ADVERTISEMENT

ಉಗ್ರ ಸಂಘಟನೆಗಳತ್ತ ಒಲವು: ರಾಜನಾಥ್‌ ಕಳವಳ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2014, 9:54 IST
Last Updated 29 ನವೆಂಬರ್ 2014, 9:54 IST

ಗುವಾಹಟಿ (ಪಿಟಿಐ): ಭಾರತೀಯ ಮೂಲದ ಕೆಲವು ಯುವಕರು ‘ಐಎಸ್‌’ನಂತಹ ಭಯೋತ್ಪಾದಕ ಸಂಘಟನೆಗಳತ್ತ ಆಕರ್ಷಿತರಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆದ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಭಾರತದ ಯುವಕರು ಭಯೋತ್ಪಾದಕ ಸಂಘಟನೆಗಳ ಆಕರ್ಷಿತರಾಗುತ್ತಿದ್ದಾರೆ ಎನ್ನುವುದು ಲಘುವಾದ ವಿಷಯವಲ್ಲ.  ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಕ್ಕೆ ಇದು ಸವಾಲು ಎಂದು ಅವರು ಹೇಳಿದರು. 

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಐಎಸ್‌’ ಉಗ್ರ ಸಂಘಟನೆ ತೊರೆದು ಇರಾಕ್‌ನಿಂದ ವಾಪಸ್‌ ಬಂದ ಮುಂಬೈನ ಕಲ್ಯಾಣ್‌ ಮೂಲದ ಯುವಕ ಅರೀಫ್‌ ಮಜೀದ್‌ನನ್ನು  ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸುತ್ತಿದೆ ಎಂದರು. ತನಿಖೆ ನೆಪದಲ್ಲಿ ಕಿರುಕುಳ ನೀಡುತ್ತಿಲ್ಲ ಎಂದೂ ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಆಲ್‌ ಖೈದಾ ಭಯೋತ್ಪಾದನೆ ಸಂಘಟನೆ ಭಾರತದಲ್ಲಿ ‘ಖೈದಾ–ಉಲ್–ಜಿಹಾದ್‌’ ಎಂಬ ಘಟಕ ಪ್ರಾರಂಭಿಸುವುದಾಗಿ ಬೆದರಿಕೆ ಒಡ್ಡಿದೆ. ಬಾಂಗ್ಲಾದೇಶ, ಅಸ್ಸಾಂ, ಗುಜರಾತ್‌, ಜಮ್ಮು– ಕಾಶ್ಮೀರ ಸೇರಿದಂತೆ ದೇಶದ ಇತರೆ ನಗರಗಳನ್ನು ತನ್ನ ಕಾರ್ಯಾಚರಣೆ ವ್ಯಾಪ್ತಿಗೆ ತರುವುದು  ಇದರ ಉದ್ದೇಶ. ಆದರೆ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT