ADVERTISEMENT

ಬ್ರೈಲ್‌: ಅಂಧರಿಗಿದು ಕಣ್ಣು

ಮಂಜುಶ್ರೀ ಎಂ.ಕಡಕೋಳ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಬ್ರೈಲ್‌: ಅಂಧರಿಗಿದು ಕಣ್ಣು
ಬ್ರೈಲ್‌: ಅಂಧರಿಗಿದು ಕಣ್ಣು   

‘ನಾ ಕಾಣೋ ಲೋಕವನ್ನು ಕಾಣೋರು ಯಾರೋ...?’

ಬಾಹ್ಯದ ದೃಷ್ಟಿ ಗೋಚರಿಸದಿದ್ದರೂ, ಅಂತರಂಗದ ದಿವ್ಯದೃಷ್ಟಿಯೊಳಗೆ ಕಾಣುವ ಲೋಕವನ್ನು ಅಂಧನೊಬ್ಬ ಬಣ್ಣಿಸುವ ಬಗೆಯಿದು. ಹೊರಗಣ್ಣು ಮಸುಕಾಗಿದ್ದರೂ ಅಂಧರ ಅಂತರಂಗದ ಕಣ್ಣು ಸದಾ ಬೆಳಕಿನತ್ತಲೇ ತುಡಿಯುತ್ತಿರುತ್ತದೆ. ಅಂಧರಿಗೆ ಅಂಥ ಬೆಳಕಿನ ಹಾದಿ ತೋರಿದ ಮಹಾನುಭಾವ ಲೂಯಿ ಬ್ರೈಲ್.

ಬೂಟು ಹೊಲಿದು ಬದುಕು ಸಾಗಿಸುತ್ತಿದ್ದ ಅಪ್ಪನ ಕುಶಲಕಲೆಯನ್ನು ಬಾಲ್ಯದಲ್ಲೇ ತಾನೂ ರೂಢಿಸಿಕೊಳ್ಳಲು ಹೊರಟ ಬಾಲಕ ಲೂಯಿ ಬ್ರೈಲ್ ಚರ್ಮ ಹೊಲೆಯುವ ಸೂಜಿಯ ಕಾರಣದಿಂದಲೇ ಅಂಧನಾಗಬೇಕಾಯಿತು. ಆದರೆ, ಓದಿನ ಬಗ್ಗೆ ಅಪಾರ ಆಸಕ್ತಿಯಿದ್ದ ಲೂಯಿ ಯೌವನದ ಹೊಸ್ತಿಲಿಗೆ ಕಾಲಿಡುತ್ತಲೇ ಅಂಧರಿಗಾಗಿ ಬ್ರೈಲ್ ಲಿಪಿ ರೂಪಿಸಿದ. ಅಂದು ಲೂಯಿ ರೂಪಿಸಿದ ಬ್ರೈಲ್ ಲಿಪಿ ಇಂದು ವಿಶ್ವವಿಖ್ಯಾತ.

ADVERTISEMENT

‘ಪಂಚಾಕ್ಷರ ಗವಾಯಿಗಳು ಇಲ್ಲದಿದ್ದರೆ ರಾಜ್ಯದ ಬಹುತೇಕ ಅಂಧರು ಭಿಕ್ಷುಕರಾಗಿರುತ್ತಿದ್ದರು’ ಅನ್ನುವ ಮಾತಿದೆ. ತಮ್ಮ ಸಂಗೀತ ಜ್ಞಾನದ ಬಲದಿಂದ ಪಂಚಾಕ್ಷರ ಗವಾಯಿಗಳು ಅಂಧರ ಬದುಕಿನ ಚಿತ್ರಣವನ್ನೇ ಬದಲಿಸಿದರೆ, ಅಂಥ ಬದುಕಿಗೆ ಅರ್ಥಪೂರ್ಣವಾದ ಅಕ್ಷರ ಭಾಷ್ಯ ಬರೆದಿದ್ದು ಲೂಯಿ ಅವರ ಬ್ರೈಲ್ ಲಿಪಿ.

ಆದರೆ, ಬದಲಾದ ತಂತ್ರಜ್ಞಾನದ ಈ ದಿನಮಾನಗಳಲ್ಲಿ ಬ್ರೈಲ್ ಲಿಪಿ ಸದ್ದಿಲ್ಲದೇ ನೇಪಥ್ಯಕ್ಕೆ ಸರಿಯುವ ಹಾದಿಯಲ್ಲಿದೆ. ಅಂಧರು ತಮ್ಮ ಆರನೇ ವಯಸ್ಸಿನಿಂದಲೇ ಬ್ರೈಲ್ ಲಿಪಿ ಕಲಿಯಲು ಆರಂಭಿಸುತ್ತಾರೆ. ಪ್ರಾಥಮಿಕ, ಪ್ರೌಢಶಾಲೆ ಮುಗಿದು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಬ್ರೈಲ್ ಲಿಪಿಗೆ ಗುಡ್‌ಬೈ ಹೇಳುವಂತಾಗಿದೆ ಎನ್ನುತ್ತಾರೆ ಬ್ರೈಲ್ ಲಿಪಿ ಕಲಿಸುವ ಶಿಕ್ಷಕರು.

‘ಅಂಧರು ಬ್ರೈಲ್ ಲಿಪಿ ಮೂಲಕ ಓದುವುದರಿಂದ ಅವರ ಗ್ರಹಿಕಾ ಸಾಮರ್ಥ್ಯ ಚೆನ್ನಾಗಿರುತ್ತದೆ. ಬ್ರೈಲ್ ಮೂಲಕ ಅಕ್ಷರಗಳ ಸ್ಪರ್ಶಜ್ಞಾನದಿಂದ ಓದುವ ವಿಧಾನ ನಿಜಕ್ಕೂ ಆನಂದ ತರುತ್ತದೆ. ಸಿಡಿಯಲ್ಲಿ ಕೇಳಿಸಿಕೊಂಡು ಕಲಿಯುವುದಕ್ಕೂ ಬ್ರೈಲ್ ಲಿಪಿ ಮೂಲಕ ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ’ ಎಂದು ಅಭಿಪ್ರಾಯಪಡುತ್ತಾರೆ ದೀಪಾ ಅಕಾಡೆಮಿ ಫಾರ್ ಡಿಫರೆಂಟ್ಲಿ ಎಬಲ್ಡ್‌ನ ಆರ್.ಎಸ್. ಶಾಂತಾರಾಂ.

‘2006ರಿಂದ ನಗರದಲ್ಲಿ ದೀಪಾ ಅಕಾಡೆಮಿ ನಡೆಸುತ್ತಿದ್ದೇನೆ. ನಮ್ಮಲ್ಲಿ 1ರಿಂದ 9ನೇ ತರಗತಿ ತನಕ ಬ್ರೈಲ್ ಲಿಪಿ ಕಲಿಯುವುದು ಕಡ್ಡಾಯ. ಹಿಂದೆ ಅಂಧರು ಆಸಕ್ತಿಯಿಂದ ಈ ಲಿಪಿಯನ್ನು ಕಲಿಯುತ್ತಿದ್ದರು. ಆದರೆ, ಈಗ ತಂತ್ರಜ್ಞಾನ ಸುಧಾರಿಸಿದೆ ಎನ್ನುವ ಕಾರಣಕ್ಕೆ ಬ್ರೈಲ್ ಲಿಪಿ ಕಲಿಕೆಯ ಆಸಕ್ತಿ ಕ್ಷೀಣವಾಗಿದೆ. ಹಾಗೆಂದು ಆಧುನಿಕ ತಂತ್ರಜ್ಞಾನದಿಂದ ಅಂಧರು ವಂಚಿತರಾಗಬೇಕೆಂದು ನಾನು ಬಯಸುವುದಿಲ್ಲ. ತಂತ್ರಜ್ಞಾನದ ಜತೆಗೆ ಸಾಂಪ್ರದಾಯಿಕ ಬ್ರೈಲ್ ಲಿಪಿ ಜ್ಞಾನವೂ ಅತ್ಯಗತ್ಯ’ ಎಂದು ಪ್ರತಿಪಾದಿಸುತ್ತಾರೆ ಅವರು.

’ಬ್ರೈಲ್ ಲಿಪಿ ಅಂಧರ ಕಣ್ಣಿದ್ದಂತೆ. ಅದಿಲ್ಲದೆ ಅವರು ಓದಲು, ಬರೆಯಲು ಅಸಾಧ್ಯ. ನಾನು ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ್ದು ಬ್ರೈಲ್ ಲಿಪಿಯ ನೋಟ್ಸ್‌ನಿಂದಲೇ. ಬಿ.ಎಡ್. ಕೂಡಾ ಇದರಿಂದಲೇ ಮುಗಿಸಿದೆ. ಶೇ 80ರಷ್ಟು ಅಂಕಗಳನ್ನು ಪಡೆದೆ. ಬ್ರೈಲ್‌ನಿಂದ ಅನೇಕ ಅವಕಾಶಗಳನ್ನು ಪಡೆದಿದ್ದೇನೆ. ಅಂಧರ  ಜೀವನದಲ್ಲಿ ಬ್ರೈಲ್ ವಹಿಸುವ ಪಾತ್ರ ಮಹತ್ವದ್ದು. ಮೊಬೈಲ್ ಮೂಲಕ ಕೇಳಿಸಿಕೊಂಡು ವಿಷಯಗಳನ್ನು ಅರಿಯಬಹುದು. ಆದರೆ ಬಹಳ ಹೊತ್ತು ಕೇಳಿಸಿಕೊಳ್ಳಲಾಗದು. ಸ್ಮರಣಶಕ್ತಿಗೂ ಬ್ರೈಲ್ ಲಿಪಿಗೂ ನಂಟಿದೆ. ಒಂದರ್ಥದಲ್ಲಿ ಬ್ರೈಲ್ ನಮ್ಮ ಪಾಲಿಗೆ ಕಣ್ಣು. ನೀವು ಕಣ್ಣಿನಿಂದ ಓದಿದರೆ ನಾವು ಕೈಯಿಂದ ಓದುತ್ತೇವೆ ಅಷ್ಟೇ’ ಎನ್ನುತ್ತಾರೆ ಅಂಧರಿಗೆ ಬ್ರೈಲ್ ಲಿಪಿ ಕಲಿಸುವ ಶಿಕ್ಷಕಿ ಪದ್ಮಾ ಸಿ.

‘ಓದುವುದರಲ್ಲಿ ಇರುವ ಸುಖಕ್ಕೆ ಮತ್ಯಾವುದೂ ಪರ್ಯಾಯವಲ್ಲ’ ಎನ್ನುವುದು ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ನಿರ್ದೇಶಕ ಡಾ.ಸಿದ್ದರಾಜು ಅವರ ಮಾತು.

‘ಕಂಪ್ಯೂಟರ್ ಕಲಿಯುತ್ತಿದ್ದಂತೆಯೇ ಅಂಧರ ಗಮನ ಅತ್ತ ಹೋಗುತ್ತಿದೆ. ಆದರೆ ಈಗಂತೂ ಮೊಬೈಲ್‌ ಮೂಲಕ ಕೇಳಿಸಕೊಳ್ಳಬಹುದಾದ ಶ್ರವ್ಯ ಪುಸ್ತಕಗಳು ಸಾಕಷ್ಟು ಇವೆ. ಕೆಲ ಆ್ಯಪ್‌ಗಳೂ ಓದಿ ಹೇಳುವ ಸೌಲಭ್ಯ ಕಲ್ಪಿಸುತ್ತವೆ. ಟಾಕಿಂಗ್ ಲ್ಯಾಪ್‌ಟಾಪ್‌ಗಳೂ ಮಾರುಕಟ್ಟೆಯಲ್ಲಿ ದೊಡ್ಡಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಬ್ರೈಲ್‌ ಲಿಪಿಯನ್ನು ಸ್ಪರ್ಶಿಸಿ ವಿಷಯಜ್ಞಾನ ಪಡೆಯುವುದಕ್ಕಿಂತ, ಆ್ಯಪ್‌ಗಳ ಮೂಲಕ ಕೇಳಿಸಿಕೊಂಡು ವಿಷಯ ಅರಿಯುವುದು ಸುಲಭ ಎಂಬ ನಿರ್ಧಾರಕ್ಕೆ ಹಲವು ಬಂದಿದ್ದಾರೆ’ ಎನ್ನುವುದು ಅವರ ವಿಷಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.