ಗೀತೆಗಳಿಗೆ ದನಿಯಾಗಿದ್ದಾರೆ.
ವೈಟ್‌ಫೀಲ್ಡ್‌ನ ಫೀನಿಕ್ಸ್‌ ಮಾರ್ಕೆಟ್‌ಸಿಟಿಗೆ ಈಚೆಗೆ ಸಂಗೀತ ಕಛೇರಿಗಾಗಿ ಬಂದಿದ್ದ ಸುಖ್ವಿಂದರ್‌ ಸಿಂಗ್‌ ಅವರು ‘ಮೆಟ್ರೊ’ದೊಂದಿಗೆ ಮಾತನಾಡಿದರು.

*‘ರಂಕಲ್‌ ರಾಟೆ’ ಚಿತ್ರದ ಗೀತೆಯ ಬಗ್ಗೆ ಹೇಳಿ?
‘ಚಕ್‌ ದೇ ಇಂಡಿಯಾ’ ನಂತರ ಇದು ಕ್ರೀಡಾಗೀತೆಯಾಗಲಿದೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲೇ ಪ್ರಸಿದ್ಧ ಗೀತೆಯಾಗುತ್ತದೆ. ಈಗಾಗಲೇ ಹಾಡಿನ ರೆಕಾರ್ಡಿಂಗ್‌ ಮುಗಿದಿದ್ದು,  ಚಿತ್ರೀಕರಣ ಬಾಕಿಯಿದೆ. ಹಾಡಿನ ವಸ್ತು ಚೆನ್ನಾಗಿದೆ, ಕ್ರೀಡಾಂಗಣದಲ್ಲಿ  ಹಾಡಿನ ಚಿತ್ರೀಕರಣವಿದೆ. ಕ್ರೀಡಾಭಿಮಾನದ ಚಿತ್ರವಿದು. ನಿರ್ದೇಶಕ ಗೋಪಿ ಕೆರೂರು ಅವರು ಗಾಯನ ಮೆಚ್ಚಿಕೊಂಡಿದ್ದಾರೆ, ಈ ಹಾಡು ಇತಿಹಾಸ ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ.

*ಪಂಜಾಬಿ ಜಾನಪದ ಬೀಟ್‌ಗಳನ್ನು ಬಾಲಿವುಡ್‌ಗೆ ತರುವಾಗ ಏನು ಸಮಸ್ಯೆಗಳು ಎದುರಾದವು?
ಯಾವುದೇ ಹಾಡುಗಳಿಗೆ ಭಾಷೆ ಮುಖ್ಯವಲ್ಲ, ಭಾವ ಮುಖ್ಯ. ನಾವು ಮನರಂಜನೆ ಕ್ಷೇತ್ರದಲ್ಲಿದ್ದೇವೆ, ಜನ ಇಷ್ಟಪಡುವಂಥ ಹಾಡುಗಳನ್ನು ಕೊಡಬೇಕು ಅಷ್ಟೇ. ನನ್ನ ಮೊದಲ ಆದ್ಯತೆ ಮನರಂಜನೆ ನೀಡುವುದು. ಕನ್ನಡ, ಮಲಯಾಳ, ತುಳು ಮುಖ್ಯವಲ್ಲ. ಯಾವುದೇ ಗೀತೆಯಾದರೂ ಅಂತಿಮವಾಗಿ ಭಾರತೀಯ ಹಾಡು ಎಂದೇ ಗುರುತಿಸಬೇಕು. ವಿದೇಶದಲ್ಲಿ ಪಂಜಾಬಿ ಜಾನಪದ ಗೀತೆ ಹೇಳಿದರೂ ಅದು ಭಾರತೀಯ ಹಾಡಾಗುತ್ತದೆ. ಬಾಲಿವುಡ್‌ನಲ್ಲಿ ಎಲ್ಲವೂ ಪಂಜಾಬಿ ಹಾಡುಗಳಲ್ಲ.

*ನೀವು ಸಿನಿಮಾಗೆ ಹಾಡುವ ಮುಂಚೆ ಏನೆಲ್ಲಾ ತಯಾರಿ ಮಾಡಿಕೊಳ್ಳುತ್ತೀರಿ?
ಚಿತ್ರದ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ. ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಅವರು ಹೇಳುವುದನ್ನು ಕೇಳಿಸಿ ಕೊಳ್ಳುತ್ತೇನೆ, ಕೊನೆಗೆ ಹಾಡುತ್ತೇನೆ.

*ಪ್ರಪಂಚ ಪ್ರವಾಸ ಮಾಡಿದ್ದರ ಅನುಭವ ಹೇಗಿತ್ತು?
ಹಣ ಗಳಿಕೆಗಾಗಿ ಪ್ರಪಂಚ ಸುತ್ತಲಿಲ್ಲ, ಕಲಿಯಲು ಹೋಗಿದ್ದು. ವೃತ್ತಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ  ಹೋಗಿದ್ದು, ಆಸಕ್ತಿದಾಯಕವಾಗಿತ್ತು, ಷಿಕಾಗೊಗೆ ಹೋದಾಗ, ಅಲ್ಲಿ ಕೆಲವರು ನನ್ನನ್ನು ಗುರುತಿಸಿದರು, ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿರಲಿಲ್ಲ. ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದೆ. ವಿವಿಧ ಪ್ರದೇಶಗಳ ಸಂಗೀತ, ಸಂಸ್ಕೃತಿ ಬಗ್ಗೆ ತಿಳಿದುಕೊಂಡೆ. ಇನ್ನೊಂದು ವಿಷಯ ಅಲ್ಲಿನ ಹುಡುಗಿಯರೂ ಚೆನ್ನಾಗಿದ್ದರು.  ಸುಂದರ ಹುಡುಗಿಯರು ಇದ್ದಾಗ ಕಲಿಕೆ ಬೇಸರವಾಗುವುದು ಉಂಟೆ?

*ಶಾರುಕ್‌ ಖಾನ್‌ ಸಿನಿಮಾಗಳಲ್ಲಿ ಹೆಚ್ಚು ಹಾಡಿದ್ದೀರಿ, ಅವರೊಂದಿಗಿನ ಅನುಭವ ಹೇಳಿ?
‘ದಿಲ್‌ ಸೆ’ ಸಿನಿಮಾದ ಮೂಲಕ ನನ್ನ ವೃತ್ತಿ ಬದುಕು ಆರಂಭಿಸಿದೆ. ಇತ್ತೀಚಿನ ‘ರಯೀಸ್‌’ವರೆಗೂ ಹಾಡಿದ್ದೇನೆ. ಅವರ ಪರಿಶ್ರಮ ಮೆಚ್ಚಲೇಬೇಕು. ಸಲ್ಮಾನ್‌, ಅಜಯ್‌ ದೇವಗನ್‌, ರಣವೀರ್‌ ಸಿಂಗ್‌ ಸಿನಿಮಾಗಳಿಗೂ ಹಾಡಿದ್ದೇನೆ. ನಟರಿಗಾಗಿ ಹಾಡುವುದಿಲ್ಲ, ಚಿತ್ರದ ಪಾತ್ರಗಳಿಗಾಗಿ ಹಾಡುತ್ತೇನೆ. ಶಾರುಕ್‌ ಖಾನ್‌ ಜೊತೆ ಹಾಡಿದಾಗಲೆಲ್ಲಾ ಮ್ಯಾಜಿಕ್‌ನಂತೆ ಅವುಗಳು ಯಶಸ್ವಿಯಾಗುತ್ತವೆ.

*ಕಲಾತ್ಮಕ ಹಾಗೂ ಕಮರ್ಷಿಯಲ್‌ ಚಿತ್ರಗಳಲ್ಲಿ ಹಾಡಿದ್ದೀರಿ, ಹೇಗನ್ನಿಸಿತು?
ಕಲಾತ್ಮಕ ಚಿತ್ರಗಳು ಬೋರ್ ಆಗುತ್ತವೆ. ಶೋಲೆ, ಚಕ್‌ ದೇ ಇಂಡಿಯಾ, ದಿಲ್‌ ಸೆ, ಥಾಲ್‌, ಡಿಡಿಎಲ್‌ಜೆ, ರಯೀಸ್‌.... ಸೇರಿದಂತೆ ಬಹಳಷ್ಟು ಚಿತ್ರಗಳು ಕಮರ್ಷಿಯಲ್‌ ಆದರೂ ಕಲಾತ್ಮಕ ಚಿತ್ರಗಳೇ. ನಾವು ಮನರಂಜನೆ ನೀಡಬೇಕು ಅಷ್ಟೇ. ಜನರಿಗೆ ಅರ್ಥವಾಗುವಂಥ ಸಿನಿಮಾ ನೀಡಬೇಕು. ಅಭಿವ್ಯಕ್ತಿಯೇ ಉತ್ತಮ ಭಾಷೆ. ಕರ್ಮಷಿಯಲ್‌ ಸಿನಿಮಾಗಳೂ ಕಲಾತ್ಮಕ ಚಿತ್ರಗಳಂತೇ ಇರುತ್ತವೆ. ದೀಪಾ ಮೆಹ್ತಾ ಅವರ ‘ವಾಟರ್‌’ ಸಿನಿಮಾಗೆ ಹಾಡನ್ನು ಬರೆದು, ಹಾಡಿದ್ದೇನೆ. ಆದರೆ ನಾನು ಕಮರ್ಷಿಯಲ್‌ ಚಿತ್ರದ ಸಂಗೀತ, ಮನರಂಜನೆ, ಸಾಹಸ ಸನ್ನಿವೇಶಗಳನ್ನು ಇಷ್ಟಪಡುತ್ತೇನೆ.

*ನೀವು ಸಂಗೀತ ಕಛೇರಿ ನೀಡುವ ಮುಂಚೆ ಏನೆಲ್ಲಾ ತಯಾರಿ ಮಾಡಿಕೊಳ್ಳುತ್ತೀರಾ?
ಎಲ್ಲಿಯೇ ಸಂಗೀತ ಕಛೇರಿ ನೀಡಿದರೂ ಪ್ಲಾನ್‌ ಮಾಡುವುದಿಲ್ಲ. ಮೊದಲನೇ ಹಾಡು ಯಾವುದು ಹೇಳಬೇಕು ಎಂಬುದನ್ನು ಮಾತ್ರ ನಿರ್ಧರಿಸಿರುತ್ತೇನೆ. ಮುಂದಿನ ಗೀತೆಗಳು ಅಭಿಮಾನಿಗಳ ಕೂಗಿನಲ್ಲೇ ಇರುತ್ತವೆ. ಅಲ್ಲಿಯೇ ಹಾಡಿ ರಂಜಿಸುತ್ತೇನೆ.

*ಪ್ರತಿದಿನ ಯೋಗ ಮಾಡುತ್ತೀರಂತೆ?
ಹೌದು, ಸತತ ಮೂರು ಗಂಟೆ ಹಾಡು ಹೇಳಿದ ನಂತರವೂ ನನ್ನ ಎನರ್ಜಿ ಹಾಗೆಯೇ ಇರುತ್ತದೆ. ಹೃದಯಬಡಿತ ಸಹಜವಾಗಿರುತ್ತದೆ. ಇದಕ್ಕೆ ಕಾರಣ ಯೋಗ. ಸದಾ ಉತ್ಸಾಹಿಯಾಗಿರಲು ನೆರವಾಗುತ್ತದೆ. ಬೆಳಿಗ್ಗೆ ಸಮಯ ಸಿಗದಿದ್ದರೆ, ಮಧ್ಯಾಹ್ನ, ಸಂಜೆ ಹೀಗೆ ಯಾವಾಗ ಬಿಡುವು ಸಿಗುತ್ತದೆ ಆಗ ಯೋಗ ಮಾಡಿ.

*ಬೆಂಗಳೂರು ಬಗ್ಗೆ ಏನು ಹೇಳುತ್ತೀರಾ?
ಉತ್ಸಾಹಿ ಯುವಕರು ಇಲ್ಲಿದ್ದಾರೆ, ಶಿಕ್ಷಣ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ಚೆಂದದ ನಗರವಿದು.  ಸಂಚಾರ ದಟ್ಟಣೆ ಇದೆ, ಆದರೆ ಅದೇನು ದೊಡ್ಡ ವಿಷಯವಲ್ಲ, ದೇಶದ ಎಲ್ಲಾ ಮಹಾನಗರಗಳಲ್ಲೂ ಈ ಸಮಸ್ಯೆಯಿದೆ. ವಾತಾವರಣ ಇಷ್ಟವಾಗುತ್ತದೆ, ಇದೊಂದು ಕನಸಿನ ನಗರ. 

*ಇತ್ತೀಚಿನ ಸಿನಿಮಾಗಳಲ್ಲಿ ನಟರೇ ಹಾಡು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಅದರಲ್ಲಿ ನಾನೂ ಒಬ್ಬ. ಇದು ಕೆಟ್ಟ ಬೆಳವಣಿಗೆಯಲ್ಲ. ಸಲ್ಮಾನ್‌, ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ ಹಾಡಿದ್ದಾರೆ. ಎಲ್ಲಾ ಹಾಡುಗಳನ್ನೂ ಅವರೇ ಹಾಡಲು ಸಾಧ್ಯವಿಲ್ಲ.

ಅಮೃತಸರ ಮೂಲದ ಸುಖ್ವಿಂದರ್‌ ಸಿಂಗ್‌ ಅವರಿಗೆ ದಿಲ್‌ ಸೆ ಚಿತ್ರದ ‘ಚಯ್ಯ ಚಯ್ಯ’, ಸ್ಲಂಡಾಗ್‌ ಮಿಲಿಯನೇರ್‌ ಚಿತ್ರದ ‘ಜೈ ಹೋ’, ಚಕ್‌ ದೇ ಇಂಡಿಯಾ ಚಿತ್ರದ ಟೈಟಲ್‌ ಹಾಡು ಹೆಚ್ಚು ಜನಪ್ರಿಯತೆ ತಂದುಕೊಟ್ಟವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.