ADVERTISEMENT

ಬದುಕು ಬಿಂಬಿಸುವ ಚಿತ್ರಕಲೆ

ಕೆ.ಬಿ.ಭೀಮಪ್ಪ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಬದುಕು ಬಿಂಬಿಸುವ ಚಿತ್ರಕಲೆ
ಬದುಕು ಬಿಂಬಿಸುವ ಚಿತ್ರಕಲೆ   

ವಿಶಾಲ ಕೋಣೆಯಲ್ಲಿ ನೂರಾರು ಚಿತ್ರಗಳು. ಒಂದಕ್ಕಿಂತಲೂ ಒಂದು ಅದ್ಭುತ. ಅಕ್ರಲಿಕ್‌, ಆಯಿಲ್‌, ವಾಟರ್... ಸೇರಿದಂತೆ ಹಲವು ಮಾಧ್ಯಮಗಳಲ್ಲಿ ರೂಪುಗೊಂಡಿದ್ದ ಚಿತ್ರಗಳು ಸಮಾಜದ ಒಳಿತಿನ ಕಾಳಜಿಯನ್ನು ಬಿಂಬಿಸುತ್ತಿದ್ದವು. ಕೆಲ ಚಿತ್ರಗಳು ನಗರದ ಹತ್ತಾರು ಸಮಸ್ಯೆಗಳನ್ನು ಬಿಂಬಿಸುತ್ತಿದ್ದವು.

ಅಲ್ಲೇ ಮಾತಿಗೆ ಸಿಕ್ಕ ಕಲಾವಿದೆ ಶ್ಯಾಮಲಾ ಗುರುಪ್ರಸಾದ್, ‘ಕ್ಯಾನ್‌ವಾಸ್‌ ಮೇಲೆ ಬಿಡಿಸಿದ ಅಕ್ರಲಿಕ್‌ ಕಲೆ ಇದು. ಮನೆ ಮುಂದಿನ ಮರದಲ್ಲಿ ಕೆಲ ಹಕ್ಕಿಗಳು ಕುಳಿತಿದ್ದವು. ಅವುಗಳನ್ನು ನೋಡಿದಾಗ ಮನಸಿಗೆ ಖುಷಿ ಎನಿಸಿತು. ಅಂದಿನಿಂದಲೇ ಚಿತ್ರಕಲೆಯ ಆಸಕ್ತಿ ಮೂಡಿತು’ ಎಂದು ತಾವು ಕಲಾವಿದರಾದ ಘಳಿಗೆಯನ್ನು ನೆನಪಿಸಿಕೊಂಡರು.

‘ನಗರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ನಿಸರ್ಗಸ್ನೇಹಿ ಬದುಕು ಮತ್ತು ವಸ್ತುಗಳು ಕಣ್ಮರೆಯಾಗುತ್ತಿವೆ. ನನ್ನ ಚಿತ್ರಗಳಲ್ಲಿ ಈ ಅಂಶವನ್ನೇ ಮುಖ್ಯವಾಗಿ ಬಿಂಬಿಸಿದ್ದೇನೆ’ ಎನ್ನುತ್ತಾರೆ ಅವರು.

ADVERTISEMENT


ಶ್ಯಾಮಲಾ

ಟೆಲಿ ಕಮ್ಯೂನಿಕೇಶನ್‌ ಎಂಜಿನಿಯರಿಂಗ್‌ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಕಲಾವಿದ ರಘೋತ್ತಮ್‌ ಹರೀಶ್‌. ‘ಪ್ರದರ್ಶನದಲ್ಲಿ ನಾನು ಬಿಡಿಸಿದ ಒಟ್ಟು ಮೂವತ್ತು ಚಿತ್ರಗಳು ಪ್ರದರ್ಶನದಲ್ಲಿವೆ. ನಗರ ಪ್ರದೇಶಗಳು ಸದಾ ಗಿಜಿಗುಡುತ್ತಿರುತ್ತವೆ. ಆದರೆ ಮಲೆನಾಡು ಹಾಗಲ್ಲ. ಅಲ್ಲಿಗೆ ಪ್ರವಾಸ ಹೋಗಿದ್ದಾಗ ಹೊಸ ಕಲ್ಪನೆಗಳು ಮೂಡಿದವು. ನನ್ನ ಚಿತ್ರಗಳಿಗೆ ಅದು ಮುಖ್ಯ ಪ್ರೇರಣೆ’ ಎನ್ನುತ್ತಾರೆ ಅವರು.

ಚಿತ್ರಕಲಾ ಪರಿಷತ್‌ನಲ್ಲಿ ಬಿವಿಎ ಓದಿರುವ ಮನಸ್ವಿನಿ ಎಲ್‌. ಭಟ್‌, ಚಿತ್ರಕಲೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರ ಒಂಬತ್ತು ಚಿತ್ರಗಳು ಪ್ರದರ್ಶನದಲ್ಲಿವೆ. ‘ಈ ಚಿತ್ರಗಳನ್ನು ಬಿಡಿಸಲು ಒಂದು ತಿಂಗಳು ಬೇಕಾಯಿತು. ಮನುಷ್ಯರಿಗೆ ಎರಡು ಮುಖಗಳಿರುತ್ತವೆ; ಒಂದು ಒಳ್ಳೆಯದು, ಮತ್ತೊಂದು ಕೆಟ್ಟದು. ನನ್ನ ಬಹುತೇಕ ಚಿತ್ರಗಳು ಎರಡೂ ಮುಖಗಳನ್ನು ತೋರಿಸುತ್ತವೆ’ ಎಂದು ವಿವರಿಸುತ್ತಾರೆ.

‘ನನ್ನ ಕೈಲಿ ಸದಾ ಡ್ರಾಯಿಂಗ್‌ ಪುಸ್ತಕ ಇರುತ್ತೆ. ಒಮ್ಮೆ ಮಾಲ್‌ಗೆ ಹೋದಾಗ ವೀಲ್‌ಚೇರ್‌ನಲ್ಲಿ ಅಜ್ಜಿಯೊಬ್ಬರು ಕುಳಿತಿದ್ದರು. ಅದನ್ನು ಗಮನಿಸಿ ಚಿತ್ರ ಬರೆದೆ. ಗುಡಿಸಲಿನಲ್ಲಿ ಒಬ್ಬರು ವಯಸ್ಸಾದ ಮುದುಕಿ ಕುಳಿತಿದ್ದರು. ಅವರ ಜತೆ ಮಾತಾಡಿದಾಗ ಅವರು ತಮ್ಮ ಬಾಲ್ಯ, ಯೌವನ ಹಾಗೂ ಮಕ್ಕಳ ಬಗ್ಗೆ ಹೇಳಿಕೊಂಡರು. ನಸುಕಿನ ಎರಡು ಗಂಟೆಗೆ ಒಮ್ಮೆ ಕೆ.ಆರ್.ಮಾರುಕಟ್ಟೆಗೆ ಹೋಗಿದ್ದೆ. ಹೂ ವ್ಯಾಪಾರ ಗಮನಿಸಿದಾಗ ಅದೂ ಚಿತ್ರವೊಂದಕ್ಕೆ ಪ್ರೇರಣೆಯಾಯಿತು’ ಎಂದು ಹೇಳಿದರು ಕಲಾವಿದೆ ಎಂ.ಜಿ. ದಿವ್ಯಾ.

***

ಕಲಾಪ

ದಿ ಕ್ವಿನರಿ ಶೋ: ಶ್ಯಾಮಲಾ ಗುರುಪ್ರಸಾದ್, ಮನಸ್ವಿನಿ ಎಲ್‌.ಭಟ್, ದಿವ್ಯಾ ಎಂ.ಜಿ, ತಾಯಡಾ ಶಂಶುದ್ದೀನ್ ಮತ್ತು ರಘೋತ್ತಮ್ ಹರೀಶ್ ಅವರ ಕಲಾಕೃತಿಗಳ ಪ್ರದರ್ಶನ. ಸ್ಥಳ– ವೆಂಕಟಪ್ಪ ಆರ್ಟ್‌ ಗ್ಯಾಲರಿ, ಶುಕ್ರವಾರ ಕೊನೆಯ ದಿನ. ಸಂಪರ್ಕಕ್ಕೆ: 81974 54644

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.