ADVERTISEMENT

ಅಲೆಪ್ಪಿ: ಶಂಕಿತ ವಿದೇಶಿ ದೋಣಿ ವಶ

ಸ್ಯಾಟಲೈಟ್‌ ಫೋನ್‌, ಪಾಕಿಸ್ತಾನದ ಗುರುತಿನ ಚೀಟಿ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ತಿರುವನಂತಪುರ (ಪಿಟಿಐ): ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಿದೇಶಿ ದೋಣಿಯೊಂದನ್ನು ಕೇರಳ ಕರಾವಳಿ ಕಾವಲು ಪಡೆ ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೋಣಿಯಿಂದ ಸ್ಯಾಟಲೈಟ್‌ ಪೋನ್‌ ಮತ್ತು ಪಾಕಿಸ್ತಾನದ ಗುರುತಿನ ಚೀಟಿ ದೊರೆತಿದೆ.

ಗುಪ್ತಚರ ಮಾಹಿತಿಯ ಆಧಾರದಲ್ಲಿ ಕರಾವಳಿ ಕಾವಲು ಪಡೆ ಮತ್ತು ಪೊಲೀಸರು ‘ಬರೂಕಿ’ ಎಂಬ ಹೆಸರಿನ ದೋಣಿಯನ್ನು ಅಲೆಪ್ಪಿ ಕರಾವಳಿಯಲ್ಲಿ ತಡೆದರು. ಗುಪ್ತಚರ ಸಂಸ್ಥೆ ‘ರಾ’ ಸೇರಿದಂತೆ ವಿವಿಧ ಸಂಸ್ಥೆಗಳು ನೀಡಿದ ಮಾಹಿತಿ ಮತ್ತು ಸಹಕಾರದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

ದೋಣಿಯಲ್ಲಿದ್ದ 12 ಮಂದಿ ಮೇ 25ರಂದು ಇರಾನ್‌ನ ಕಲಾತ್‌ನಿಂದ ಹೊರಟಿದ್ದಾರೆ. ಅವರೆಲ್ಲರನ್ನೂ ಬಂಧಿಸಲಾಗಿದೆ. ಈ ದೋಣಿಯ ಮೂಲಕ ಭಾರಿ ಪ್ರಮಾಣದ ಯಾವುದೋ ವಸ್ತುವನ್ನು ಕಳ್ಳಸಾಗಾಟ ಮಾಡಿರುವ ಶಂಕೆ ಇದೆ. ಮಾಹಿತಿ ಸಿಕ್ಕ ತಕ್ಷಣವೇ ಡಾರ್ನಿಯರ್‌ ವಿಮಾನವನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಪೊಲೀಸರಿಗೆ ದೊರೆತ ಗುಪ್ತಚರ ಮಾಹಿತಿಯೊಂದಿಗೆ ದೋಣಿಯು ಇದ್ದ ಪ್ರದೇಶ, ದೋಣಿಯ ಲಕ್ಷಣಗಳು ಮತ್ತು ದೋಣಿಯಲ್ಲಿದ್ದವರ ವಿವರಗಳು ತಾಳೆಯಾಗುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ದೋಣಿಯನ್ನು ವಿಳಿಂಜಂ ಬಂದರಿಗೆ ತಂದು ನಂತರ ಪೊಲೀಸರು ಮತ್ತು ಕೇಂದ್ರ ಸಂಸ್ಥೆಗಳ ಹೆಚ್ಚಿನ ತನಿಖೆಗಾಗಿ ಹಸ್ತಾಂತರಿಸಲಾಗಿದೆ.

ಕೇಂದ್ರ ಗುಪ್ತಚರ ಸಂಸ್ಥೆ, ಸ್ಥಳೀಯ ಪೊಲೀಸರು, ರಾಜ್ಯ ಗುಪ್ತಚರ ಘಟಕ, ತಾಂತ್ರಿಕ ಪರಿಣಿತರು ಮತ್ತು ಬಾಂಬ್‌ ನಿಷ್ಕ್ರಿಯ ದಳಗಳಿಂದ ಜಂಟಿ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.