ADVERTISEMENT

ಆಪ್ತ ಸಿಬ್ಬಂದಿಯನ್ನು ಎಚ್ಚರಿಕೆಯಿಂದ ಆರಿಸಿ

ಹೊಸ ಸಂಸದರು, ಭಾವಿ ಸಚಿವರಿಗೆ ಬಿಜೆಪಿ ವರಿಷ್ಠರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 24 ಮೇ 2014, 19:30 IST
Last Updated 24 ಮೇ 2014, 19:30 IST

ನವದೆಹಲಿ: ಹೊಸದಾಗಿ ನೇಮಕಗೊಳ್ಳಲಿರುವ ಸಚಿವರು ಹಾಗೂ ಸಂಸದರು ತಮ್ಮ ಆಪ್ತ ಸಹಾಯಕರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗ ತುಂಬಾ ಜಾಗೃತೆ ವಹಿಸುವಂತೆ ಸೂಚಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.

ಬಂಗಾರು ಲಕ್ಷ್ಮಣ್ ಅವರ ಅಕ್ರಮ ಹಣದ ವ್ಯವಹಾರ ಮತ್ತು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಹಗರಣದಿಂದ ಮುಜುಗರಕ್ಕೆ ಒಳಗಾಗಿದ್ದ ಬಿಜೆಪಿ ಮುಖಂಡರು ಈ ಬಾರಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಮುಂದಾಗಿದ್ದಾರೆ. ಸಚಿವರು ಮತ್ತು ಸಂಸದರು ಆಪ್ತ ಸಿಬ್ಬಂದಿ ವರ್ಗ ನೇಮಕ ಮಾಡಿಕೊಳ್ಳುವ ಮೊದಲು ಸಿಬ್ಬಂದಿಯ ಪೂರ್ವಾಪರವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ಮೋದಿ ನೇತೃತ್ವದ ಸರ್ಕಾರದ ವರ್ಚಸ್ಸು ಕುಗ್ಗಿಸುವ ಉದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಆರ್ಎಸ್ಎಸ್ ಮುಖಂಡರು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿರೋಧ ಪಕ್ಷಗಳಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಆಗುವುದನ್ನು ತಡೆಯಲು ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರ ಬಗ್ಗೆ ತೀವ್ರ ಜಾಗೃತೆ ವಹಿಸುವಂತೆ ಸೂಚಿಸಲು  ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ.

ಕಳೆದ 10 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಸಚಿವರ ಆಪ್ತ ಸಿಬ್ಬಂದಿಯಾಗಿ ಕೆಲಸ ಮಾಡಿದವರನ್ನು ದೂರವಿಡಲು ನಿರ್ಧರಿಸಲಾಗಿದೆ. ವಿವಿಧ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲು ಅಖಿಲ ಭಾರತ ಸೇವೆಯ ನಿರ್ದೇಶಕರ ಶ್ರೇಣಿಯ 50 ಅನುಭವಿ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಈಗಾಗಲೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.