ADVERTISEMENT

ಉಗ್ರ ಭುಲ್ಲರ್‌ಗೆ ಜೀವದಾನ

1993ರ ದೆಹಲಿ ಸರಣಿ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2014, 19:30 IST
Last Updated 1 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ರಾಜಧಾನಿ ದೆಹಲಿಯಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಖಲಿಸ್ತಾನ್‌ ಉಗ್ರ ದೇವಿಂದರ್‌ ಪಾಲ್‌ ಸಿಂಗ್‌ ಭುಲ್ಲರ್‌ಗೆ ಸುಪ್ರೀಂಕೋರ್ಟ್‌ ಮಂಗಳವಾರ ಜೀವದಾನ ನೀಡಿದೆ.

‘ಕ್ಷಮಾದಾನ ಅರ್ಜಿ ಇತ್ಯರ್ಥಕ್ಕೆ ಎಂಟು ವರ್ಷ ವಿಳಂಬವಾಗಿದೆ. ಆದ್ದರಿಂದ ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿದೆ’ ಎಂದು ಕೋರ್ಟ್‌ ತೀರ್ಪು ನೀಡಿದೆ.

48 ವರ್ಷದ ಭುಲ್ಲರ್‌, ಮಾನಸಿಕ ರೋಗಿ ಎಂದು ವೈದ್ಯಕೀಯ ಮಂಡಳಿ ಸಲ್ಲಿಸಿದ್ದ ವರದಿಯನ್ನು ಗಮನಿಸಿದ ನಂತರ ಕೋರ್ಟ್‌ ಈ ತೀರ್ಪು ನೀಡಿದೆ.

ಭುಲ್ಲರ್‌ ಪತ್ನಿ ನವನೀತ್‌ ಕೌರ್‌ ಸಲ್ಲಿಸಿದ್ದ ಪರಿಹಾರ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿಗಳಾದ ಆರ್‌.ಎಂ.ಲೋಧಾ, ಎಚ್‌.ಎಲ್‌.ದತ್ತು  ಹಾಗೂ ಜ್ಯೋತಿ ಮುಖ್ಯೋಪಾಧ್ಯಾಯ ಅವರಿದ್ದ ಪೀಠ, ‘ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬ ಹಾಗೂ ವೈದ್ಯಕೀಯ ಕಾರಣಗಳಿಂದ ಆತನಿಗೆ ಜೀವದಾನ ನೀಡಲಾಗಿದೆ’ ಎಂದು ಹೇಳಿತು.

1993ರ ಸೆಪ್ಟೆಂಬರ್‌ನಲ್ಲಿ ದೆಹಲಿ­ಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದರು. ಆಗಿನ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಬಿಟ್ಟಾ ಸೇರಿ 25 ಜನ ಗಾಯಗೊಂಡಿದ್ದರು.

ಭುಲ್ಲರ್‌ ಗಲ್ಲು ಶಿಕ್ಷೆಯನ್ನು ಜೀವಾ­ವಧಿಗೆ ಇಳಿಸುವ ವಿಷಯದಲ್ಲಿ ತನ್ನ­ದೇನು ಅಭ್ಯಂತರವಿಲ್ಲ ಎಂದು ಕೇಂದ್ರ ಸರ್ಕಾರ ಮಾರ್ಚ್‌ 27ರಂದು ಕೋರ್ಟ್‌ಗೆ ತಿಳಿಸಿತ್ತು.

ಆತನ ಗಲ್ಲು ಶಿಕ್ಷೆಗೆ ಜನವರಿ 31ರಂದು ಸುಪ್ರೀಂಕೋರ್ಟ್‌ ತಡೆ ನೀಡಿತ್ತು. ಅಲ್ಲದೇ ಕ್ಷಮಾದಾನ ಕೋರಿ  ಆತ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿ ಈ ಮೊದಲು ತಾನು ನೀಡಿದ್ದ ತೀರ್ಪನ್ನು ಪುನರ್‌ಪರಿಶೀಲಿಸುವುದಾಗಿಯೂ ಹೇಳಿತ್ತು.

ಪರಿಹಾರ ಅರ್ಜಿಗೆ ಸಂಬಂಧಿಸಿ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನೋಟಿಸ್‌ ಕೂಡ ನೀಡಿತ್ತು. ಭುಲ್ಲರ್‌ ಮಾನ­ಸಿಕ ಸ್ಥಿತಿಯ ಬಗ್ಗೆ ವರದಿ ಸಲ್ಲಿಸು­ವಂತೆ ಆತ ಚಿಕಿತ್ಸೆ ಪಡೆಯುತ್ತಿರುವ ಇನ್ಸ್‌ಟಿಟ್ಯೂಷನ್‌ ಆಫ್‌ ಹ್ಯೂಮನ್‌ ಬಿಹೆವಿಯರ್‌/ ಅಲೈಡ್‌ ಸೈನ್ಸ್‌ (ಐಎಚ್‌ಬಿಎಎಸ್‌) ಸಂಸ್ಥೆಗೆ ನಿರ್ದೇಶನ ನೀಡಿತ್ತು.

ಅಫ್ಜಲ್‌ಗೆ ಅನ್ಯಾಯ
ಶ್ರೀನಗರ : ‘ಭುಲ್ಲರ್‌ಗೆ ಜೀವದಾನ ನೀಡಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ವ್ಯವಸ್ಥೆಯಲ್ಲಿ ಎಲ್ಲೋ ಒಂದು ಕಡೆ ತಾರತಮ್ಯ ಇರುವುದನ್ನು ಎತ್ತಿ ತೋರಿಸಿದೆ’ ಎಂದು ಎನ್‌ಸಿ ಹಾಗೂ ಪಿಡಿಪಿ ಹೇಳಿವೆ.

‘ಭುಲ್ಲರ್‌ಗೆ ಜೀವದಾನ ನೀಡಿರುವು­ದನ್ನು ನಾವು ವಿರೋಧಿಸುವುದಿಲ್ಲ. ಆದರೆ ಸಂಸತ್‌ ಭವನದ ಮೇಲಿನ ದಾಳಿ ಪ್ರಕರಣದಲ್ಲಿ ಅಫ್ಜಲ್‌ ಗುರುಗೆ ಯಾಕೆ ಜೀವದಾನ ಸಿಗದೇ ಹೋಯಿತು ಎಂದು ಅಚ್ಚರಿಯಾಗುತ್ತದೆ.

ಅಫ್ಜಲ್‌ ಗುರುಗೆ ಗಲ್ಲು ಶಿಕ್ಷೆ ನೀಡಿದ್ದು ಹಾಗೂ ಆತನನ್ನು ನೇಣಿಗೇರಿಸಿದ ರೀತಿಯು ನ್ಯಾಯಾಂಗ ವ್ಯವಸ್ಥೆಯ ವಸ್ತುನಿಷ್ಠತೆ ಹಾಗೂ ತಟಸ್ಥ ಮನೋಭಾವನೆಯನ್ನು ಪ್ರಶ್ನಿಸುವಂತೆ ಮಾಡಿದೆ’ ಎಂದು ಎನ್‌ಸಿ ವಕ್ತಾರ ಜುನೈದ್‌ ಮಟ್ಟು ಹೇಳಿದ್ದಾರೆ.

‘ಗಲ್ಲು ಶಿಕ್ಷೆಗೆ ಒಳಪಟ್ಟ ಅಪರಾಧಿ­ಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಈ ಮೊದಲು ಹಾಗೂ ಇತ್ತೀಚೆಗೆ ನೀಡಿರುವ ತೀರ್ಪುಗಳು ಕಾಶ್ಮೀರಿಗಳ ಗಾಯದ ಮೇಲೆ ಬರೆ ಎಳೆದಿವೆ’ ಎಂದು ಪಿಪಿಡಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.