ADVERTISEMENT

ಉಗ್ರವಾದಕ್ಕೆ ಪಾಕ್‌ ತಾಯಿ

ಎಲ್ಲ ರೂಪದ ಭಯೋತ್ಪಾದನೆ ನಿಗ್ರಹಕ್ಕೆ ಬ್ರಿಕ್ಸ್‌ ಗೋವಾ ಘೋಷಣೆ

ಪಿಟಿಐ
Published 17 ಅಕ್ಟೋಬರ್ 2016, 3:04 IST
Last Updated 17 ಅಕ್ಟೋಬರ್ 2016, 3:04 IST
ಬ್ರಿಕ್ಸ್‌ ಶೃಂಗಸಭೆಯಲ್ಲಿ ರಷ್ಯಾ ಪ್ರಧಾನಿ ವ್ಲಾಡಿಮಿರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ   ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ   -ಪಿಟಿಐ ಚಿತ್ರ
ಬ್ರಿಕ್ಸ್‌ ಶೃಂಗಸಭೆಯಲ್ಲಿ ರಷ್ಯಾ ಪ್ರಧಾನಿ ವ್ಲಾಡಿಮಿರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ -ಪಿಟಿಐ ಚಿತ್ರ   

ಬೆನೋಲಿಂ,ಗೋವಾ: ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುವ ಭಾರತದ ಪ್ರಯತ್ನಕ್ಕೆ ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗ ಸಭೆ ಮತ್ತಷ್ಟು ಬಲ ತುಂಬಿದೆ.

ಐದು ರಾಷ್ಟ್ರಗಳ ಗುಂಪು ಉರಿ ಮತ್ತು ಪಠಾಣ್‌ಕೋಟ್‌ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿದ್ದಲ್ಲದೆ ಉಗ್ರವಾದಕ್ಕೆ ರಾಜಕೀಯ ಅಥವಾ ಧಾರ್ಮಿಕ ನೆಲೆಯಲ್ಲಿ ಯಾವುದೇ ಸಮರ್ಥನೆ ಇರುವುದು ಸಾಧ್ಯವಿಲ್ಲ ಎಂದು ಹೇಳಿದೆ. ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಸುದೀರ್ಘ ಸಮಾಲೋಚನೆಯ ನಂತರ ಐದು ದೇಶಗಳ ರಾಜತಾಂತ್ರಿಕರು ಗೋವಾ ಘೋಷಣೆಯನ್ನು ಸಿದ್ಧಪಡಿಸಿದ್ದಾರೆ. ಭಾರತ 1996ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಿರುವ ಅಂತರರಾಷ್ಟ್ರೀಯ ಭಯೋತ್ಪಾದನೆ ಬಗೆಗಿನ ಸಮಗ್ರ ಒಪ್ಪಂದವನ್ನು (ಸಿಸಿಐಟಿ) ಶೀಘ್ರ ಜಾರಿಗೆ ತರಲು ಎಲ್ಲ ರಾಷ್ಟ್ರಗಳು ಸಹಕರಿಸಬೇಕು ಎಂಬ ಭಾರತದ ಬೇಡಿಕೆಯನ್ನು ಗೋವಾ ಘೋಷಣೆಯಲ್ಲಿ ಸೇರಿಸಲಾಗಿದೆ. ತಮ್ಮ ಭೂ ಪ್ರದೇಶದೊಳಗೆ ಭಯೋತ್ಪಾದನೆ ಚಟುವಟಿಕೆಯನ್ನು ತಡೆಗಟ್ಟುವುದು ಆಯಾ ದೇಶದ ಜವಾಬ್ದಾರಿ ಎಂದು ಐದು ದೇಶಗಳ ಮುಖಂಡರು ಘೋಷಿಸಿದರು.

ADVERTISEMENT

ತನ್ನ ಭೂಪ್ರದೇಶದಲ್ಲಿ ನೆಲೆಯಾಗಿರುವ ಉಗ್ರಗಾಮಿ ಸಂಘಟನೆಗಳ ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂದು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ. ಈ ಪ್ರತಿಪಾದನೆಗೆ ಬ್ರಿಕ್ಸ್‌ ಬೆಂಬಲ ನೀಡಿದಂತಾಗಿದೆ.

ಮೂರು ಒಪ್ಪಂದಗಳು

* ಬ್ರಿಕ್ಸ್‌ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆ
* ಸದಸ್ಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಹಕಾರ
* ಸೀಮಾ ಸುಂಕ ಸಂಗ್ರಹ ವಿಚಾರದಲ್ಲಿ ಪರಸ್ಪರ ಸಹಕಾರಕ್ಕೆ ಸಮ್ಮತಿ

ಘೋಷಣೆ ತಿರುಳು
* ‘ಭಾರತವೂ ಸೇರಿದಂತೆ ಬ್ರಿಕ್ಸ್‌ನ ಕೆಲ ದೇಶಗಳ ವಿರುದ್ಧ ಇತ್ತೀಚೆಗೆ ನಡೆದ ಹಲವು ದಾಳಿಗಳನ್ನು ವಿರೋ ಧಿಸುತ್ತೇವೆ. ಯಾವುದೇ ರೂಪದಲ್ಲಿ ವ್ಯಕ್ತವಾಗುವ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇವೆ.

‘ಸಿದ್ಧಾಂತ, ಧರ್ಮ, ರಾಜಕೀಯ, ಜನಾಂಗ ಅಥವಾ ಮತ್ತಾವುದೇ ಹೆಸರಿನಲ್ಲಿ ಉಗ್ರವಾದಕ್ಕೆ ಸಮರ್ಥನೆ ನೀಡುವುದು ಸಾಧ್ಯವಿಲ್ಲ.

‘ದ್ವಿಪಕ್ಷೀಯ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ನೆಲೆಯಲ್ಲಿ ಭಯೋತ್ಪಾದನೆ ತಡೆಗೆ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲು ಒಪ್ಪಿದ್ದೇವೆ’ ಎಂದು 102 ಪ್ಯಾರಾಗಳ ಘೋಷಣೆಯಲ್ಲಿ ಹೇಳಲಾಗಿದೆ.

* ಆರ್ಥಿಕ ಸಹಕಾರ ಇನ್ನಷ್ಟು ಬಲಪಡಿಸಲು ಜಿ20 ಸದಸ್ಯ ರಾಷ್ಟ್ರ ಗಳ ಜತೆ ನಿಕಟ  ಕಾರ್ಯಾಚರಣೆ
* ಜಾಗತಿಕ ಪ್ರಗತಿಗೆ ವೇಗ ತುಂಬಲು ಸುಸ್ಥಿರ ವ್ಯಾಪಾರ ಮತ್ತು ಅಭಿವೃದ್ಧಿಗೆ ಒತ್ತು
* ಪಾಕ್‌ ಭಯೋತ್ಪಾದನೆ ಪೋಷಿ ಸುತ್ತಿದೆ ಎಂದು  ಸ್ಪಷ್ಟವಾಗಿ ಹೇಳುವ ಮೂಲಕ ಶೃಂಗಸಭೆ ಘೋಷಣೆಗೆ ಮೋದಿ ಸ್ಪಷ್ಟ ದಿಕ್ಕು ಹಾಕಿ ಕೊಟ್ಟರು.

* ಹಿಂಸೆ ಮತ್ತು ಭಯೋತ್ಪಾದನೆಗೆ ಆಶ್ರಯ, ಪೋಷಣೆ, ಪ್ರಾಯೋಜಕತ್ವ ಒದಗಿಸುವವರು ಭಯೋತ್ಪಾದಕರಷ್ಟೇ ಅಪಾಯಕಾರಿ ಎಂಬುದನ್ನು ನಾವೆಲ್ಲರೂ ಒಪ್ಪಿದ್ದೇವೆ.

 -ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.