ADVERTISEMENT

ಹಬ್ಬಕ್ಕೆ ಆಟಗಳ ಮೇಲಾಟ

ಹರವು ಸ್ಫೂರ್ತಿ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಹಬ್ಬಕ್ಕೆ ಆಟಗಳ ಮೇಲಾಟ
ಹಬ್ಬಕ್ಕೆ ಆಟಗಳ ಮೇಲಾಟ   

ಹಬ್ಬಕ್ಕೆ ಮನೆಗೆ ಬಂದ ನೆಂಟರು, ಗೆಳೆಯರೆಲ್ಲಾ ಸೇರಿ ರಾತ್ರಿಯಿಡೀ ಚೌಕಾಬಾರ ಆಡುತ್ತಿದ್ದರೆ ಬೆಳಗಾಗುವುದೇ ಗೊತ್ತಾಗುವುದಿಲ್ಲ. ಹಬ್ಬ ಮುಗಿದು ವಾರ ಕಳೆದರೂ ಹುಣಸೆ ಬೀಜ ಉಜ್ಜಿಉಜ್ಜಿ  ಪಚ್ಚಿ ಸಿದ್ಧ ಮಾಡಿಕೊಂಡು ಗಟ್ಟೇಮನೆ ಬರೆಯುತ್ತಲೇ ಇರುತ್ತೇವೆ.

‘ಸಂಕ್ರಾಂತಿ ಸುಗ್ಗಿಯಲ್ಲಿ ಗಳಿಸಿದ ಆರುಮೂರು ಕಾಸು ಯುಗಾದಿ ಜೂಜಿನಲ್ಲಿ ಕಳೆದ’ ಎಂದು ಹಿರಿಯರು ಬೈದರೂ ಕೊನೆಗೆ ಮನೆಮಂದಿಯೊಂದಿಗೆ ಸೇರಿ ಒಂದು ಆಟ ಪಗಡೆ ಉರುಳಿಸಲು ಸಿದ್ಧರಾಗುತ್ತಾರೆ.

ಪಗಡೆ ಉರುಳಿಸು...
ಹೊಸದಾಗಿ ಮದುವೆಯಾದ ಜೋಡಿಗೆ ಯುಗಾದಿ ಹೊಸ ರಂಗನ್ನು ತುಂಬುತ್ತದೆ. ದಂಪತಿಯ ಮೊದಲ ಹಬ್ಬ ಯುಗಾದಿಯಾದರೆ ಸೊಸೆಯನ್ನು ತವರಿಗೆ ಕಳುಹಿಸಿಕೊಡುವುದಕ್ಕೂ ಮೊದಲು ಪಗಡೆಯಾಡಿಸುತ್ತಾರೆ.

‘ನಾನು ಮದುವೆಯಾದ ಮೇಲೆ ಸಿಕ್ಕ ಮೊದಲ ಹಬ್ಬ ಯುಗಾದಿ, ನಮ್ಮ ಅತ್ತೆ ಮನೆಯಲ್ಲಿ ಹೊಸ ಜೋಡಿಯನ್ನು ಕೂರಿಸಿ ಪಗಡೆಯಾಡಿಸುತ್ತಾರೆ. ಸೊಸೆ ಪಗಡೆಯಲ್ಲಿ ಗೆದ್ದರಷ್ಟೇ ಗಂಡನನ್ನು ತವರಿಗೆ ಕರೆದುಕೊಂಡು ಹೋಗಬಹುದು. ನಾನು ಒಮ್ಮೆಯೂ ಪಗಡೆ ಆಡಿರಲಿಲ್ಲ. ನನ್ನ ನಾದಿನಿ ಹೇಳಿಕೊಟ್ಟಿದ್ದರು.

ಬೇಗ ಆಟ ಮುಗಿಸಿ ಅಮ್ಮನ ಮನೆಗೆ ಹೋಗಬೇಕು ಎಂದು ನನ್ನ ಗಂಡನಿಗೆ ಮೆಸೇಜ್ ಮಾಡುತ್ತಿದ್ದೆ. ಅವರು ಸೋಲದಂತೆ ನನ್ನ ಗೇಲಿ ಮಾಡಲು ಆಡುತ್ತಲೇ ಇದ್ದರು. ನಮ್ಮ ಮದುವೆಯಾಗಿ ಕೇವಲ ಹದಿನೈದು ದಿನ ಆಗಿತ್ತು. ನಾವಿಬ್ಬರು ಇನ್ನೂ ಸರಿಯಾಗಿ ಮಾತನಾಡುತಲ್ಲೂ ಇರಲಿಲ್ಲ. ಕೊನೆಗೆ ನಮ್ಮ ಮಾವ ನನ್ನ ಪರ ಪಗಡೆಯಾಡಿ ಗೆಲ್ಲಿಸಿದರು.’ ಎಂದು ತಮ್ಮ ಮೊದಲ ವರ್ಷದ ಯುಗಾದಿ ನೆನಪಿಸಿಕೊಂಡರು ಬಿಟಿಎಂ ಲೇಔಟ್‌ನ ವಂದನಾ.

ಹೊಸ ಅಳಿಯನನ್ನು ಸೋಲಿಸುವ ಆಟ
ಮೊದಲ ಹಬ್ಬಕ್ಕೆ ಮನೆಗೆ ಬಂದ ಅಳಿಯನನ್ನು ರಾತ್ರಿಯಿಡೀ ಮಲಗಲು ಬಿಡದೆ ಹುಣಸೆಬೀಜದಲ್ಲಿ ಪಚ್ಚಿ ಹಾಕಿಸಿ ಕಾಡಿಸುವ ಬಾಮೈದ ನಾದಿನಿಯರೂ ಕಡಿಮೆ ಇಲ್ಲ.

‘ಮನೆಯೊಳಗೆ ದುಡ್ಡುಕಟ್ಟಿ ಜೂಜಾಡಬಾರದು’ ಎಂಬ ಹಿರಿಯರ ಕಟ್ಟಪ್ಪಣೆ ಇದ್ದರೂ, ಹೊಸ ಅಳಿಯನ ಕೈಯಲ್ಲಿ ಹಣದ ಬದಲು ಹೊಸ ಬಟ್ಟೆ, ಉಡುಗೊರೆ ಪಂದ್ಯ ಕಟ್ಟುತ್ತಾರೆ ತುಂಟ ನಾದಿನಿಯರು.

‘ರಾತ್ರಿ ಹನ್ನೊಂದಾಯ್ತು. ನಮ್ಮ ಅಪ್ಪ–ಅಮ್ಮ ಎಲ್ಲಾ ಮಲಗಿದರು. ಅಷ್ಟರಲ್ಲಿ ನನ್ನ ತಮ್ಮ, ಅಕ್ಕ–ಭಾವ, ಚಿಕ್ಕಪ್ಪನ ಮಗಳು ಎಲ್ಲರೂ ಸೇರಿ ನನ್ನ ಗಂಡನನ್ನು ಚೌಕಾಬಾರ ಆಡಲು ಮಹಡಿ ಮೇಲೆ ಕರೆದುಕೊಂಡು ಹೋದರು. ಇವರಿಗೆ ಸರಿಯಾಗಿ ಪಚ್ಚಿ ಹಾಕಲು ಬರುತ್ತಿರಲಿಲ್ಲ.

ನಾನು ಜೊತೆಯಾಗಿ ಹೇಗೋ ಆಟ ನಡೆಸಿದೆ. ಚಿಕ್ಕಪ್ಪನ ಮಗಳು ಗಿಫ್ಟುಗಳ ದೊಡ್ಡಪಟ್ಟಿಯನ್ನೇ ಸಿದ್ಧಮಾಡಿಕೊಂಡಿದ್ದಳು. ಪ್ರತಿ ಆಟಕ್ಕೂ ಒಂದೊಂದು ಚೀಟಿ ಹಾಕುತ್ತಿದ್ದರು. ರಾತ್ರಿ ಮೂರು ಗಂಟೆವರೆಗೆ ಆಡಿದರೂ ನನ್ನ ಗಂಡ ಒಂದು ಆಟವನ್ನೂ ಗೆಲ್ಲಲಿಲ್ಲ. ಇಂದಿಗೂ ಯುಗಾದಿ ಬಂತು ಎಂದರೆ ನಮ್ಮ ಊರಿಗೆ ಬರಲು ಅವರು ಹೆದರುತ್ತಾರೆ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ನಂದಿನಿ.

ಮಕ್ಕಳಿಗೆ ಮೀರಿ ಆಡುವ ಉಮೇದು
ಹಬ್ಬಕ್ಕೆ ಹಳೆಯ ಗೋಲಿಗಳನ್ನು ಪೊಟ್ಟಣದಿಂದ ತೆಗೆದು, ‘ಮೀರಿ’ ಆಡುವುದಕ್ಕೆ ತಯಾರಾಗುತ್ತಾರೆ ಮಕ್ಕಳು. ಚಿನ್ನಿದಾಂಡು, ಲಗೋರಿ, ಐಸ್‌ಪೈಸ್‌ ಎಲ್ಲಾ ಆಟಗಳು ಹಳ್ಳಿ ಮಕ್ಕಳಿಗಷ್ಟೆ ಗೊತ್ತು. ಆದರೂ ಕೆಲ ಮಕ್ಕಳು ಹಬ್ಬಕ್ಕೆ ಅಜ್ಜಿ ಮನೆಗೆಂದು ಹಳ್ಳಿಗೆ ಹೋದರೆ ಅಲ್ಲಿನ ಮಕ್ಕಳೊಂದಿಗೆ ಬೆರೆತು ಗ್ರಾಮೀಣ ಆಟಗಳ ಅನುಭವ ಪಡೆಯುತ್ತಾರೆ.

‘ಮದ್ದೂರಿನ ಅಜ್ಜಿ ಮನೆಗೆ ಹೋದಾಗೆಲ್ಲ ಅಣ್ಣನೊಂದಿಗೆ ಆಣೆಕಲ್ಲು, ಗೋಲಿ, ಲಗೋರಿ ಆಡುತ್ತೇನೆ. ಅಣ್ಣ ನನ್ನನ್ನು ಸೋಲಲು ಬಿಡುವುದೇ ಇಲ್ಲ. ಎಲ್ಲಾ ಆಟಗಳನ್ನು ಹೇಳಿಕೊಡುತ್ತಾನೆ, ಎಲ್ಲಾ ಹಬ್ಬಗಳಿಗೂ ಎರಡು ದಿನ ರಜೆ ಹಾಕಿ ಅಜ್ಜಿ ಮನೆಗೆ ಹೋಗಿಬಿಡುತ್ತೇನೆ’ ಎಂದು ಅಜ್ಜಿ ಮನೆಯಲ್ಲಿ ಆಡಿದ ಆಟಗಳನ್ನು ನೆನಪಿಸಿಕೊಳ್ಳುತ್ತಾನೆ ಪುಟಾಣಿ ಕಿಷನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT