ADVERTISEMENT

ಅಬು ಸಲೇಂ,ದೊಸ್ಸಾ ಸೇರಿ 6 ಮಂದಿ ತಪ್ಪಿತಸ್ಥರು

ವಿಶೇಷ ‘ಟಾಡಾ’ ನ್ಯಾಯಾಲಯದಿಂದ 2ನೇ ಹಂತದ ತೀರ್ಪು ಪ್ರಕಟ

ಪಿಟಿಐ
Published 16 ಜೂನ್ 2017, 20:11 IST
Last Updated 16 ಜೂನ್ 2017, 20:11 IST
ಅಬು ಸಲೇಂ,ದೊಸ್ಸಾ ಸೇರಿ 6 ಮಂದಿ ತಪ್ಪಿತಸ್ಥರು
ಅಬು ಸಲೇಂ,ದೊಸ್ಸಾ ಸೇರಿ 6 ಮಂದಿ ತಪ್ಪಿತಸ್ಥರು   

ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿದಂತೆ  ಆರು ಜನರು ತಪ್ಪಿತಸ್ಥರು ಎಂದು ಇಲ್ಲಿಯ ವಿಶೇಷ ‘ಟಾಡಾ’ ನ್ಯಾಯಾಲಯ ತೀರ್ಪು ನೀಡಿದೆ.

257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟ ಸಂಭವಿಸಿ 24 ವರ್ಷಗಳ ನಂತರ ಎರಡನೇ ಹಂತದ ವಿಚಾರಣೆಯಲ್ಲಿ ಏಳು ಜನರ ಪೈಕಿ ಅಬ್ದುಲ್ ಖಯಾಂನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಖುಲಾಸೆ ಗೊಳಿಸಲಾಗಿದೆ. ಈ ಏಳು ಜನರ ವಿರುದ್ಧ ಕ್ರಿಮಿನಲ್ ಸಂಚು, ಸರ್ಕಾರದ ವಿರುದ್ಧ ದಾಳಿ ಮತ್ತು ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.

2007ರಲ್ಲಿ ಮುಗಿದ ಮೊದಲ ಹಂತದ ವಿಚಾರಣೆಯಲ್ಲಿ ನೂರು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ 23 ಜನರನ್ನು ನಿರ್ದೋಷಿಗಳು ಎಂದು ಖುಲಾಸೆ ಮಾಡಲಾಗಿದೆ.

ಮೊದಲ ಹಂತದ ವಿಚಾರಣೆ ಮುಗಿಯುವ ಹಂತದಲ್ಲಿ ಮುಸ್ತಫಾ ದೊಸ್ಸಾ , ಅಬು ಸಲೇಂ, ಕರಿಮುಲ್ಲಾ ಖಾನ್, ಫಿರೋಜ್ ಅಬ್ದುಲ್ ರಶೀದ್ ಖಾನ್, ರಿಯಾಜ್ ಸಿದ್ದಕಿ, ತಹಿರ್ ಮರ್ಚಂಟ್ ಮತ್ತು ಅಬ್ದುಲ್ ಖಯಾಂನನ್ನು  ಬಂಧಿಸಿದ್ದರಿಂದ ಮುಖ್ಯ ವಿಚಾರಣೆಯಿಂದ ಇವರ ವಿಚಾರಣೆಯನ್ನು ಬೇರ್ಪಡಿಸಿ ಎರಡನೇ ಹಂತದಲ್ಲಿ ವಿಚಾರಣೆ ನಡೆಸಲಾಯಿತು.

ಭಯಾನಕ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸತ್ತಿದ್ದಲ್ಲದೆ 713 ಜನರು ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ ` 27 ಕೋಟಿ  ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

ಸಿದ್ದಿಕಿಯನ್ನು ಹೊರತುಪಡಿಸಿ ಉಳಿದ ಐವರ ವಿರುದ್ಧದ  ಕ್ರಿಮಿನಲ್ ಸಂಚು, ಕೊಲೆ, ಶಸ್ತ್ರಾಸ್ತ್ರ ಕಾಯ್ದೆ, ಟಾಡಾ ಕಾಯ್ದೆ ಪ್ರಕಾರ ಮಾಡಲಾಗಿರುವ ಆಪಾದನೆಗಳು ಸಾಬಿತಾಗಿವೆ ಎಂದು ವಿಶೇಷ ನ್ಯಾಯಾಧೀಶ ಜಿ. ಎ. ಸನಪ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ಅಬು ಸಲೇಂ ಮತ್ತಿತರರಿಗೆ ಶಸ್ತ್ರಾಸ್ತ್ರ ಸಾಗಾಟ ಮಾಡಲು ಸಹಾಯ ಮಾಡಿದ ಕಾರಣಕ್ಕೆ ಟಾಡಾ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಮಾತ್ರ ಸಿದ್ದಿಕಿ ತಪ್ಪಿತಸ್ಥ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ಏಳು ಜನರ ವಿರುದ್ಧ  ಹೊರಿಸಲಾಗಿದ್ದ ಆಪಾದನೆ ಸಾಬೀತಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಆರ್‌ಡಿಎಕ್ಸ್ ಮತ್ತು ಇತರ ಸ್ಫೋಟಕಗಳನ್ನು ದೊಸ್ಸಾ  ಸರಣಿ ಸ್ಫೋಟಕ್ಕೆ ಸ್ವಲ್ಪ  ದಿನ ಮೊದಲು ಭಾರತಕ್ಕೆ ತಂದಿದ್ದ ಹಾಗೂ  ಶಸ್ತ್ರಾಸ್ತ್ರ ತರಬೇತಿಗಾಗಿ ಕೆಲವು ಯುವಕರನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ ಎಂದು ಆಪಾದಿಸಲಾಗಿದೆ.

ದೊಸ್ಸಾ  ತಂದಿದ್ದ ಸ್ಫೋಟಕಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಅಬು ಸಲೇಂ ಗುಜರಾತ್‌ನಿಂದ ಮುಂಬೈಗೆ ಸಾಗಿಸಿದ್ದ. ಎರಡು ಎಕೆ–47 ರೈಫಲ್‌ಗಳನ್ನು ನಟ ಸಂಜಯ್ ದತ್‌ಗೆ ನೀಡಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸಿಬಿಐ ಕೋರಿಕೆಯಂತೆ ಅಬು ಸಲೇಂ ವಿರುದ್ಧದ ಕೆಲವು ಆಪಾದನೆಗಳನ್ನು ನ್ಯಾಯಾಧೀಶರು ತೆಗೆದು ಹಾಕಿದ್ದರು. ಭಾರತ ಮತ್ತು ಪೋರ್ಚುಗಲ್ ನಡುವ ಆಗಿರುವ ಅಪರಾಧಿಗಳ ಹಸ್ತಾಂತರ ಒಪ್ಪಂದದ ಪ್ರಕಾರ ಕೆಲವು ಆಪಾದನೆಗಳನ್ನು ಹೊರಿಸಲು ಅವಕಾಶ ಇರುವುದಿಲ್ಲ ಎಂದು ಸಿಬಿಐ ತಿಳಿಸಿತ್ತು.

750 ಸರ್ಕಾರಿ ಸಾಕ್ಷ್ಯಗಳು, 50 ಸಾಕ್ಷಿಗಳು, ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ದಾಖಲೆಗಳ ಆಧಾರದ ಮೇಲೆ ನ್ಯಾಯಾಧೀಶರು ಆರು ಜನರನ್ನು ತಪ್ಪಿತಸ್ಥರು ಎಂದು ಘೋಷಿಸಿದ್ದಾರೆ.

ಎರಡನೇ ಹಂತದ ವಿಚಾರಣೆ 2007ರಲ್ಲೇ ಆರಂಭ ಆಗಿದ್ದರೂ ದೊಸ್ಸಾ, ಸಲೇಂ ಮತ್ತು ಸಿಬಿಐ ಸುಪ್ರೀಂಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರಿಂದ  ವಿಚಾರಣೆ ಮುಕ್ತಾಯವಾಗಲು ವಿಳಂಬವಾಗಿದೆ.

ಆರಂಭದಲ್ಲಿ ವಿಶೇಷ ನ್ಯಾಯಾಧೀಶ ಪ್ರಮೋದ್ ಖೋಡೆ ಅವರು ವಿಚಾರಣೆ ನಡೆಸಿ 2007ರಲ್ಲಿ ನೂರು ಜನರಿಗೆ ಶಿಕ್ಷೆ ವಿಧಿಸಿದ್ದಾರೆ.2013ರಲ್ಲಿ ಯಾಕೂಬ್ ಮೆಮೊನ್‌ನ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಇತರ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿ ಸುಪ್ರೀಂ ತೀರ್ಪು ನೀಡಿದ ನಂತರ ಟಾಡಾ ನ್ಯಾಯಾಲಯದಲ್ಲಿ ವಿಚಾರಣೆ ತ್ವರಿತಗೊಂಡಿತು.

ಪಾಕಿಸ್ತಾನ, ಕೊಲ್ಲಿ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿರುವ ಆಪಾದಿತರು
ಮುಂಬೈ:
ಮುಂಬೈ ಸರಣಿ ಬಾಂಬ್ ಸ್ಫೊಟವಾಗಿ 24 ವರ್ಷ ಕಳೆದರೂ  ಸುಮಾರು ಎರಡು ಡಜನ್‌ಗಳಷ್ಟು ಆಪಾದಿತರು ಇನ್ನೂ ತಲೆಮರೆಸಿ ಕೊಂಡಿದ್ದಾರೆ. ಕುಖ್ಯಾತ ಪಾತಕಿ, ಘೋಷಿತ ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕಾಸ್ಕರ್ ಮತ್ತು ಇಬ್ರಾಹಿಂ ಮುಸ್ತಾಕ್ ಅಬ್ದುಲ್ ರಜಾಕ್ ನದಿಂ ಮೆಮೊನ್ ಅಲಿಯಾಸ್ ಟೈಗರ್ ಮೆಮೊನ್ ಸೇರಿದಂತೆ ಸುಮಾರು 24 ಆಪಾದಿತರನ್ನು ಬಂಧಿಸಲು ಪೊಲೀಸರಿಗೆ ಇದುವರೆಗೆ ಸಾಧ್ಯವಾಗಲಿಲ್ಲ. ಆಪಾದಿತರು ಪಾಕಿಸ್ತಾನ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.  ಇವರ ವಿರುದ್ಧ ಇಂಟರ್‌ಪೋಲ್ ರೆಡ್‌ ಕಾರ್ನರ್ ನೋಟಿಸನ್ನೂ ಹೊರಡಿಸಿದೆ.

ತೀರ್ಪು ಸ್ವಾಗತಾರ್ಹ
ಮುಂಬೈ:
1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಅಬು ಸಲೇಂ, ಮುಸ್ತಾಫಾ ದೋಸ್ಸಾ ಸೇರಿದಂತೆ ಆರು ಮಂದಿಯನ್ನು ತಪ್ಪಿತಸ್ಥರು ಎಂದು ‘ಟಾಡಾ’ ಕೋರ್ಟ್‌ ನೀಡಿರುವ ತೀರ್ಪನ್ನು  ನಿವೃತ್ತ ಐಪಿಎಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಸ್ವಾಗತಿಸಿದ್ದಾರೆ. ‘ನಮ್ಮ ತನಿಖಾ ವರದಿಯನ್ನು  ಕೋರ್ಟ್‌ ಮಾನ್ಯ ಮಾಡಿರುವುದು  ತುಂಬಾ ಸಂತೋಷ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.