ADVERTISEMENT

‘ಹೊಡಿ ಒಂಬತ್ತ್‌’ ಹಾಡಿನ ಕಿಕ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
‘ಹೊಡಿ ಒಂಬತ್ತ್‌’ ಹಾಡಿನ ಕಿಕ್
‘ಹೊಡಿ ಒಂಬತ್ತ್‌’ ಹಾಡಿನ ಕಿಕ್   

ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಷೋಗಾಗಿ ಬಾಗಲಕೋಟೆಗೆ ಹೋಗಿದ್ದೆ. ಐವತ್ತು ಸಾವಿರಕ್ಕೂ ಹೆಚ್ಚು  ಜನರಿಂದ ಇಡೀ ಮೈದಾನ ತುಂಬಿತ್ತು. ವೇದಿಕೆ ಮೇಲೆ ಒಬ್ಬೊಬ್ಬರೂ ನೃತ್ಯ ಮಾಡಿದಾಗ ಪ್ರೇಕ್ಷಕರು, ‘ಹೊಡಿ ಒಂಬತ್ತ್’ ಎಂದು ಜೋರಾಗಿ ಕೂಗುತ್ತಿದ್ದರು.

ಆ ಒಂಬತ್ತರ ಕರಾಮತ್ತು ಕಾರ್ಯಕ್ರಮ ಮುಗಿದ ಮೇಲೂ ನನ್ನ ಕಾಡಿತು. ಕಡೆಗೆ ಗೊತ್ತಾಯ್ತು ‘ಎಣ್ಣೆ’ ಹೊಡಿಯೋದಕ್ಕೆ ಅಲ್ಲಿಯವ್ರು ಹೀಗೆ ಹೇಳ್ತಾರೆ ಅಂತ.­ ಆ ಎರಡು ಪದಗಳನ್ನಿಟ್ಟುಕೊಂಡೇ ಈ ಹಾಡು ಬರೆದೆ. ಅಷ್ಟರ ಮಟ್ಟಿಗೆ ಈ ಸಂಭ್ರಮದ ಕೂಗು ನನ್ನನ್ನು ಆವರಿಸಿತ್ತು...’

– ‘ಮುಗುಳು ನಗೆ’ ಚಿತ್ರದ ‘ಹೊಡಿ ಒಂಬತ್ತ್’ ಹಾಡಿನ ಮೊದಲ ಸಾಲು ಹುಟ್ಟಿದ ಬಗೆಯನ್ನು ನಿರ್ದೇಶಕ ಯೋಗರಾಜ್ ಭಟ್ ಬಿಡಿಸಿಟ್ಟಿದ್ದು ಹೀಗೆ. ಬಯಲುಸೀಮೆಯ ಜನಪ್ರಿಯ ಪದಗಳಿರುವ ಈ ಹಾಡನ್ನು ಇಲ್ಲೇ ಬಿಡುಗಡೆ ಮಾಡಬೇಕು ಎಂಬ ಉದ್ದೇಶದಿಂದ, ಭಟ್ಟರು ಮತ್ತವರ ತಂಡ ಹುಬ್ಬಳ್ಳಿಗೆ ಬಂದಿತ್ತು.

ADVERTISEMENT

ಅಂದಹಾಗೆ, ಇದು ಗಣೇಶ್ ಮತ್ತು ಭಟ್ಟರ ಕಾಂಬಿನೇಷನ್‌ನ ಮೂರನೇ ಚಿತ್ರ. ಹಾಡು ಬಿಡುಗಡೆಗೆ ಏಳೆಂಟು ತಾಸು ಮುಂಚೆಯೇ ಯೂಟ್ಯೂಬ್‌ನಲ್ಲಿ ತೆರೆಕಂಡಿದ್ದ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ.

‘ನಾವೂ ಉತ್ತರ ಕರ್ನಾಟಕದ ಮಂದೀನೇ. ಇಲ್ಲೇ ಹುಬ್ಳಿಯಿಂದ ಸ್ವಲ್ಪ ದೂರದಾಗಿರೊ ತಿಳವಳ್ಳಿ ನಮ್ಮೂರ್ರಿ. ಹಾಗಾಗಿ, ಈ ಭಾಗ್ದಾಗೆ ನಂಗೊಂದ್ ರೀತಿ ಅಟ್ಯಾಚ್‌ಮೆಂಟ್ ಐತ್ರಿ’ ಎಂದು ಭಟ್ಟರು ಅಪ್ಪಟ ಉತ್ತರ ಕನ್ನಡಿಗರ ಶೈಲಿಯಲ್ಲಿ ಮಾತು ಆರಂಭಿಸಿದರು.

‘ಹತ್ತು ವರ್ಷದ ನಂತ್ರ, ನಾನು ಮತ್ತು ಗಣಪ (ಗಣೇಶ್) ಮುಗುಳು ನಗೆಗಾಗಿ ಒಟ್ಟಾಗಿದ್ದೇವೆ. ಒಂದೇ ಒಂದು ಹನಿ ಕಣ್ಣೀರು ಕಾಣದ ಹುಡುಗ, ಜೀವನದ ವಿವಿಧ ಮಜಲುಗಳನ್ನು ನೋಡಿ ಅನುಭವಿಸುತ್ತಾನೆ. ಕಡೆಗೆ, ಆತನ ಕಣ್ಣಿನಿಂದ ಒಂದು ಹನಿ ನೀರು ನೆಲ ಕಾಣುತ್ತದೆ. ಕಥೆಯೊಳಗೆ ಉಪಕಥೆಗಳು ಅಡಗಿವೆ’ ಎಂದು ಚಿತ್ರದ ಒನ್‌ಲೈನ್ ಸ್ಟೋರಿಯನ್ನು ನಿರ್ದೇಶಕರು ಹಂಚಿಕೊಂಡರು.

ಸಿನಿಮಾರಂಗದ ಸದ್ಯದ ಟ್ರೆಂಡ್‌ನಂತೆ, ಚಿತ್ರದಲ್ಲಿರುವ ಏಳು ಹಾಡುಗಳನ್ನು ಒಂದೊಂದು ನಗರದಲ್ಲಿ ಬಿಡುಗಡೆ ಮಾಡುವ ಆಲೋಚನೆ ಅವರದು. ‘ಮೊದಲ ಹಾಡು ಹುಬ್ಬಳ್ಳಿ. ಎರಡನೇಯದು ಬೆಂಗಳೂರು, ಮೂರನೇಯದು ಮೈಸೂರು... ಹೀಗೆ ಒಂದೊಂದು ಕಡೆ ಒಂದೊಂದು ಹಾಡು ಬಿಡುಗಡೆ ಮಾಡುವುದರಿಂದ ಕೊರಳಿಗೂ ಹೆಚ್ಚಿನ ಹೂವಿನ ಹಾರ ಬೀಳುತ್ತವೆ’ ಎಂದು ಭಟ್ಟರು ಮುಗುಳ್ನಕ್ಕರು.

‘ಡಾರ್ಕ್ ಫಿಲಾಸಫಿ (ಕತ್ತಲ ತತ್ವಜ್ಞಾನ) ಇರುವ ಹಾಡಿದು. ಈ ಸಾಲುಗಳನ್ನು ಓದಿ ಭಟ್ಟರಿಗೆ ಫೋನು ಮಾಡಿ, ಎರಡು ತಾಸು ಚರ್ಚಿಸಿದೆ. ಹಾಡಿನ ಸಾಲುಗಳು ಅಷ್ಟೊಂದು ಮರುಳು ಮಾಡಿದವು’ ಎಂದು ಗಣೇಶ್ ಚಕಿತಚಿತ್ತರಾದರು.ಸಿನಿಮಾ ಪಯಣದ ಜತೆಜತೆಗೆ ಉತ್ತರ ಕರ್ನಾಟಕದ ಜತೆಗಿನ ನಂಟು ಆರಂಭವಾದ ಬಗೆಯನ್ನು ಮೆಲುಕು ಹಾಕಿದ ಅವರು, ‘ಈ ಭಾಗದ ಭಾಷೆ ಅಂದ್ರೆ ನಂಗೆ ತುಂಬಾ ಇಷ್ಟ. ಬನ್ರಿ, ಹೋಗ್ರಿ, ಚಲೋ ಅದಿರೇನ್ರಿ, ಕುಂದರ್ರಿ ಪದಗಳನ್ನು ಕೇಳುವುದೇ ಒಂಥರಾ ಮಜಾ. ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ, ನೇರ ಮತ್ತು ಮುಕ್ತವಾಗಿ ಮಾತನಾಡುತ್ತಾರೆ’ ಎಂದು ಮೆಚ್ಚಿಕೊಂಡರು.

‘ಯೋಗರಾಜ್ ಭಟ್ ಮತ್ತು ಗಣೇಶ್ ಅವರ ತಂಡವನ್ನು ಸೇರಿಕೊಂಡಿದ್ದಕ್ಕೆ ಖುಷಿಯಾಗುತ್ತಿದೆ’ ಎಂದರು ನಿರ್ಮಾಪಕ ಅಬ್ದುಲ್ ಸಲಾಂ. ಕಪ್ಪು ಕನ್ನಡಕದಲ್ಲಿ ಮಿಂಚುತ್ತಿದ್ದ ಹಾಸ್ಯ ನಟ ರಾಜು ತಾಳಿಕೋಟೆ, ಚಿತ್ರಕ್ಕೆ ಶುಭ ಕೋರಿದರು. ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ವಿ. ಹರಿಕೃಷ್ಣ ಹಾಗೂ ಚಿತ್ರತಂಡದ ಇತರ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಚಿತ್ರದ ಒಂದೊಂದು ಹಾಡುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವ ಆಲೋಚನೆಯಲ್ಲಿರುವ ಚಿತ್ರತಂಡ, ಆಗಸ್ಟ್ ಮೊದಲ ವಾರದಲ್ಲಿ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.