ADVERTISEMENT

‘ಶಮಿತಾಭ್’ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 19:30 IST
Last Updated 25 ಜನವರಿ 2015, 19:30 IST
ಅಮಿತಾಭ್ ಬಚ್ಚನ್, ಧನುಷ್ ಹಾಗೂ ಅಕ್ಷರ ಹಾಸನ್.
ಅಮಿತಾಭ್ ಬಚ್ಚನ್, ಧನುಷ್ ಹಾಗೂ ಅಕ್ಷರ ಹಾಸನ್.   

‘ಪಾ’ ಹಿಂದಿ ಸಿನಿಮಾ ನಂತರ ತಣ್ಣಗೆ ಇನ್ನೊಂದು ಸಿನಿಮಾ ಮಾಡಿ ಮುಗಿಸಿರುವ ಬಾಲ್ಕಿ ಹೆಸರಿನಲ್ಲೇ ಗುರುತಾಗಿರುವ ನಿರ್ದೇಶಕ ಆರ್‌.ಬಾಲಕೃಷ್ಣನ್‌ ತಮಿಳು ನಟ ಧನುಷ್‌ ಅವರನ್ನು ಬಾಯಿತುಂಬಾ ಹೊಗಳಿದ್ದಾರೆ.

‘ಭಾರತೀಯ ಚಿತ್ರರಂಗದ ಬಲು ಜಾಣ ನಟ ಧನುಷ್‌. ಅವರ ಪ್ರತಿಭೆಯ ಪರಿಚಯ ನನಗೆ ಮೊದಲೇ ಆಗಿದ್ದಿದ್ದರೆ ಇನ್ನಷ್ಟು ಸಿನಿಮಾಗಳನ್ನು ಅವರೊಟ್ಟಿಗೆ ಇಷ್ಟು ಹೊತ್ತಿಗೆ ಮಾಡಿರುತ್ತಿದ್ದೆ’ ಎಂದು ಬಾಲ್ಕಿ ಹೊಗಳಿದಾಗ, ಅವರ ಪಕ್ಕದಲ್ಲೇ ನಿಂತಿದ್ದ ಧನುಷ್‌ ಸಂಕೋಚದ ಮುದ್ದೆಯಂತಾದರು. ಧನುಷ್‌ಗೆ ಅಭಿಮಾನಿ ಬಳಗ ಇರುವ ಚೆನ್ನೈನಲ್ಲಿ ಅವರು ಹೀಗೆ ಹೇಳಿದ್ದರಿಂದ ಈ ಮಾತಿಗೆ ಪ್ರಚಾರದ ತಂತ್ರದ ಲೇಪವೂ ಇಲ್ಲವೆಂದೇನೂ ಅಲ್ಲ ಎಂದು ತಂಡದಲ್ಲೇ ಇದ್ದ ಕೆಲವರು ಕಾಲೆಳೆದರು.

‘ಶಮಿತಾಭ್’ ಸಿನಿಮಾದಲ್ಲಿ ಧನುಷ್‌, ಬಿಗ್‌–ಬಿ ಅಮಿತಾಭ್‌ ಬಚ್ಚನ್‌ ಜೊತೆ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಧನುಷ್‌ ಮೂಗ. ಅವರ ಮಾತೆಲ್ಲಕ್ಕೂ ಅಮಿತಾಭ್‌ ದನಿಯಾಗಿರುವುದು ವಿಶೇಷ. ಧನುಷ್‌ ಹೆಸರಿನ ಇಂಗ್ಲಿಷ್‌ ಅಕ್ಷರಗಳಿಂದ ಕೊನೆಯ ಎರಡು–sh ಹಾಗೂ ಅಮಿತಾಭ್‌ ಹೆಸರಿನ ಇಂಗ್ಲಿಷ್‌ ಅಕ್ಷರಗಳಿಂದ–amitabh ತೆಗೆದುಕೊಂಡು, ಚಿತ್ರಕ್ಕೆ ‘ಶಮಿತಾಭ್‌’ ಎಂಬ ಹೆಸರನ್ನು ಬಾಲ್ಕಿ ಇಟ್ಟಿದ್ದಾರೆ. ಜಾಹೀರಾತು ಪರಿಕಲ್ಪನೆಗಳ ಮೂಲಕ ಗಮನ ಸೆಳೆದಿರುವ ಬಾಲ್ಕಿ ‘ಪಾ’ ಸಿನಿಮಾದ ನಿರೂಪಣೆಯ ವೇಗದಲ್ಲಿಯೂ ಅದೇ ತಂತ್ರವನ್ನು ಅಳವಡಿಸಿಕೊಂಡು ಯಶಸ್ವಿಯಾದವರು. ಈಗ ‘ಶಮಿತಾಭ್‌’ ದಿನವೂ ಬೇರೆ ಬೇರೆ ಕಾರಣಕ್ಕೆ ಸುದ್ದಿ ಮಾಡುತ್ತಿದೆ.

ಇಳಯರಾಜ ಮಟ್ಟು ಹಾಕಿರುವ ಗೀತೆಯೊಂದಕ್ಕೆ ಖುದ್ದು ಅಮಿತಾಭ್‌ ದನಿಯಾಗಿರುವುದು ವಿಶೇಷ. ಶೌಚಾಲಯದ ಕಮೋಡ್‌ ಮೇಲೆ ಕುಳಿತು ಅಮಿತಾಭ್‌ ಹಾಡುವಂತೆ ಅದನ್ನು ಚಿತ್ರೀಕರಿಸಿರುವ ಬಾಲ್ಕಿ ಅದನ್ನೂ ವಿಶೇಷ ಎಂಬಂತೆ ಬಿಂಬಿಸಿದ್ದು, ಸಿನಿಮಾದ ಕಥೆಯ ಎಳೆಯನ್ನು ಬಿಟ್ಟುಕೊಡದೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

ಇದೇ ತಿಂಗಳ 21ರಂದು ‘ಶಮಿತಾಭ್‌’ ಸಿನಿಮಾದ ಆಡಿಯೊ ಬಿಡುಗಡೆ ಸಮಾರಂಭ ಮುಂಬೈನಲ್ಲಿ ನಡೆದಿತ್ತು. ಇಳಯರಾಜ ಸಂಗೀತ ಸಂಯೋಜನೆ ಮಾಡಿರುವ 1000ನೇ ಚಿತ್ರವಿದು ಎನ್ನುವುದು ಹೆಗ್ಗಳಿಕೆ. ಸಮಾರಂಭವನ್ನು ಕಳೆಗಟ್ಟಿಸಿದ್ದು ಇನ್ನೊಬ್ಬ ನಟ, ನಿರ್ದೇಶಕ ಕಮಲ್‌ ಹಾಸನ್‌. ಇಳಯರಾಜ ಅವರನ್ನು ‘ರಾಜ’ ಎಂದೇ ಕಮಲ್‌ ಸಂಬೋಧಿಸುವುದು.

‘ರಾಜ ಸಾವಿರ ಸಿನಿಮಾಗಳಿಗೆ ಸಂಗೀತ ನೀಡಿರುವುದು ಒಂದು ವಿಶೇಷವಾದರೆ, ಅವುಗಳಲ್ಲಿ 786ನೇ ಸಿನಿಮಾ ನನ್ನದು ಎನ್ನುವುದು ಇನ್ನೊಂದು ವಿಶೇಷ. ಅವರಿಗೆ ಅವರೇ ಸಾಟಿ. ಒಮ್ಮೆ ಅವರು ಸಂಗೀತ ಸಂಯೋಜಿಸಿದ ಹಾಡುಗಳನ್ನು ಚಿತ್ರೀಕರಿಸಿಕೊಂಡೆ. ಯಾಕೋ ನನಗೆ ಚಿತ್ರೀಕರಿಸಿದ ಹಾಡುಗಳು ತೃಪ್ತಿ ಕೊಡಲಿಲ್ಲ. ರೀಶೂಟ್‌ ಮಾಡುವ ಯೋಚನೆ ಮಾಡಿ, ಅದನ್ನು ರಾಜ ಅವರಿಗೆ ಹೇಳಿದೆ. ಅವರು ಮರುಚಿತ್ರೀಕರಣ ಬೇಡ, ಹಾಡುಗಳಿಗೇ ಬೇರೆ ರೀತಿ ಡಬ್‌ ಮಾಡಿಕೊಡುತ್ತೇನೆ ಎಂದು ಆ ಸಂದರ್ಭಕ್ಕೆ ವಿಚಿತ್ರ ಎನ್ನುವಂಥ ಪ್ರಯೋಗ ಮಾಡಿದರು.

ಆ ಹಾಡುಗಳು ಹಿಟ್‌ ಆದದ್ದು ಅವರು ಶ್ರೇಷ್ಠರು ಎನ್ನುವುದಕ್ಕೆ ಇರುವ ಸಹಸ್ರಾರು ಉದಾಹರಣೆಗಳಲ್ಲಿ ಒಂದು’ ಎಂದು ಕಮಲ್‌ ಕೊಂಡಾಡಿದರು. ಸಂಕೋಚದ ಸ್ವಭಾವದ ಇಳಯರಾಜ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡರು.

ಇಳಯರಾಜ ಸಮ್ಮುಖದಲ್ಲಿ ಹಾಡುವ ಕಷ್ಟದ ಕುರಿತು ಅಮಿತಾಭ್‌ ಮಾತನಾಡಿದರು. ‘ಪಾ ಸಿನಿಮಾದಲ್ಲಿ ಒಂದು ಸಾಲನ್ನು ಹಾಡಬೇಕಿತ್ತು. ಎದುರಲ್ಲಿ ಇಳಯರಾಜ ಅರ್ಥಾತ್‌ ರಾಜಾ ಸಾಬ್‌ ನಿಂತಿದ್ದರು. ಅವರ ಎದುರು ಹಾಡಲು ನನಗೆ ಗಂಟಲು ಅನುಮತಿಯನ್ನೇ ನೀಡುತ್ತಿರಲಿಲ್ಲ. ರಾಗವನ್ನು ಆಲಿಸಿ, ಅವರನ್ನು ತುಸು ದೂರ ನಿಲ್ಲುವಂತೆ ಹೇಳಿ ಹಾಡಿದೆ. ಈಗ ನೋಡಿದರೆ, ಒಂದು ಇಡೀ ಹಾಡನ್ನು ಹಾಡಿಸಿಬಿಟ್ಟರು’ ಎಂದು ಅಮಿತಾಭ್‌ ಇಳಯರಾಜ ಕಡೆ ನೋಡಿ, ನಕ್ಕರು.

ಕಮಲ ಹಾಸನ್‌ ಪುತ್ರಿ ಅಕ್ಷರ ಹಾಸನ್‌ಗೆ ಪದಾರ್ಪಣೆ ಸಿನಿಮಾ ಕೂಡ ಇದಾಗಿದ್ದು, ಮಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಕಮಲ್‌ ಅವರಿಗೆ ಇದೆ. ‘ರಾಂಝಣಾ‘ ನಂತರ  ಧನುಷ್‌ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಎರಡನೇ ಚಿತ್ರವಿದು. ಹಿಂದಿ ಸಿನಿಮಾಗಳಲ್ಲಿಯಾದರೂ ಹೊಸ ಪ್ರಯೋಗಗಳಿಗೆ ಮುಖಾಮುಖಿಯಾಗುವ ತಮ್ಮ ಬಯಕೆಯನ್ನು ಧನುಷ್ ವ್ಯಕ್ತಪಡಿಸಿದರು. ‘ಶಮಿತಾಭ್’ ಸಿನಿಮಾದ ಆಡಿಯೊ ಸೀಡಿ ಈಗಾಗಲೇ ಮಾರುಕಟ್ಟೆಯಲ್ಲಿ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.