ADVERTISEMENT

ಹಸಿರ ಉಸಿರ ಜಾಡು ಹಿಡಿದು

ಸುರೇಖಾ ಹೆಗಡೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಹಸಿರ ಉಸಿರ ಜಾಡು ಹಿಡಿದು
ಹಸಿರ ಉಸಿರ ಜಾಡು ಹಿಡಿದು   

ಮರಗಳನ್ನು ಉಳಿಸಬೇಕು, ಅವುಗಳ ಕುರಿತು ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ 2014ರಲ್ಲಿ ಹುಟ್ಟಿಕೊಂಡ ಸಂಸ್ಥೆ ‘ನೆರಳು’. ಸಂಸ್ಥೆಯು ಇದೀಗ ಮೂರನೇ ವರ್ಷದ ಮರಗಳ ಹಬ್ಬವನ್ನು ಆಚರಿಸುವ ಹುಮ್ಮಸ್ಸಿನಲ್ಲಿದೆ.

ಸಾರ್ವಜನಿಕರೇ ಮುಂದಾಳತ್ವ ವಹಿಸಿಕೊಂಡು ಈ ಸಂಸ್ಥೆಗೆ ರೂಪು ನೀಡಿದರು. ಸಂಗೀತ ಕಡೂರು ಎನ್ನುವವರ ಚಿಂತನೆಗೆ ಅನೇಕ ಸಮಾನ ಮನಸ್ಕರ ಬೆಂಬಲ ದೊರಕಿ ಆರಂಭವಾದ ಈ ಸಂಸ್ಥೆಯು ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಮರಗಳ ವೈಶಿಷ್ಟ್ಯ, ಇತಿಹಾಸ, ಅದರ ಮೂಲ, ಪುರಾಣಗಳಲ್ಲಿ ಉಲ್ಲೇಖವಾಗಿರುವ ಕಥೆಗಳು, ಮರಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನೀಡುವ ಉದ್ದೇಶ ಸಂಸ್ಥೆಗೆ ಇದೆ. ಜಯಮಹಲ್‌ ರಸ್ತೆಯಲ್ಲಿ ಮರಗಳನ್ನು ಕಡಿಯುತ್ತಾರೆ ಎಂದಾಗಲೂ ‘ಮರವೊಂದನ್ನು ಅಪ್ಪಿಕೊ’ (ಹಗ್‌ ಎ ಟ್ರೀ) ಅಭಿಯಾನ ಕೈಗೊಳ್ಳಲಾಗಿತ್ತು.

ಸಸ್ಯರಾಶಿಯನ್ನು ಉಳಿಸುವ ನಿಟ್ಟಿನಲ್ಲಿ ಜನರೇ ಮುಂದಾಳತ್ವ ತೆಗೆದುಕೊಳ್ಳುವಂತೆ ಪ್ರೇರೇಪಿಸುವ ಕೆಲಸ ತಂಡದಿಂದ ಆಗುತ್ತಿದೆ. ಇದೇ ಉದ್ದೇಶದಿಂದ ಫೆ.18 ಹಾಗೂ 19ರಂದು ನೆರಳು ಸಂಸ್ಥೆ ಮರಗಳ ಹಬ್ಬವನ್ನು ಆಯೋಜಿಸಿದೆ.

ಬೆಂಗಳೂರಿನ ಅಭಿವೃದ್ಧಿಯಲ್ಲಿ ಮರಗಳು ಹಾಗೂ ತೋಟಗಳ ನಂಟು ಬಹಳ ಇದೆ. ಮತ್ತಿಮರದಿಂದ ಮತ್ತಿಕೆರೆ, ಹೊರಮಾವು, ಹುಳಿಮಾವು, ಹಲಸೂರು,  ಸಂಪಿಗೆ ರಸ್ತೆ, ಮಾರ್ಗೋಸಾ ರಸ್ತೆ (ಬೇವಿನಮರದ ರಸ್ತೆ), ಹುಣಸೆಮರ ಬಸ್‌ಸ್ಟಾಪ್‌, ಆಲದ ಮರ ಬಸ್‌ಸ್ಟಾಪ್‌ ಹೀಗೆ ಮರಗಳ ಹೆಸರನ್ನೇ ಬೆಂಗಳೂರಿನ ಅನೇಕ ಸ್ಥಳಗಳಿಗೆ ಇಡಲಾಗಿದೆ. ಆದರೆ ಇತ್ತೀಚೆಗೆ ಬಹುತೇಕ ರಸ್ತೆಗಳಲ್ಲಿ ಮರಗಳು ನಾಪತ್ತೆಯಾಗಿವೆ.

‘ಬೆಂಗಳೂರಿನಲ್ಲಿರುವ ಅನೇಕ ಮರಗಳ ತಳಿಗಳು ವಿದೇಶಿ ಮೂಲ ಹೊಂದಿವೆ. ಇಂಥ ಮಾಹಿತಿಯನ್ನು ಜನರಿಗೆ ತಿಳಿಸಬೇಕು, ಆ ಮೂಲಕ ಜನರಲ್ಲಿ ಮರಗಳ ಬಗೆಗೆ ಒಲವು ಮೂಡಿಸಬೇಕು ಎನ್ನುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ’ ಎನ್ನುತ್ತಾರೆ ಟ್ರೀವಾಕ್‌ ಸಂಯೋಜಕ ಹಾಗೂ ದಂತವೈದ್ಯರಾದ ರಾಜೀವ್‌ ಬಿ.ಆರ್‌.

ಫೆ.18 ಹಾಗೂ 19ರಂದು ನಡೆಯಲಿರುವ ಮರಗಳ ಹಬ್ಬದ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇದೇ ಸಂದರ್ಭ ‘ಸ್ಪಾರೋಜ್‌’ ಎನ್ನುವ ಆ್ಯಪ್‌ ಅನಾವರಣ ಮಾಡುವ ಆಲೋಚನೆಯು ತಂಡಕ್ಕೆ ಇದೆ. ಈ ಆ್ಯಪ್‌ನಲ್ಲಿ ಕೆಲವು ಸುಳಿವುಗಳನ್ನು ನೀಡುತ್ತಾ ಯಾವ ಮರ ಎಂದು ಕಂಡುಹಿಡಿಯುವ ಆಟವಿದೆ. ಇದು ಮರಗಳ ಬಗೆಗೆ ಅರಿಯಲು ಹೆಚ್ಚು ಉಪಯೋಗವಾಗಲಿದೆ.

‘ಅಮರಚಿತ್ರಕಥೆ’ಯಲ್ಲಿ ಬರುವ ಮರಗಳಿಗೆ ಸಂಬಂಧಿಸಿದ ವಿವಿಧ ಕಥೆಗಳನ್ನು ಮಕ್ಕಳಿಗೆ ಹೇಳುವುದು, ಮರಗಳ ಬಗೆಗೆ ಮಾಹಿತಿ ಇರುವ ಆಡಿಯೊ ವಾಕ್‌, ಕಬೀರ್‌ ಕೆ ದೋಹೆ, ಒಡಿಸ್ಸಿ ನೃತ್ಯ, ಚಿಕ್ಕಮಕ್ಕಳಿಗೆ ಕಾರ್ಯಾಗಾರ ಮುಂತಾದ ವಿಶೇಷ ಕಾರ್ಯಕ್ರಮಗಳು ಮರಗಳ ಹಬ್ಬದ ಮೆರುಗು ಹೆಚ್ಚಿಸಲಿವೆ.

ನೆರಳು ಬೆಂಗಳೂರು ಹಬ್ಬ
ಶನಿವಾರ ಬೆಳಿಗ್ಗೆ 7.30ಕ್ಕೆ ವಾಕಿಂಗ್‌ ವಿತ್‌ ಟ್ರೀ, 9.30ಕ್ಕೆ ಕಬ್ಬನ್‌ ಪಾರ್ಕ್‌ ಮೆಟ್ರೊ ಸ್ಟೇಷನ್‌ ಆವರಣದಲ್ಲಿ ಕಾರ್ಯಕ್ರಮ. 12ಕ್ಕೆ ಉಪನ್ಯಾಸ, ಕಾರ್ಯಾಗಾರ, ನೃತ್ಯ ಕಾರ್ಯಕ್ರಮ. 1.30ಕ್ಕೆ ನೆರಳು+ ಕಥೆಗಳ ಹಬ್ಬ, ಟ್ರೀ ಹಂಟ್‌ ಹಾಗೂ ರಸಪ್ರಶ್ನೆ, ಬೀದಿ ನಾಟಕ. 3.30ಕ್ಕೆ ಹಗ್‌ ಎ ಟ್ರೀ, ವಿಪುಲ್‌ ರಿಕಿ ಅವರಿಂದ ‘ಕಯಾ ಮೇ ಗುಲ್ಜಾರ್‌’ ಹಾಡುಗಳು.

ಭಾನುವಾರ ವಸಂತನಗರದ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಆವರಣದಲ್ಲಿ ಬೆಳಿಗ್ಗೆ 9ಕ್ಕೆ ಜರ್ನಲ್‌ ವಿತ್‌ ಟ್ರೀಸ್‌ (ನಡೆಸಿಕೊಡುವವರು– ಸಂಗೀತಾ ಕಡೂರು, ಶಿಲ್ಪಶ್ರೀ), ಟ್ರೀಸ್‌ ಆ್ಯಸ್‌ ಎ ಟೀಚರ್‌: ಬಯೊಮಿಮಿಕ್ರಿ ವರ್ಕ್‌ಶಾಪ್‌ (ನಡೆಸಿಕೊಡುವವರು– ಸೀಮಾ ಆನಂದ ಹಾಗೂ ಪ್ರಶಾಂತ್‌ ಧವನ್‌). ಟ್ರಾವಲರ್ಸ್‌ ಕಟ್ಟೆ (ಚಾರುಮತಿ ಸುಪ್ರಜಾ). ದ ಸ್ಟೋರಿ ಆಫ್‌ ದ ಸ್ಟಾರ್‌ ಬ್ಲಾಸಮ್‌ ಟ್ರೀ (ಅಪರ್ಣ ಕಾಪುರ್‌, ರಿತೊಪರ್ಣಿ ಹಜ್ರಾ, ಸಂಜನಾ ಕಪೂರ್‌).

ಮಧ್ಯಾಹ್ನ 12ಕ್ಕೆ ದ ಮಂಕಿ ಕಿಂಗ್‌ ನೃತ್ಯ ಕಾರ್ಯಕ್ರಮ (ಪ್ರಾಚಿ ಜರಿವಾಲಾ). 1.30ಕ್ಕೆ ನೇಚರ್‌ ಇನ್‌ ದ ಸಿಟಿ: ಬೆಂಗಳೂರು ಇನ್‌ ದ ಪಾಸ್ಟ್‌, ಪ್ರೆಸೆಂಟ್‌ ಅಂಡ್‌ ಫ್ಯೂಚರ್‌ (ಹರಿಣಿ ನಾಗೇಂದ್ರ), 2.30ಕ್ಕೆ ಸ್ಟೆಪಿಂಗ್‌ ಇನ್‌ಟು ದ ಎನ್‌ಚಾಂಟೆಡ್‌ ಫಾರೆಸ್ಟ್‌ (ಬಿಜಾಲ್‌ ವಚ್ಚರಜನಿ), ಅ ಬ್ರೀಫ್‌ ಹಿಸ್ಟರಿ ಆಫ್‌ ದ ಇವಾಲ್ಯೂಶನ್‌ ಆಫ್‌ ಪ್ಲಾಂಟ್ಸ್‌ (ಪ್ರಣಯ್‌ ಲಾಲ್‌), ಸಂಜೆ 5ಕ್ಕೆ ಒನ್‌, ಟೂ, ತ್ರಿ ಸಂಗೀತ ಕಾರ್ಯಕ್ರಮ (ಬಿಂದುಮಾಲಿನಿ ನಾರಾಯಣಸ್ವಾಮಿ ಹಾಗೂ ವಾಸು ದೀಕ್ಷಿತ್‌ ಅವರಿಂದ).

ADVERTISEMENT

ಮರಗಳೊಂದಿಗೆ ಸಂವಾದ, ಇನ್‌ಸ್ಟಾಲೇಶನ್‌, ಲೈವ್‌ ಆರ್ಟ್‌, ಆಟಗಳು, ಶಾಲಾ ಪ್ರಾಜೆಕ್ಟ್‌ ಪ್ರದರ್ಶನಗಳೂ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.