ADVERTISEMENT

ಅತ್ಯಾಚಾರ: ಹಿನ್ನೆಲೆ ಗಾಯಕ ಅಂಕಿತ್‌ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ಮುಂಬೈ (ಪಿಟಿಐ): ಗೆಳತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ, ‘ಆಶಿಕಿ–2’ ಚಿತ್ರದ ‘ಸುನ್‌ ರಹಾ ಹೈ ನಾ’ ಗೀತೆಯ ಹಿನ್ನೆಲೆ ಗಾಯಕ ಅಂಕಿತ್‌ ತಿವಾರಿ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಅಂಕಿತ್‌ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ವರ್ಷ­ಗಳ ಕಾಲ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದರು. ಈಗ ಕೊಟ್ಟ ಮಾತಿಗೆ ತಪ್ಪಿ­ದ್ದಾರೆ’ ಎಂದು ಅವರ ಗೆಳತಿ ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಯುವತಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಅಂಕಿತ್‌ ಅವರ ಸಹೋದರ ಅಂಕುರ್‌ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಅಂಕಿತ್‌ ಅವರ ವಿರುದ್ಧ ಭಾರತ ದಂಡ ಪ್ರಕ್ರಿಯಾ ಸಂಹಿತೆ 376 (ಅತ್ಯಾಚಾರ), 493 (ಮದುವೆಯಾಗುವುದಾಗಿ ನಂಬಿಸಿ ವಂಚನೆ ಎಸಗು­ವುದು), 506 (2) (ಬೆದರಿಕೆ) ಅಡಿ ಹಾಗೂ ಅಂಕುರ್‌ ಅವರ ವಿರುದ್ಧ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪರ ವಕೀಲ ನಾಗೇಶ್‌ ಮಿಶ್ರಾ ಅವರು, ‘ಆರೋಪ­ದಲ್ಲಿ ಯಾವುದೇ ಹುರು­ಳಿಲ್ಲ. ಹಣಕ್ಕಾಗಿ ಸಂಚು ರೂಪಿಸಿ­ಲಾಗಿದೆ’ ಎಂದಿದ್ದಾರೆ.

ಕೇಂದ್ರ ನೌಕರರ ವಿವಿಧ ಭತ್ಯೆ ಹೆಚ್ಚಳ
ನವದೆಹಲಿ (ಪಿಟಿಐ):
ಮಕ್ಕಳ ಶೈಕ್ಷಣಿಕ ಭತ್ಯೆ ಸೇರಿದಂತೆ  ಕೇಂದ್ರ ಸರ್ಕಾರವು ತನ್ನ ಸುಮಾರು 50  ಲಕ್ಷ ನೌಕರರ ಕೆಲವೊಂದು ಭತ್ಯೆಗಳನ್ನು ಹೆಚ್ಚಿಸಿದೆ.

‘ಮಕ್ಕಳ ಶೈಕ್ಷಣಿಕ ಭತ್ಯೆ ಮಿತಿಯನ್ನು ವಾರ್ಷಿಕ  ರೂ. 18,000­ಕ್ಕೆ ಏರಿಸಲಾಗಿದೆ (ತಿಂಗ­ಳಿಗೆ ರೂ. 1,500 )’  ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಬುಧವಾರ ಹೊರ­ಡಿ­ಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಈ ಮೊದಲು ಈ ಮೊತ್ತ ವಾರ್ಷಿಕ  ರೂ. 12,000 ಇತ್ತು. ಅಂಗವಿಕಲ ಮಹಿಳೆಯರ ಮಗು ಆರೈಕೆಗೆ ನೀಡುವ ವಿಶೇಷ ಭತ್ಯೆ­ಯನ್ನು ಮಾಸಿಕ ರೂ. 1,000ದಿಂದ ರೂ. 1,500ಕ್ಕೆ ಏರಿಸಲಾಗಿದೆ. ಸರ್ಕಾರಿ ಉದ್ಯೋಗಿ­ಗಳ ಅಂಗವಿಕಲ ಮಕ್ಕಳ ಶೈಕ್ಷಣಿಕ ಭತ್ಯೆ ವಾರ್ಷಿಕ ರೂ. 36,000ಕ್ಕೆ ಏರಿಸಲಾಗಿದೆ. (ಪ್ರತಿ ತಿಂಗಳು ರೂ. 3,000). ಈ ಮೊದಲು ಈ ಮೊತ್ತ ಪ್ರತಿ ತಿಂಗಳು ರೂ. 2,000 ಇತ್ತು.
ಪರಿಷ್ಕೃತ ಭತ್ಯೆಗಳು ಇದೇ ಜನವರಿ 1ರಿಂದ ಪೂರ್ವಾನ್ವಯವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.