ADVERTISEMENT

‘ಕನ್ನಡ ಗೊತ್ತಿಲ್ಲ’ ಇ–ಕಲಿಕೆ

ರೇಷ್ಮಾ ಶೆಟ್ಟಿ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ನಗರದಲ್ಲಿ ಕನ್ನಡ ಕಲಿಯದೆ ಬದುಕಬಹುದಾದರೂ ಅದನ್ನು ಕಲಿಯಲು ಪ್ರೇರಣೆ ನೀಡುವಂತಹ ಕೆಲಸಗಳು ಸಣ್ಣ ಮಟ್ಟದಲ್ಲಿ ಆಗುತ್ತಲೇ ಇವೆ. ಪರಭಾಷಾ ಕನ್ನಡಾಭಿಮಾನಿಗಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ವಾಟ್ಸ್‌ ಆ್ಯಪ್‌ನಲ್ಲಿ ಒಂದು ಗ್ರೂಪ್‌ ರೂಪಿಸಿರುವ ಅನುಪ್‌ ಮಯ್ಯ ಅವರದ್ದೂ ಅಂಥದ್ದೇ ಯತ್ನ.

ಕನ್ನಡ ಗೊತ್ತಿಲ್ಲದ ತಮ್ಮ ಸ್ನೇಹಿತರಿಗೆ ಹೇಗೆ ಕನ್ನಡ ಕಲಿಸಬೇಕು ಎಂದು ಆಪ್ತೇಷ್ಟರ ಜೊತೆ ಅವರು ಮೊದಲು  ಚರ್ಚಿಸುತ್ತಿದ್ದರು. ಫೋನ್‌ನಲ್ಲಿ ಕನ್ನಡ ಮಾತನಾಡುತ್ತಾ ಭಾಷೆಯನ್ನು ಕಲಿಸಬೇಕು ಎಂಬ ಯೋಚನೆ ಮೊದಲು ಹೊಳೆದಿತ್ತಾದರೂ, ಅದರಿಂದ ಖರ್ಚು ಜಾಸ್ತಿ ಎನಿಸಿ ವಾಟ್ಸ್ ಆ್ಯಪ್‌ನ ಮೊರೆಹೋದರು. ದಿನವೂ ಒಂದಿಷ್ಟು ಆಸಕ್ತರನ್ನು ಒಗ್ಗೂಡಿಸುತ್ತಾ ರೂಪಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ 650ಕ್ಕೂ ಅಧಿಕ ಮಂದಿ ಇದ್ದಾರೆ.

ಕನ್ನಡ ಕಲಿಸುವ ಕಾಯಕಕ್ಕೇನೋ ಕೈ ಹಾಕಿದರು. ಆದರೆ ಜನರನ್ನು ಹೇಗೆ ಸಂಪರ್ಕಿಸುವುದು ಎಂದು ಯೋಚಿಸುತ್ತಿದ್ದಾಗ ಅವರಿಗೆ ಹೊಳೆದಿದ್ದು ವೈಬ್‌ಸೈಟ್‌ನ ಮಾರ್ಗ. kannadagottilla.com ಎಂಬ ವೈಟ್‌ಸೈಟ್‌ ಮೂಲಕ ಇವರು ಕನ್ನಡ ಗೊತ್ತಿಲ್ಲದವರನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿಕೊಂಡರು.

kannadagottilla.comನಲ್ಲಿ ರಿಜಿಸ್ಟ್ರೇಷನ್‌ ಮಾಡಿಕೊಂಡ ನಂತರವಷ್ಟೆ ನಾವು ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಲು ಸಾಧ್ಯವಾಗುವುದು. ಒಂದು ಬಾರಿ ನೋಂದಾಯಿತರಾದವರಿಗೆ ತಂಡದ ನಿರ್ವಾಹಕರು ಇ–ಮೇಲ್ ಐಡಿ ಕಳುಹಿಸುತ್ತಾರೆ. ಆ ಮೂಲಕ ಅವರು ಗ್ರೂಪ್‌ಗೆ ಸೇರಬಹುದು. ಹೀಗೆ ಒಬ್ಬರಿಂದ ಒಬ್ಬರಿಗೆ ವಿಷಯ ದಾಟಿದ ಪರಿಣಾಮ ಗ್ರೂಪ್‌ನ ಸದಸ್ಯರ ಸಂಖ್ಯೆ ಬೆಳೆದಿದೆ.ತಂಡದ ಸದಸ್ಯರು ‌ಕೇವಲ ನಮ್ಮ ದೇಶದ ಯುವಕರಲ್ಲದೆ ಬೇರೆ ದೇಶಗಳಲ್ಲಿ ಇರುವವರಿಗೂ ಈ ಗ್ರೂಪ್‌ನ ಹಂಗು! ತಂಡದಲ್ಲಿ 15ರಿಂದ 20 ಮಂದಿ ಅನಿವಾಸಿ ಭಾರತೀಯರಿದ್ದು,  ಆರೇಳು ಜನ ವಿದೇಶಿ ಪ್ರಜೆಗಳು ಇದ್ದಾರೆ.

ಇ–ಮೇಲ್‌ ಖಾತೆ: kannadagottilla.comನಲ್ಲಿ ನೋಂದಾಯಿಸಿಕೊಳ್ಳುವ ಕನ್ನಡ ಭಾಷಾಭಿಮಾನಿಗಳು ಆ ಮೂಲಕ ವಾಟ್ಸ್‌ ಆ್ಯಪ್‌ ಎಂಟ್ರಿ ಪಡೆಯುತ್ತಾರೆ. ನಂತರ ಅವರ ಹೆಸರಿನಲ್ಲಿ ಗ್ರೂಪ್‌ನ ಮೆಂಟರ್‌ಗಳು ಇ–ಮೇಲ್‌ ಖಾತೆ ತೆರೆಯುತ್ತಾರೆ.  ಇ–ಮೇಲ್‌ ಖಾತೆ ತೆರೆದ ನಂತರವಷ್ಟೆ ಅವರು ಗುಂಪಿನ ಸದಸ್ಯರಾಗಲು ಸಾಧ್ಯ.

ವಾಟ್ಸ್ ಆ್ಯಪ್‌ ತಂಡಗಳ ವಿವರ
ವ್ಯಾಟ್ಸ್‌ ಆ್ಯಪ್‌ನ ಒಂದು ತಂಡದಲ್ಲಿ 20ರಿಂದ 30 ಜನ ಸದಸ್ಯರಿರುತ್ತಾರೆ. ಅಲ್ಲಿ ಮೊಬೈಲ್‌ ನಂಬರ್‌ಗಳು ಡಿಸ್‌ಪ್ಲೇ ಆಗುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರಿಗಾಗಿ ಪ್ರತ್ಯೇಕ ಗುಂಪುಗಳನ್ನು ಮಾಡಲಾಗಿದೆ.ಪ್ರತಿ ಗ್ರೂಪ್‌ ಮುನ್ನೆಡೆಸಿಕೊಂಡು ಹೋಗಲು ಮೆಂಟರ್‌ಗಳಿರುತ್ತಾರೆ. ಮೆಂಟರ್‌ಗಳು ಕೂಡ ಅನುಪ್ ಮಯ್ಯ ಅವರೊಂದಿಗೆ ಕನ್ನಡ ಕಲಿಸಲು ಕೈ ಜೋಡಿಸಿದ್ದಾರೆ. ಹೀಗೆ ಈ ತಂಡ ಕನ್ನಡ ಭಾಷಾಭಿಮಾನಿಗಳಿಗೆ ಸಂಪರ್ಕದ ಸೇತುವೆಯಾಗಿದೆ.

ಕಲಿಕಾ ವಿಧಾನ
ಕನ್ನಡ ಕಲಿಯಲು ಇಲ್ಲಿ ಪ್ರತ್ಯೇಕ ಪಠ್ಯಕ್ರಮವಿದೆ.  ಬೇಸಿಕ್ ಇಂಗ್ಲಿಷ್‌ ಯಾವ ರೂಪದಲ್ಲಿ ಕಲಿಸುತ್ತೇವೆಯೋ ಹಾಗೆ ಇಲ್ಲಿನ ಕಲಿಕೆ. ಉದಾಹರಣೆಗೆ, ‘I’  ಅಂದರೆ ‘ನಾನು’,  ‘SHE’  ಅಂದರೆ ‘ಅವಳು’  ಹೀಗೆ ಕನ್ನಡ ಕಲಿಸುತ್ತಾರೆ. ‘ವಾಟ್ಸ್‌ ಆ್ಯಪ್‌ನಲ್ಲಿ ಆಡಿಯೋ ಕೂಡ ಕಳುಹಿಸಬಹುದು. ಶಬ್ದವನ್ನು ಸರಿಯಾಗಿ ಉಚ್ಚರಿಸಿ ಅರ್ಥವಾಗುವಂತೆ ಮಾಡುತ್ತೇನೆ’ ಎನ್ನುತ್ತಾರೆ ಅನುಪ್ ಮಯ್ಯ. ಕನ್ನಡ ಕಲಿಸಲು ಮತ್ತು ಗುಂಪಿನ ಕನ್ನಡ ವಿದ್ಯಾರ್ಥಿಗಳು ತಮಗಿರುವ ಅನುಮಾನಗಳನ್ನು ಪರಿಹರಿಸಿಕೊಳ್ಳಲು ದಿನದಲ್ಲಿ ಒಂದು ಗಂಟೆ ಸಮಯ ನೀಡುತ್ತಾರೆ.

ವಾರಾಂತ್ಯದ ದಿನಗಳಲ್ಲಿ ಪಾಠದ ಜೊತೆಗೆ ‘ರಿಜಿಸ್ಟ್ರೇಷನ್‌’ನಂತಹ ಇತರೆ ಕೆಲಸಗಳೂ ಇರುತ್ತವೆ ಎನ್ನುತ್ತಾರೆ ಅನುಪ್‌.
ಭಾಷಾಭಿಮಾನದಿಂದಷ್ಟೆ ಕಾರ್ಯ ನಿರ್ವಹಿಸುತ್ತಿರುವ ಈ ತಂಡ, ಭವಿಷ್ಯದಲ್ಲಿ ಕನ್ನಡ ಕಲಿಸಲು ಮೊಬೈಲ್ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ, ಆ ಮೂಲಕ    ಕನ್ನಡ ಗೊತ್ತಿಲ್ಲದ ಸಾವಿರಾರು ಜನರನ್ನು ತಲುಪುವ ಬಯಕೆಯಲ್ಲಿದೆ.

***
ನಗರದಲ್ಲಿ ಕನ್ನಡ ಕಲಿಯದೆ ಬದುಕಬಹುದಾದರೂ ಅದನ್ನು ಕಲಿಯಲು ಪ್ರೇರಣೆ ನೀಡುವಂತಹ ಕೆಲಸಗಳು ಸಣ್ಣ ಮಟ್ಟದಲ್ಲಿ ಆಗುತ್ತಲೇ ಇವೆ. ಪರಭಾಷಾ ಕನ್ನಡಾಭಿಮಾನಿಗಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ವಾಟ್ಸ್‌ ಆ್ಯಪ್‌ನಲ್ಲಿ ಒಂದು ಗ್ರೂಪ್‌ ರೂಪಿಸಿರುವ ಅನುಪ್‌ ಮಯ್ಯ ಅವರದ್ದೂ ಅಂಥದ್ದೇ ಯತ್ನ.

***

ಅಣ್ಣಾವ್ರ ಅಭಿಮಾನಿ‌
ಹೊರ ರಾಜ್ಯದವರಿಗೆ ಕನ್ನಡ ಕಲಿಯುವ ಹಂಬಲವಿದ್ದರೂ ಸರಿಯಾದ ವೇದಿಕೆಯಿಲ್ಲ. ನನಗೆ ‘ಕನ್ನಡ ಗೊತ್ತಿಲ್ಲ’ ವಾಟ್ಸ್‌ ಆ್ಯಪ್‌ ಗ್ರೂಪ್‌ ಬಗ್ಗೆ ವೆಬ್‌ಸೈಟ್‌ನಿಂದ ತಿಳಿಯಿತು. ಈ ಗ್ರೂಪ್‌ನಿಂದ ನಾನು ಕನ್ನಡ ಕಲಿತಿದ್ದಲ್ಲದೇ ನನ್ನ ಮನೆಯವರಿಗೂ ಕನ್ನಡ ಕಲಿಸುತ್ತಿದ್ದೇನೆ. ನಾನು ಅಣ್ಣಾವ್ರ ಅಭಿಮಾನಿ. ಅವರ ಹಾಡುಗಳನ್ನು ಹಾಡುತ್ತೇನೆ.
- ಎಚ್‌ಪಿ ಕಂಪೆನಿ ಉದ್ಯೋಗಿ ಹೇಮಂತ್

***

ಸಂಭಾಷಣೆಗೆ ವೆಬ್‌ಸೈಟ್‌ ನೆರವು
ಮೂಲತಃ ಕೇರಳದವಳಾದ ನಾನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ  ನೆಲೆಸಿದೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ ರೋಗಿಗಳೊಂದಿಗೆ  ಮಾತಾನಾಡುವಾಗ ತೊಂದರೆಯಾಗುತ್ತಿತ್ತು. ಸಾಮಾನ್ಯವಾಗಿ  ನಿಮ್ಹಾನ್ಸ್‌ನಲ್ಲಿ ಹಳ್ಳಿಯ ರೋಗಿಗಳು ಹೆಚ್ಚಾಗಿ ಬರುತ್ತಾರೆ. ಅವರಿಗೆ ಕನ್ನಡ ಹೊರತುಪಡಿಸಿ ಬೇರೆ ಭಾಷೆ ಬರುವುದಿಲ್ಲ. ಆ ಸಂದರ್ಭದಲ್ಲಿ ನನಗೆ ಕನ್ನಡ ಕಲಿಯುವುದು ಅನಿವಾರ್ಯವಾಗಿತ್ತು.ಆಗ ನನ್ನ ಪತಿಯ ಮೂಲಕ kannadagottilla.com ವಾಟ್ಸ್‌ ಆ್ಯಪ್‌ ಗುಂಪಿನ ಪರಿಚಯವಾಯಿತು. ಈಗ ನನಗೆ ಕನ್ನಡ ಸರಿಯಾಗಿ ಅರ್ಥವಾಗುತ್ತದೆ ಮತ್ತು ಮಾತಾನಾಡಲು ಕೂಡ ಬರುತ್ತದೆ.
  –ಅನು ಕಾಮತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.