ADVERTISEMENT

ಅಲ್‌ಕೈದಾದಿಂದಲೂ ದಾಳಿ ಸಂಚು

ಮುಂದುವರಿದ ಉಗ್ರ ಹೆಡ್ಲಿ ವಿಚಾರಣೆ: ಮತ್ತಷ್ಟು ಮಾಹಿತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಅಲ್‌ಕೈದಾದಿಂದಲೂ ದಾಳಿ ಸಂಚು
ಅಲ್‌ಕೈದಾದಿಂದಲೂ ದಾಳಿ ಸಂಚು   

ಮುಂಬೈ (ಪಿಟಿಐ): ಭಾರತದಲ್ಲಿ ದಾಳಿ ನಡೆಸಲು ಸಹಾಯ ಮಾಡುವಂತೆ  ಅಲ್‌ ಕೈದಾ  ಸಂಘಟನೆಯ  ಮುಖಂಡ ಇಲ್ಯಾಸ್‌ ಕಾಶ್ಮೀರಿ ತನ್ನನ್ನು ಕೋರಿದ್ದ ಎಂಬ ವಿವರವನ್ನು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಶುಕ್ರವಾರ ಬಹಿರಂಗಪಡಿಸಿದ್ದಾನೆ.

‘ಮುಂಬೈ ದಾಳಿಯ ಬಳಿಕ ಮತ್ತೆ ಭಾರತಕ್ಕೆ ತೆರಳುವಂತೆ ಅಲ್‌ ಕೈದಾ ಸಂಘಟನೆ ನನ್ನಲ್ಲಿ  ಕೋರಿತ್ತು. ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳದ ಪರಿಶೀಲನೆ ನಡೆಸುವಂತೆ ಇಲ್ಯಾಸ್‌ ಕಾಶ್ಮೀರಿ ಸೂಚಿಸಿದ್ದ. ಈ ಕಾಲೇಜು ಅಲ್‌ ಕೈದಾ ದಾಳಿಯ ಪ್ರಮುಖ ಗುರಿಯಾಗಿತ್ತು’ ಎಂದಿದ್ದಾನೆ. 

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಹೆಡ್ಲಿ, ಲಷ್ಕರ್‌ ಎ ತಯಬಾ (ಎಲ್‌ಇಟಿ) ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ 2008ರಲ್ಲಿ ಮುಂಬೈ ವಿಮಾನ ನಿಲ್ದಾಣ ಮತ್ತು ನೌಕಾ ವಾಯು ನೆಲೆ ಮೇಲೆ ದಾಳಿ ನಡೆಸಲು ಬಯಸಿತ್ತು ಎಂದೂ ತಿಳಿಸಿದ್ದಾನೆ.

‘ಉಗ್ರರು ದಾಳಿ ನಡೆಸಲಿರುವ ಎಲ್ಲ ತಾಣಗಳ ಪರಿಶೀಲನೆ ನಡೆಸಿದ್ದೆ. ಆದರೆ ಮುಂಬೈ ವಿಮಾನ ನಿಲ್ದಾಣವನ್ನು ಈ ಪಟ್ಟಿಯಲ್ಲಿ ಸೇರಿಸದೇ ಇದ್ದದ್ದು ಮೇಜರ್‌ ಇಕ್ಬಾಲ್‌ಗೆ ಅತೃಪ್ತಿ ಉಂಟುಮಾಡಿತ್ತು. ವಿಮಾನ ನಿಲ್ದಾಣದ ಮೇಲೂ ದಾಳಿನಡೆಸಬೇಕೆಂಬುದು ಎಲ್‌ಇಟಿ ಬಯಕೆಯಾಗಿತ್ತು’ ಎಂದು ವಿವರಿಸಿದ್ದಾನೆ.

ಬಿಎಆರ್‌ಸಿ ವಿಡಿಯೊ: ‘ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ವಿಡಿಯೊ ಚಿತ್ರೀಕರಣವನ್ನೂ ಮಾಡಿದ್ದೆ’ ಎಂದು ಹೆಡ್ಲಿ ಹೇಳಿದ್ದಾನೆ.
‘2008ರ ಜುಲೈನಲ್ಲಿ ಟ್ರಾಂಬೆಯಲ್ಲಿರುವ ಬಿಎಆರ್‌ಸಿಗೆ ಭೇಟಿ ನೀಡಿ ವಿಡಿಯೊ ಚಿತ್ರೀಕರಣ ಮಾಡಿದ್ದೆ. ಐಎಸ್‌ಐ ಪರ ಗೂಢಚರ್ಯೆ ನಡೆಸಲು ಈ ಕೇಂದ್ರದ  ಒಬ್ಬನನ್ನು ನೇಮಿಸಬೇಕೆಂದು ಮೇಜರ್‌ ಇಕ್ಬಾಲ್‌ ನನಗೆ ಸೂಚಿಸಿದ್ದರು’ ಎಂದಿದ್ದಾನೆ.

ವಿಡಿಯೊವನ್ನು ಎಲ್‌ಇಟಿಯ ಕಮಾಂಡರ್‌ ಸಾಜಿದ್‌ ಮೀರ್‌ ಮತ್ತು ಮೇಜರ್‌ ಇಕ್ಬಾಲ್‌ಗೆ ನೀಡಿದ್ದಾಗಿಯೂ ಬಹಿರಂಗಪಡಿಸಿದ್ದಾನೆ.

ದೇವಾಲಯದ ಮೇಲಿನ ದಾಳಿ ತಡೆದಿದ್ದೆ: ಸಿದ್ಧಿವಿನಾಯಕ ದೇವಾಲಯ ಮತ್ತು ನೌಕಾ ವಾಯುನೆಲೆ ಮೇಲೆ ದಾಳಿ ನಡೆಸುವ ಎಲ್‌ಇಟಿ ಪ್ರಯತ್ನವನ್ನು ತಾನೇ ತಡೆದಿದ್ದೆ ಎಂಬುದನ್ನು ಹೆಡ್ಲಿ ಬಹಿರಂಗಪಡಿಸಿದ್ದಾನೆ.

‘ಎಲ್ಲ 10 ಉಗ್ರರು ಒಂದೇ ಸ್ಥಳದ ಮೇಲೆ ಗಮನ ಕೇಂದ್ರೀಕರಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಸಿದ್ಧಿವಿನಾಯಕ ದೇವಾಲಯ ಮತ್ತು ವಾಯುನೆಲೆ ಮೇಲೆ ದಾಳಿ ನಡೆಸುವ ಎಲ್‌ಇಟಿಯ ಯೋಜನೆಯನ್ನು ನಾನು ಈ ಕಾರಣದಿಂದ ವಿರೋಧಿಸಿದ್ದೆ’ ಎಂದು ತಿಳಿಸಿದ್ದಾನೆ.

ಉಗ್ರರಿಗಾಗಿ ರಾಖಿ ಖರೀದಿ: ಉಗ್ರರ ಕೈಗೆ ಕಟ್ಟಿಕೊಳ್ಳಲು ಕೆಂಪು ಮತ್ತು ಹಳದಿ ಬಣ್ಣದ ದಾರಗಳಿಂದ ತಯಾರಿಸಿದ್ದ ರಾಖಿ ಖರೀದಿಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

‘ಅದನ್ನು ಖರೀದಿಸಿಲು ನನಗೆ ಯಾರೂ ಹೇಳಿರಲಿಲ್ಲ. ನನ್ನಿಷ್ಟದಂತೆ ಆ ಕೆಲಸ ಮಾಡಿದ್ದೆ. ಆ ರಾಖಿಗಳನ್ನು ಸಾಜಿದ್‌ ಮೀರ್‌ಗೆ ನೀಡಿದ್ದೆ. ಭಾರತದಲ್ಲಿ ಹಿಂದೂಗಳು ಇದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ದಾಳಿಗೆ ತೆರಳುವ ಉಗ್ರರು ಕಟ್ಟಿಕೊಂಡರೆ ಅವರನ್ನು ಹಿಂದೂಗಳು ಎಂದೇ ಭಾವಿಸುವರು ಎಂದು ಮೀರ್‌ಗೆ ತಿಳಿಸಿದ್ದೆ’ ಎಂದು ವಿವರಿಸಿದ್ದಾನೆ.

‘ಉಗ್ರರು ಬದ್ವಾರ್‌ ಪಾರ್ಕ್‌ ಮೂಲಕ ಮುಂಬೈ ಪ್ರವೇಶಿಸಲಿ ಎಂಬ ಸಲಹೆಯನ್ನು ನಾನೇ ಕೊಟ್ಟಿದ್ದೆ. ಗೇಟ್‌ವೇ ಆಫ್‌ ಇಂಡಿಯಾ ಮೂಲಕ ಪ್ರವೇಶಿಸಬೇಕೆಂದು ಝಕೀವುರ್‌ ರೆಹಮಾನ್‌ ಬಯಸಿದ್ದ. ಆದರೆ ಅದು ಸುರಕ್ಷಿತವಲ್ಲ ಎಂದಿದ್ದೆ. ನನ್ನ ಸಲಹೆಯನ್ನು ಎಲ್ಲರೂ ಒಪ್ಪಿಕೊಂಡಿದ್ದರು.

‘ಭಾರತವು ಪಾಕಿಸ್ತಾನದಲ್ಲಿ ಈ ಹಿಂದೆ ನಡೆಸಿದ್ದ ಎಲ್ಲ ಬಾಂಬ್‌ ದಾಳಿಗಳಿಗೆ ಪ್ರತೀಕಾರವಾಗಿ ಮುಂಬೈ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಲಖ್ವಿ ನನಗೆ ಹೇಳಿದ್ದರು’ ಎಂದು ಹೆಡ್ಲಿ ತಿಳಿಸಿದ್ದಾನೆ.

‘ಕಸಬ್‌ ಮೇಲೆ ದೇವರ ದಯೆ ಇರಲಿ’

ವಿಚಾರಣೆ ವೇಳೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಂ ಅವರು ಉಗ್ರ ಅಜ್ಮಲ್ ಕಸಬ್‌ನ ಫೋಟೋ ತೋರಿಸಿದ್ದಾರೆ. ಆತನನ್ನು ಗುರುತಿಸಿದ ಹೆಡ್ಲಿ, ‘ಹೌದು. ಇದು ಅಜ್ಮಲ್‌ ಕಸಬ್‌. ಆತನ ಮೇಲೆ ದೇವರ ದಯೆ ಇರಲಿ, ದೇವರು ಆತನನ್ನು ಕ್ಷಮಿಸಲಿ’ ಎಂದಿದ್ದಾನೆ.
‘ಅಜ್ಮಲ್ ಸೆರೆ ಸಿಕ್ಕಿರುವ ವಿಚಾರ ಭಾರತದ ಮಾಧ್ಯಮಗಳಿಂದ ತಿಳಿದಿದೆ. ಆತ ಜೀವಂತವಾಗಿ ಸಿಕ್ಕಿದ್ದರಿಂದ ಸಾಜಿದ್‌ ಮೀರ್‌ ಮತ್ತು ಎಲ್‌ಇಟಿಯ ಇತರ ಮುಖಂಡರಿಗೆ ಅತೀವ ದುಃಖ ಉಂಟಾಗಿತ್ತು’ ಎಂದು ಹೇಳಿದ್ದಾನೆ.

ADVERTISEMENT

ಶಿವ ಸೇನಾ ಸದಸ್ಯನ ಸ್ನೇಹ ಸಂಪಾದಿಸಲು ಪ್ರಯತ್ನ: ಶಿವ ಸೇನಾ ಸದಸ್ಯನೊಬ್ಬನ ಜತೆ ಸ್ನೇಹ ಸಂಪಾದಿಸಲು ಪ್ರಯತ್ನಿಸಿದ್ದೆ ಎಂದು ಹೆಡ್ಲಿ ಹೇಳಿದ್ದಾನೆ.

‘2006–2007ರಲ್ಲಿ ದಾದರ್‌ನಲ್ಲಿರುವ ಶಿವ ಸೇನಾ ಭವನಕ್ಕೆ ಭೇಟಿ ನೀಡಿದ್ದೆ. ಅಲ್ಲಿದ್ದ ರಾಜಾರಾಮ್‌ ಎಂಬಾತನ ಸ್ನೇಹ ಗಳಿಸಲು ಪ್ರಯತ್ನಿಸಿದ್ದೆ. ಎಲ್‌ಇಟಿ ಭವಿಷ್ಯದಲ್ಲಿ ಸೇನಾ ಭವನದ ಮೇಲೆ ದಾಳಿ ನಡೆಸುವ ಅಥವಾ ಶಿವ ಸೇನಾ ನಾಯಕರನ್ನು ಹತ್ಯೆ ಮಾಡುವ ಯೋಜನೆ ಹಾಕಿಕೊಳ್ಳಬಹುದು ಎಂಬ ಕಾರಣ ಹೀಗೆ ಮಾಡಿದ್ದೆ’ ಎಂದಿದ್ದಾನೆ.

ಮಹೇಶ್‌ ಭಟ್‌ ಪುತ್ರನ ಜತೆ ಸ್ನೇಹ: ಮುಂಬೈನಲ್ಲಿ ಯಾರೊಂದಿಗೆಲ್ಲ ಗೆಳೆತನ ಇತ್ತು ಎಂಬ ಪ್ರಶ್ನೆಗೆ, ‘2006–07 ರಲ್ಲಿ ದಕ್ಷಿಣ ಮುಂಬೈನ ಮೋಕ್ಷ್‌ ಜಿಮ್‌ಗೆ  ಸೇರಿದ್ದೆ. ಅದನ್ನು ನಡೆಸುತ್ತಿದ್ದ ವಿಲಾಸ್‌ ವರ್ಕೆ ಎಂಬಾತನ ಜತೆ ಸ್ನೇಹ ಸಂಪಾದಿಸಿದ್ದೆ. ಆತನ ಗೆಳೆಯನಾಗಿದ್ದ ರಾಹುಲ್‌ ಭಟ್‌ (ಬಾಲಿವುಡ್‌ ನಿರ್ದೇಶಕ ಮಹೇಶ್‌ ಭಟ್‌ ಪುತ್ರ) ಜತೆಯೂ ಗೆಳೆತನ ಇತ್ತು’ ಎಂದು ಉತ್ತರಿಸಿದ್ದಾನೆ.

ಹೆಡ್ಲಿ ಶುಕ್ರವಾರ ಹೇಳಿದ್ದೇನು...

*  ಮುಂಬೈ ವಿಮಾನ ನಿಲ್ದಾಣದ  ಮೇಲೆ ದಾಳಿ ಮಾಡುವುದು  ಎಲ್‌ಇಟಿ, ಐಎಸ್‌ಐನ ಗುರಿಯಾಗಿತ್ತು
*  ಟ್ರಾಂಬೆಯ ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದ ವಿಡಿಯೊ ಚಿತ್ರೀಕರಣ    ಮಾಡಿದ್ದೆ
*  ಭಾರತದಲ್ಲಿ ದಾಳಿಗೆ ನೆರವು ಕೇಳಿದ್ದ ಅಲ್ ಕೈದಾ
*  ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳದ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿತ್ತು
*  ಉಗ್ರರಿಗಾಗಿ ರಾಖಿ ಖರೀದಿಸಿದ್ದೆ

‘ಪಾಕ್‌ ಕ್ರಮ ಕೈಗೊಳ್ಳಲಿ’(ಬಲರಾಂಪುರ, ಉತ್ತರ ಪ್ರದೇಶ ವರದಿ): ‘ಮುಂಬೈ ಮೇಲಿನ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿತ್ತು ಎಂಬುದು ಹೆಡ್ಲಿಯ ಹೇಳಿಕೆಯಿಂದ ಮತ್ತೊಮ್ಮೆ ಖಚಿತವಾಗಿದೆ. ಆದ್ದರಿಂದ 26/11ರ ದಾಳಿಯ ಹಿಂದಿನ ಸಂಚುಕೋರರ ವಿರುದ್ಧ ಪಾಕ್‌ ಕ್ರಮ ಕೈಗೊಳ್ಳಲಿ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.