ADVERTISEMENT

ಅಜಿತ್‌ ಡೊಭಾಲ್‌: ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರ

​ಪ್ರಜಾವಾಣಿ ವಾರ್ತೆ
Published 30 ಮೇ 2014, 19:30 IST
Last Updated 30 ಮೇ 2014, 19:30 IST

ನವದೆಹಲಿ (ಪಿಟಿಐ): ಗುಪ್ತದಳದ ಮಾಜಿ ಮುಖ್ಯಸ್ಥ ಅಜಿತ್‌ ಡೊಭಾಲ್‌ ಅವರನ್ನು ಶುಕ್ರವಾರ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ (ಎನ್‌ಎಸ್‌ಎ) ನೇಮಕ ಮಾಡಲಾಗಿದೆ.

ಪ್ರತಿಷ್ಠಿತ ಎನ್‌ಎಸ್‌ಎ ಹುದ್ದೆಗೆ ಡೊಭಾಲ್‌ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿ­ಸಿದೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ   ನೇಮಕ ಮಾಡಿದ ಎರಡನೇ ದೊಡ್ಡ ಹುದ್ದೆ ಇದಾಗಿದೆ.

ಇದಕ್ಕೂ ಮೊದಲು ಪ್ರಧಾನಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೃಪೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿತ್ತು.

1968ನೇ ತಂಡದ ಕೇರಳ ಶ್ರೇಣಿಯ ಐಪಿಎಸ್‌ ಅಧಿಕಾರಿಯಾಗಿರುವ 69 ವರ್ಷದ ಡೋಭಾಲ್‌ ಅವರು ಶಿವ­ಶಂಕರ್‌ ಮೆನನ್‌ ಅವರಿಂದ ಅಧಿಕಾರ ವಹಿಸಿ­ಕೊಳ್ಳಲಿ­ದ್ದಾರೆ.

ದೇಶದ ಆಂತರಿಕ ಭದ್ರತೆ, ಬಾಹ್ಯ ಬೆದರಿಕೆ ಹಾಗೂ ಸಾಗ­ರೋತ್ತರ ಕಾರ್ಯ­ತಂತ್ರ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಪ್ರಧಾನಿಗೆ ಸಲಹೆ ನೀಡಲಿ­ದ್ದಾರೆ. ಭಾರತ–ಚೀನಾ ಗಡಿ ವಿಷಯ­ಗಳಿಗೆ ಸಂಬಂಧಿಸಿದಂತೆ  ಅವರು ಪ್ರಧಾನಿ ಪ್ರತಿನಿಧಿಯಾಗಿಯೂ ಕೆಲಸ ನಿರ್ವಹಿಸಲಿದ್ದಾರೆ.

ಗುಪ್ತದಳ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮುಖ್ಯಸ್ಥರು  ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ವರದಿ ನೀಡುವುದು ಸಂಪ್ರದಾಯ. ಅವರು ಈ ವರದಿಯನ್ನು  ಪ್ರಧಾನಿ ಗಮನಕ್ಕೆ ತರುತ್ತಾರೆ.

2005ರಲ್ಲಿ ಗುಪ್ತದಳದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಡೊಭಾಲ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರನ ಹುದ್ದೆಗೆ ಏರಿದ ಎರಡನೇ ಐಪಿಎಸ್‌ ಅಧಿಕಾರಿ. ಇದಕ್ಕೂ ಮೊದಲು ಮತ್ತೊಬ್ಬ ನಿವೃತ್ತ ಐಪಿಎಸ್‌ ಅಧಿಕಾರಿ ಎಂ.ಕೆ. ನಾರಾಯಣ ಭದ್ರತಾ ಸಲಹೆಗಾರರಾಗಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತ ಅವಧಿಯಲ್ಲಿ (ನವೆಂಬರ್‌, 1998) ಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆ ಸೃಷ್ಟಿಸಿ, ಹಿರಿಯ ರಾಜತಾಂತ್ರಿಕ ಬೃಜೇಶ್‌ ಮಿಶ್ರಾ ಅವರನ್ನು ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.