ADVERTISEMENT

ಆರು ಸಚಿವ­ರಿಗೆ ಐ.ಎಂ ಬೆದರಿಕೆ ಸಂದೇಶ

ರಾಜಸ್ತಾನದಲ್ಲಿ ಜ. 26ರಂದು ಸರಣಿ ಸ್ಫೋಟ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2014, 19:30 IST
Last Updated 26 ಡಿಸೆಂಬರ್ 2014, 19:30 IST

ಜೈಪುರ (ಐಎಎನ್‌ಎಸ್‌): ರಾಜಸ್ತಾನದಲ್ಲಿ ಜ.26ರಂದು ಸರಣಿ ಬಾಂಬ್‌ಗಳನ್ನು ಸ್ಫೋಟಿಸುವುದಾಗಿ ಗೃಹ ಸಚಿವರೂ ಸೇರಿ­ದಂತೆ ರಾಜ್ಯದ ಒಟ್ಟು ಆರು ಸಚಿವರಿಗೆ ಬೆದ­ರಿಕೆ­ಯ ಇ – ಮೇಲ್‌ ಸಂದೇಶ ಬಂದಿದೆ. ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆ ಈ ಬೆದರಿಕೆ ಸಂದೇಶ ಕಳುಹಿ­ಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘ನಿಮಗೆ ದೊಡ್ಡ ಆಶ್ಚರ್ಯ ಕಾದಿದೆ ಎಚ್ಚರಿಕೆಯಿಂದಿರಿ’ ಎಂದು ಸಚಿವರಿಗೆ ಬಂದಿರುವ ಇ– ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ‘ಜನವರಿ 26ರಂದು ಬಾಂಬ್‌ ಸ್ಫೋಟ ಮಾಡುವ ಬೆದರಿಕೆಯ ಸಂದೇಶ ಸಚಿವರಿಗೆ ಬಂದಿರುವುದು ನಿಜ’ ಎಂದು ರಾಜ್ಯ ಪೊಲೀಸ್‌ ಮಹಾ­ನಿರ್ದೇ­ಶಕ ಒಮೇಂದ್ರ ಭಾರದ್ವಾಜ್‌ ದೃಢಪಡಿಸಿದ್ದಾರೆ.

‘ಡಿಸೆಂಬರ್‌ 22ರಂದು ಸಂಜೆ 5.45ರ ಸುಮಾರಿಗೆ  ಇ– ಮೇಲ್‌ ಸಂದೇಶ ಬಂದಿರುವುದು ಗುರು­ವಾರ ಗೊತ್ತಾಗಿದೆ. ಈ ಕುರಿತು ತನಿಖೆ ನಡೆಸುತ್ತಿ­ದ್ದೇವೆ’ ಎಂದು ಪೊಲೀಸ್‌ ಅಧಿಕಾರಿ­ಯೊಬ್ಬರು ತಿಳಿಸಿದ್ದಾರೆ. ‘ಬೆದರಿಕೆ ಬಂದಿರುವ ಕಾರಣ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಭದ್ರತೆ­ಯನ್ನು ಹೆಚ್ಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಇಂಡಿಯನ್‌ ಮುಜಾಹಿದೀನ್‌ ಈ ಹಿಂದೆ ಜೈಪುರದ ಜನನಿಬಿಡ ಮಾರು­ಕಟ್ಟೆಯಲ್ಲಿ ನಡೆಸಿದ ಪ್ರಬಲ ಬಾಂಬ್‌ ಸ್ಫೋಟದಲ್ಲಿ ಅನೇಕರು ಸಾವನ್ನಪ್ಪಿದರು.

ಗಾಲಿಗಳ ಮೇಲೆ ಅರಮನೆ ವಿಶೇಷ ರೈಲು ಸೇರಿದಂತೆ ರಾಜಸ್ತಾನದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದ ಉಗ್ರ ತೆಹಸಿನ್‌ ಅಖ್ತರ್‌ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಅದಕ್ಕೂ ಮುನ್ನ ಉಗ್ರರು ಬಾಂಬ್‌ ಸ್ಫೋಟಿ­ಸುವ ಬೆದರಿಕೆ ಹಾಕಿದ್ದರು. 
ಐ.ಎಸ್‌.ಐ.ಎಸ್‌  ಬೆಂಬಲಿತ ಅನ್ಸುರುಲ್ ತಾವಿದ್‌ ಉಗ್ರ ಸಂಘಟನೆ ರಾಜಸ್ತಾನದಲ್ಲಿ ಯುವಕರನ್ನು ನೇಮಕ ಮಾಡಿಕೊಂಡಿತ್ತು. ಭಾರತ ಮೂಲದ ಸುಲ್ತಾನ್ ಆರ್ಮರ್‌ ಎಂಬ ವ್ಯಕ್ತಿ ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ ಘಟನೆ ತನಿಖೆ ವೇಳೆ ತಿಳಿದು ಬಂದಿತ್ತು. ಈ  ಎಲ್ಲ ಅಂಶಗಳನ್ನು ಗಮನದಲ್ಲಿ­ಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.