ADVERTISEMENT

ಹೊಸ ಲೋಕಕ್ಕೆ ಕರೆದೊಯ್ಯುವ ಕಾಂಗ್

ಮಂಜುನಾಥ ರಾಠೋಡ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಹೊಸ ಲೋಕಕ್ಕೆ ಕರೆದೊಯ್ಯುವ ಕಾಂಗ್
ಹೊಸ ಲೋಕಕ್ಕೆ ಕರೆದೊಯ್ಯುವ ಕಾಂಗ್   

ಕಣ್ಣು ಮಿಟುಕಿಸಲೂ ಬಿಡದ ಆ್ಯಕ್ಷನ್‌ ದೃಶ್ಯಗಳು, ಸೀಟಿನ ತುದಿಗೆ ಕೂರುವಂತೆ ಮಾಡುವ ಅರಣ್ಯದ ನಿಗೂಢತೆ, ತನಗಿಂತ ಹಲವು ಪಟ್ಟು ಗಾತ್ರದ ಶಕ್ತಿಯ ಕಪಿಯನ್ನು ತುಚ್ಛ ವೈರಿಯಂತೆ ಕಾಣುವ ಸೈನಿಕನ ನಟನೆ, ಸುಂದರ ದ್ವೀಪದ ಮನೋಹರ ದೃಶ್ಯಗಳು ಸನ್ನಿವೇಶಕ್ಕೆ ತಕ್ಕಂಥ ಹಿನ್ನೆಲೆ ಸಂಗೀತ...ಇವು, ‘ಕಾಂಗ್ ಸ್ಕಲ್ ಐಲೆಂಡ್’ ಚಿತ್ರದ ಮುಖ್ಯಾಂಶಗಳು.

ತನ್ನ ಕಾಡಿನ ಪ್ರದೇಶದಲ್ಲಿನ ಜೀವಿಗಳು, ಬುಡಕಟ್ಟು ವಾಸಿಗಳನ್ನು ದುಷ್ಟ ಪ್ರಾಣಿಗಳಿಂದ ರಕ್ಷಿಸುವ ಕಾರ್ಯ ಬೃಹದಾಕಾರದ ಕಪಿ ಕಾಂಗ್‌ನದ್ದು. ತನ್ನ ಈ ಕಾರ್ಯದಿಂದಲೇ ಅದು ಕಿಂಗ್ ಕಾಂಗ್ ಎನಿಸಿಕೊಂಡಿದೆ. ಆದರೆ ಸಂಶೋಧನೆ ಹೆಸರಿನಲ್ಲಿ ತನ್ನ ಪ್ರದೇಶವನ್ನು ಅತಿಕ್ರಮಿಸಿ, ಬಾಂಬುಗಳನ್ನು ಹಾಕುವ ಮಾನವರಿಗೆ ಈ ಕಪಿ ಬುದ್ಧಿ ಕಲಿಸುತ್ತದೆ. ಈ ಕ್ರಿಯೆಯಲ್ಲಿ ಕೆಲವು ಸೈನಿಕರು ಜೀವ ಕಳೆದು ಕೊಳ್ಳುತ್ತಾರೆ. ಇದರಿಂದ ಕಾಂಗ್‌ ಮೇಲೆ ಜಿದ್ದಿಗೆ ಬೀಳುವ ಸೈನಿಕರ ಗುಂಪಿನ ಮುಖ್ಯಸ್ಥ ಪ್ರೆಟ್‌ಸನ್‌ ಪ್ಯಾಕಾರ್ಡ್‌ ಕಾಂಗ್‌ ಮೇಲೆ ಯುದ್ಧ ಸಾರುತ್ತಾನೆ.

ಅದೇ ತಂಡದಲ್ಲಿದ್ದ ಕೆಲವು ಮಂದಿಗೆ ಕಾಂಗ್‌ ಕೇವಲ ತನ್ನ ಪ್ರದೇಶದ ರಕ್ಷಣೆ ಮಾಡುತ್ತಿತ್ತೆಂದು ಮನದಟ್ಟಾಗಿ ಸೈನಿಕ ಮುಖ್ಯಸ್ಥ ಹೂಡುವ ಯುದ್ಧದಲ್ಲಿ ಕಾಂಗ್ ಪರ ನಿಲ್ಲುತ್ತಾರೆ.

ADVERTISEMENT

ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ. ಕಾಂಗ್‌ ಮತ್ತೆ ಕಾಡಿನ ಕಿಂಗ್‌ಕಾಂಗ್ ಅಗುತ್ತದೆಯೆ ಇಲ್ಲವೆ ಎನ್ನುವುದು ಚಿತ್ರ ನೋಡಿಯೇ ತಿಳಿಯಬೇಕು.
ಪ್ರೇಕ್ಷಕನನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ  ಶಕ್ತಿ ಚಿತ್ರಕ್ಕೆ ಬಂದಿರುವುದು ಕ್ಯಾಮೆರಾ ಕೈಚಳಕ ಹಾಗೂ ಅದ್ಭುತ ಎಫೆಕ್ಟ್ಸ್‌ಗಳ ಮೂಲಕ.

ನಿರ್ದೇಶಕ ಜೋರ್ಡನ್ ವೋಗ್‌ರಾಬರ್ಟ್‌ ಕತೆಗಿಂತಲೂ ಆ್ಯಕ್ಷನ್‌ಗೆ ಹೆಚ್ಚು ಒತ್ತು ನೀಡಿದ್ದಾರೆ. ಹೀಗಾಗಿ ಸೀಟಿಗೆ ಒರಗಲು ಬಿಡದಂತೆ ಒಂದರ ನಂತರ ಆ್ಯಕ್ಷನ್‌ ಸನ್ನಿವೇಶಗಳು ತೆರೆಯ ಮೇಲೆ ರಾರಾಜಿಸುತ್ತವೆ.

ಆ್ಯಕ್ಷನ್‌ ಪ್ರಧಾನ ಚಿತ್ರವಾಗಿರುವ ಕಾರಣ ಟಾಮ್ ಹಿಡ್ಲ್‌ಸ್ಟನ್, ಬ್ರೀ ಲ್ಯಾರ್ಸನ್ ಅವರ ನಟನಾ ಕೌಶಲಗಳ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶವಿಲ್ಲ. ಆದರೆ ಕಾಂಗ್‌ ಮೇಲೆ ಹಗೆ ಸಾಧಿಸುವ ಸೈನಿಕರ ಗುಂಪಿನ ಮುಖ್ಯಸ್ಥ ಪಾತ್ರಧಾರಿ ಸ್ಯಾಮ್ಯುಯೆಲ್ ಜಾಕ್ಸನ್‌ ತಮ್ಮ ಗಂಭೀರ ನಟನೆಯಿಂದ ನೆನಪಿನಲ್ಲುಳಿಯುತ್ತಾರೆ.

ತೆಳು ಪ್ರೇಮ ಕಥೆ, ಮಾನವನ ದುರಾಸೆಗಳ ಚಿತ್ರಣಗಳನ್ನು ಮುನ್ನೆಲೆಯಲ್ಲಿಟ್ಟು ನಿರ್ಮಿಸಿದ್ದ ಈ ಹಿಂದಿನ ‘ಕಿಂಗ್‌ಕಾಂಗ್‌’ ಚಿತ್ರವನ್ನು ಹೊಸ ಕಾಂಗ್ ಮೀರಲು ವಿಫಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.