ADVERTISEMENT

ಅನಿಶ್ಚಿತತೆಯಲ್ಲಿ ರಾಜ್ಯಪಾಲರ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST

ನವದೆಹಲಿ (ಪಿಟಿಐ): ಕರ್ನಾಟಕದ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಮತ್ತು ಪಂಜಾಬ್‌ ರಾಜ್ಯಪಾಲ ಶಿವರಾಜ್‌ ವಿ. ಪಾಟೀಲ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಪಾಲರ ಭವಿಷ್ಯ  ಅನಿಶ್ಚಿತವಾಗಿದೆ.

ಸೋಮವಾರ (ಮೇ 26) ಪ್ರಧಾನಿ­ಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ, ಸಾರಾಸಗಟಾಗಿ ಎಲ್ಲಾ ರಾಜ್ಯ­ಗಳ ರಾಜ್ಯಪಾಲರನ್ನು ತೆಗೆದುಹಾಕುವ ನಿರ್ಧಾರ ಕೈಗೊಳ್ಳದಿದ್ದರೂ ಕೆಲವು ರಾಜ್ಯಪಾಲರಿಗೆ ರಾಜೀನಾಮೆ ನೀಡು­ವಂತೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಹೊಸ ಸರ್ಕಾರದ ನೀತಿ– ನಿಲುವು­ಗಳಿಗೆ ಒಗ್ಗಿಕೊಳ್ಳದ ರಾಜ್ಯಪಾಲರನ್ನು ಬದಲಿಸುವ ವಾಡಿಕೆ ಮೊದಲಿನಿಂದಲೂ ಇದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಚ್‌.ಆರ್‌. ಭಾರದ್ವಾಜ್‌ (ಕರ್ನಾಟಕ), ಜಗನ್ನಾಥ್‌ ಪಹಾಡಿಯಾ (ಹರಿಯಾಣ), ದೇವಾನಂದ್‌ ಕೊನ್ವಾರ್‌ (ತ್ರಿಪುರಾ), ಮಾರ್ಗರೆಟ್‌ ಆಳ್ವ (ರಾಜಸ್ತಾನ) ಅವರ ಅಧಿಕಾರಾವಧಿ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕೊನೆಗೊಳ್ಳಲಿದೆ. ಇವರಿಗೆ ಅವಧಿಗೂ ಮುನ್ನ ರಾಜೀನಾಮೆ ನೀಡುವಂತೆ ಹೊಸ ಸರ್ಕಾರ ಸೂಚಿಸುವುದೇ ಎಂಬುದು ಕುತೂಹಲ ಕೆರಳಿಸಿದೆ.

ಕಮಲಾ ಬೇನಿವಾಲ್‌ (ಗುಜರಾತ್‌), ಎಂ.ಕೆ.ನಾರಾಯಣನ್‌ (ಪಶ್ಚಿಮ ಬಂಗಾಳ), ಜೆ.ಬಿ. ಪಟ್ನಾಯಕ್‌ (ಅಸ್ಸಾಂ), ಶಿವರಾಜ್‌ ವಿ ಪಾಟೀಲ್‌ (ಪಂಜಾಬ್‌) ಮತ್ತು ಊರ್ಮಿಳಾ ಸಿಂಗ್‌ (ಹಿಮಾಚಲ ಪ್ರದೇಶ) ಇವರ ಅಧಿಕಾರವು ಎಂಟು– ಹತ್ತು ತಿಂಗಳಲ್ಲಿ ಮುಗಿಯಲಿದೆ. ಇವರನ್ನು ಹೊಸ ಸರ್ಕಾರ ಬಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರದ್ವಾಜ್‌ ಅವರು ಹಿಂದಿನ ಬಿಜೆಪಿ ಸರ್ಕಾರದ ಜೊತೆಗೆ ಮಧುರ ಸಂಬಂಧ­ವೇನೂ ಹೊಂದಿರಲಿಲ್ಲ. ಗುಜರಾತ್ ಲೋಕಾಯುಕ್ತರ ನೇಮಕಾತಿ ಸಂಬಂಧ ಮುಖ್ಯಮಂತ್ರಿ ಮೋದಿ ಮತ್ತು  ರಾಜ್ಯಪಾಲ­ರಾದ ಬೇನಿವಾಲ್‌ ಮಧ್ಯೆ  ವೈಮನಸ್ಯ ಉಂಟಾಗಿತ್ತು. ರಾಜಸ್ತಾನ ರಾಜ್ಯಪಾಲರಾದ  ಮಾರ್ಗರೇಟ್‌ ಆಳ್ವಾ ಮತ್ತು ಮುಖ್ಯಮಂತ್ರಿ ವಸುಂಧರಾ ರಾಜೆ ಮಧ್ಯೆ ಉತ್ತಮ ಸಂಬಂಧ ಇದೆ ಎನ್ನಲಾಗಿದೆ.

ಕೇರಳದ ರಾಜ್ಯಪಾಲರಾಗಿ ಕಳೆದ ಮಾರ್ಚ್‌ನಲ್ಲಿ ನೇಮಕವಾಗಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌, ಮಣಿಪುರದ ರಾಜ್ಯಪಾಲರಾಗಿ 2013ರ ಡಿಸೆಂಬರ್‌ನಲ್ಲಿ ನೇಮಕ­ಗೊಂಡ ಮಾಜಿ ಗೃಹ ಕಾರ್ಯದರ್ಶಿ ವಿ.ಕೆ. ದುಗ್ಗಲ್‌,  ಎರಡನೇ ಅವಧಿಗೂ ಅಧಿಕಾರದಲ್ಲಿ ಮುಂದುವರಿದಿರುವ ರಾಜ್ಯಪಾಲರಾದ ಬಿ.ಎಲ್‌.ಜೋಷಿ (ಉತ್ತರ ಪ್ರದೇಶ),  ಎನ್‌.ಎನ್‌.ವೋರಾ (ಜಮ್ಮು ಮತ್ತು ಕಾಶ್ಮೀರ) ಹಾಗೂ ಕೆ. ಸತ್ಯನಾರಾಯಣ (ಮಹಾರಾಷ್ಟ್ರ) ಅವರ ಹೆಸರೂ ಬದಲಾವಣೆ ಪಟ್ಟಿಯಲ್ಲಿ ಇದೆ ಎಂದು ತಿಳಿದು ಬಂದಿದೆ.

ಉಳಿದಂತೆ ಬಿ.ವಿ. ವಾಂಚೊ (ಗೋವಾ), ಕೆ. ರೋಸಯ್ಯ (ತಮಿಳುನಾಡು), ರಾಂ ನರೇಶ್‌ ಯಾದವ್‌ (ಮಧ್ಯಪ್ರದೇಶ), ಡಿ.ವೈ. ಪಾಟೀಲ್‌ (ಬಿಹಾರ), ಶ್ರೀನಿವಾಸ್‌ ದಾದಾಸಾಹೇಬ್ ಪಾಟೀಲ್‌ (ಸಿಕ್ಕಿಂ), ವಕ್ಕಂ ಪುರುಷೋತ್ತಮನ್‌ (ಮಿಜೋರಾಂ) ಮತ್ತು ಸೈಯದ್‌ ಅಹ್ಮದ್‌ (ಜಾರ್ಖಂಡ್‌), ಶೇಖರ್‌ ದತ್ತ (ಛತ್ತೀಸಗಡ), ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ನಿರ್ಭಯ್‌ ಶರ್ಮಾ (ಅರುಣಾಚಲ ಪ್ರದೇಶ), ಅಶ್ವನಿ ಕುಮಾರ್‌ (ನಾಗಾಲ್ಯಾಂಡ್‌), ಕೆ.ಕೆ. ಪೌಲ್‌ (ಮೇಘಾಲಯ) ಅವರ ಭವಿಷ್ಯವೂ ಅನಿಶ್ಚಿತ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.