ADVERTISEMENT

ಆರು ಸಂಸದರ ಅಮಾನತು

ಐದು ದಿನ ಲೋಕಸಭೆಗೆ ಬರುವಂತಿಲ್ಲ: ಸ್ಪೀಕರ್‌ ಸುಮಿತ್ರಾ ಆದೇಶ

ಪಿಟಿಐ
Published 24 ಜುಲೈ 2017, 19:37 IST
Last Updated 24 ಜುಲೈ 2017, 19:37 IST
ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರತ್ತ ಸಂಸದರು ತೂರಿದ ಕಾಗದದ ತುಣುಕುಗಳು
ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರತ್ತ ಸಂಸದರು ತೂರಿದ ಕಾಗದದ ತುಣುಕುಗಳು   

ನವದೆಹಲಿ: ಲೋಕಸಭೆಯಲ್ಲಿ ರಂಪಾಟ ನಡೆಸಿದ ಕಾಂಗ್ರೆಸ್‌ ಪಕ್ಷದ ಆರು ಸದಸ್ಯರನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಐದು ದಿನಗಳ ಅವಧಿಗೆ ಅಮಾನತು ಮಾಡಿದ್ದಾರೆ.

ಗೌರವ್‌ ಗೊಗೊಯ್‌, ಕೆ. ಸುರೇಶ್‌, ಅಧಿರ್‌ ರಂಜನ್‌ ಚೌಧರಿ, ರಂಜೀತ್‌ ರಂಜನ್‌, ಸುಶ್ಮಿತಾ ದೇವ್‌ ಮತ್ತು ಎಂ.ಕೆ. ರಾಘವನ್‌ ಅಮಾನತಾದ ಸಂಸದರು.

ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ವಿರುದ್ಧ ಪ್ರತಿಭಟನೆ ನಡೆಸುವಾಗ ಇವರ ವರ್ತನೆ ಸಂಸದರಿಗೆ ತಕ್ಕದ್ದಾಗಿರಲಿಲ್ಲ. ಅಲ್ಲದೆ ಅವರು ಸ್ಪೀಕರ್‌ ಘನತೆಗೆ ಕುಂದುಂಟಾಗುವಂತೆ ವರ್ತಿಸಿದ್ದಾರೆ ಎಂದು ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.

‘ಲೋಕಸಭೆ ಕಾರ್ಯಾಲಯದ ಮೇಜಿನ ಮೇಲಿದ್ದ ಕಾಗದ ಪತ್ರಗಳನ್ನು ಹರಿದು ಸ್ಪೀಕರ್‌ ಪೀಠದತ್ತ ಅವರು ಎಸೆದಿದ್ದಾರೆ. ಪೀಠದ ಮುಂದೆ ಗದ್ದಲ ಎಬ್ಬಿಸುವುದೇ ಅಶಿಸ್ತಿನ ನಡವಳಿಕೆ. ಕಾಗದ ಪತ್ರಗಳನ್ನು ಹರಿದು ನಾಲ್ಕು ಬಾರಿ ಸ್ಪೀಕರ್‌ ಕಡೆಗೆ ಎಸೆಯುವುದು ಇನ್ನೂ ಕೆಟ್ಟ ನಡವಳಿಕೆ’ ಎಂದು ಸುಮಿತ್ರಾ ಹೇಳಿದ್ದಾರೆ.

ಗದ್ದಲದಿಂದಾಗಿ ಮುಂದೂಡಿಕೆಯಾಗಿದ್ದ ಕಲಾಪ ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗುತ್ತಿದ್ದಂತೆಯೇ ಈ ನಿರ್ಧಾರವನ್ನು ಸ್ಪೀಕರ್‌ ಪ್ರಕಟಿಸಿದರು. ವಿರೋಧ ಪಕ್ಷಗಳು ಮತ್ತೆ ಪ್ರತಿಭಟನೆಗೆ ಅಣಿಯಾಗುತ್ತಿದ್ದಂತೆಯೇ ಈ ನಿರ್ಧಾರ ಬಂತು. ಗದ್ದಲ ಮತ್ತೆಯೂ ಮುಂದುವರಿಯಿತು. ಹಾಗಾಗಿ ಕಲಾಪವನ್ನು ಮೊದಲಿಗೆ 2.30ರ ವರೆಗೆ ಮತ್ತು ಬಳಿಕ ಮಂಗಳವಾರಕ್ಕೆ ಮುಂದೂಡಲಾಯಿತು.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದರು. ಪ್ರಶ್ನೋತ್ತರ ಕಲಾಪವನ್ನು ಮುಂದೂಡಿ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಪ್ರಶ್ನಾವೇಳೆಯ ಬಳಿಕ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ಹೇಳಿದರು.

ADVERTISEMENT

ಆದರೆ ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗತ್ತ ಕೋಲಾಹಲ ನಡೆಸಿದರು. ಕಾಗದ ಪತ್ರಗಳನ್ನು ಹರಿದು ಸ್ಪೀಕರ್‌ ಪೀಠದತ್ತ ಎಸೆದರು.

ಶಾಂತರಾಗುವಂತೆ ಸ್ಪೀಕರ್‌ ಮಾಡಿದ ಮನವಿಗೆ ಅವರು ಕಿವಿಗೊಡಲಿಲ್ಲ. ಸಿಟ್ಟುಗೊಂಡ ಸುಮಿತ್ರಾ ಅವರು ‘ಈ ದೃಶ್ಯಗಳನ್ನು ಪ್ರಸಾರ ಮಾಡಿ. ದೇಶದ ಜನ ಇದನ್ನು ನೋಡಲಿ’ ಎಂದು ಹೇಳಿದರು. ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ವಿರೋಧ ಪಕ್ಷಗಳ ಸದಸ್ಯರ ನಡವಳಿಕೆ ವಿರುದ್ಧ ಪ್ರತಿಭಟನೆ ಮಾಡಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ತೃಣಮೂಲ ಕಾಂಗ್ರೆಸ್‌ನ ಸೌಗತಾ ರಾಯ್‌ ಅವರು ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್‌ ಅವರು, ‘ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ಸರ್ಕಾರ ಬೆಂಬಲಿಸುವುದಿಲ್ಲ. ಈ ವಿಚಾರದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದರು.

ಅಮಾನತಿನ ಕುರಿತು ಮಾತನಾಡಿದ ಖರ್ಗೆ ಅವರು, ‘ಕಾಗದ ಪತ್ರಗಳನ್ನು ಹರಿದು ಪ್ರತಿಭಟನೆ ನಡೆಸುವುದನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಅದಕ್ಕೆ ನೀಡಿರುವ ಶಿಕ್ಷೆ ಬಹಳ ಹೆಚ್ಚಾಯಿತು’ ಎಂದು ಹೇಳಿದರು.
*
ನಿಲ್ಲದ ಕೋಲಾಹಲ
* ಕಾಂಗ್ರೆಸ್‌ನ ಎಲ್ಲ ಸಂಸದರನ್ನೂ ಅಮಾನತು ಮಾಡಿ ಎಂದು ಕೂಗಿದ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್‌
* ‘ಶೇಮ್‌ ಶೇಮ್’ ಎಂದು ಕೂಗಿ ವಿರೋಧ ಪಕ್ಷಗಳ ನಡವಳಿಕೆಗೆ ಬಿಜೆಪಿ ಸಂಸದರ ಪ್ರತಿಭಟನೆ
* ಸಂಸತ್‌ ಭವನದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಮಂಗಳವಾರ ಅಮಾನತು ವಿರೋಧಿಸಿ ಪ್ರತಿಭಟನೆಗೆ ಕಾಂಗ್ರೆಸ್‌ ನಿರ್ಧಾರ
* ಅಮಾನತಾದವರಲ್ಲಿ ರಾಜ್ಯದ ಸಂಸದರು ಯಾರೂ ಇಲ್ಲ
* ಕಾಂಗ್ರೆಸ್‌ ಸಂಸದರು ಕೋಲಾಹಲ ನಡೆಸಿದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಸದನದಲ್ಲಿದ್ದರು
*
ಬಹಳ ನೋವಾಗಿದೆ. ಅವರು ಯಾಕೆ ಹೀಗೆ ಮಾಡಿದರೆಂದೇ ಅರ್ಥವಾಗುತ್ತಿಲ್ಲ. ಯಾವುದೇ ವಿಷಯ ಚರ್ಚೆಗೆ ನಾನು ತಡೆ ಒಡ್ಡಿಲ್ಲ. ಪ್ರಶ್ನೋತ್ತರ ಕಲಾಪದ ಬಳಿಕ ಇದನ್ನು ಎತ್ತಿಕೊಳ್ಳೋಣ ಎಂದಷ್ಟೇ ಹೇಳಿದ್ದೆ.
ಸುಮಿತ್ರಾ ಮಹಾಜನ್‌,
ಸ್ಪೀಕರ್‌
*
ಹೊಸ ರಾಷ್ಟ್ರಪತಿಯನ್ನು ಸ್ವಾಗತಿಸುವ ಮತ್ತು ಅವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಆರು ಸದಸ್ಯರನ್ನು ಅಮಾನತು ಮಾಡಿದ್ದು ಸರಿಯಾದ ಕ್ರಮ ಅಲ್ಲ.
ಮಲ್ಲಿಕಾರ್ಜುನ ಖರ್ಗೆ
ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.