ADVERTISEMENT

ಉಚಿತ ವಿದ್ಯುತ್‌, ಕೃಷಿ ಸಾಲ ಮನ್ನಾ

ಆರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜಯಲಲಿತಾ

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:30 IST
Last Updated 23 ಮೇ 2016, 19:30 IST
ಚೆನ್ನೈನ ಮದ್ರಾಸ್‌ ವಿ.ವಿ. ಶತಮಾನೋತ್ಸವ ಭವನದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ರಾಜ್ಯಪಾಲ ರೋಸಯ್ಯ ಅವರಿಗೆ ತಮ್ಮ ಸಂಪುಟದ ಸಚಿವರನ್ನು ಪರಿಚಯಿಸಿದರು – ಪಿಟಿಐ ಚಿತ್ರ
ಚೆನ್ನೈನ ಮದ್ರಾಸ್‌ ವಿ.ವಿ. ಶತಮಾನೋತ್ಸವ ಭವನದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ರಾಜ್ಯಪಾಲ ರೋಸಯ್ಯ ಅವರಿಗೆ ತಮ್ಮ ಸಂಪುಟದ ಸಚಿವರನ್ನು ಪರಿಚಯಿಸಿದರು – ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಜೆ. ಜಯಲಲಿತಾ ರಾಜ್ಯದ ಜನರಿಗೆ ಬಂಪರ್‌ ಕಾಣಿಕೆ ನೀಡಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ  ಕೃಷಿ ಸಾಲ ಮನ್ನಾ, ಉಚಿತ ವಿದ್ಯುತ್‌ ಮುಂತಾದ ಐದು ಭರವಸೆಗಳನ್ನು ಈಡೇರಿಸುವ ಕಡತಗಳಿಗೆ ಅವರು ಸಹಿ ಮಾಡಿದರು.

ಮದ್ರಾಸ್‌ ವಿ.ವಿ. ಶತಮಾನೋತ್ಸವ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆದ ಪ್ರಮಾಣವಚನ ಸಮಾರಂಭದ ನಂತರ ನೇರವಾಗಿ ಸಚಿವಾಲಯಕ್ಕೆ ಧಾವಿಸಿದ ಜಯಲಲಿತಾ, ಮೊದಲು ರೈತರ ಸಾಲ ಮನ್ನಾ ಮಾಡುವ ಕಡತಕ್ಕೆ ಸಹಿ ಮಾಡಿದರು.

ಸಣ್ಣ ಮತ್ತು ಅತಿ ಸಣ್ಣ ರೈತರು 2016ರ ಮಾರ್ಚ್‌ 30ರವರೆಗಿನ ಅವಧಿಯಲ್ಲಿ ವಿವಿಧ ಸಹಕಾರಿ ಬ್ಯಾಂಕ್‌ಗಳಿಂದ ಪಡೆದ ಮಧ್ಯಮಾವಧಿ ಮತ್ತು ದೀರ್ಘಾವಧಿಯ ಎಲ್ಲ ಸಾಲವನ್ನು ಮನ್ನಾ ಮಾಡಲಾಗಿದೆ.  ಇದರಿಂದ ಸರ್ಕಾರದ ಮೇಲೆ ₹ 5,780 ಕೋಟಿ ಹೊರೆ ಬೀಳಲಿದೆ.

ಇದಾಗುತ್ತಿದ್ದಂತೆ ಜಯಲಲಿತಾ ಜನರಿಗೆ ಉಚಿತ ವಿದ್ಯುತ್‌ ನೀಡುವ ಪ್ರಸ್ತಾವಕ್ಕೆ ಸಹಿ ಮಾಡಿದರು. ಸೋಮವಾರದಿಂದಲೇ ಜಾರಿಯಾಗುವಂತೆ ತಮಿಳುನಾಡಿನಲ್ಲಿ ಗೃಹ ಬಳಕೆಗೆ ನೂರು ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಈ ಯೋಜನೆಯಿಂದ ತಮಿಳುನಾಡು ವಿದ್ಯುತ್‌ ಉತ್ಪಾದನೆ ಹಾಗೂ ವಿತರಣಾ ನಿಗಮದ ಮೇಲೆ ₹ 1,607 ಕೊಟಿ ಹೊರೆ ಬೀಳಲಿದೆ.

ಇದರ ಜೊತೆಗೆ ಕೈಮಗ್ಗ ಬಳಸುವವರಿಗೆ ನೀಡುವ ಉಚಿತ ವಿದ್ಯುತ್‌ ಪ್ರಮಾಣವನ್ನು 200 ಯೂನಿಟ್‌ಗೆ ಹಾಗೂ ವಿದ್ಯುತ್‌ ಮಗ್ಗ ನಡೆಸುವವರಿಗೆ ನೀಡುವ ಉಚಿತ ವಿದ್ಯುತ್‌ ಪ್ರಮಾಣವನ್ನು 750 ಯೂನಿಟ್‌ಗೆ ಹೆಚ್ಚಿಸಲಾಗಿದೆ.

‘ತಾಳಿಗಾಗಿ ಚಿನ್ನ’ ಯೋಜನೆಯ ಫಲಾನುಭವಿಗಳಿಗೆ ನೀಡುವ ಚಿನ್ನದ ಪ್ರಮಾಣವನ್ನು ಈಗಿನ 4 ಗ್ರಾಂ ನಿಂದ 8 ಗ್ರಾಂಗೆ ಹೆಚ್ಚಿಸಲಾಗಿದೆ. ಜೊತೆಗೆ ಅವರಿಗೆ ಕೊಡುವ ಸಹಾಯಧನವನ್ನೂ ಈಗಿನ ₹ 25 ಸಾವಿರದಿಂದ ₹ 50ಸಾವಿರಕ್ಕೆ ಹೆಚ್ಚಿಸಲಾಗಿದೆ.

ರಾಜ್ಯ ಸರ್ಕಾರ ನಡೆಸುತ್ತಿದ್ದ 500 ಮದ್ಯ ವಿತರಣಾ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಿರುವ ಜಯಲಲಿತಾ, ಮದ್ಯ ಮಾರಾಟ ಕೇಂದ್ರಗಳು ಮತ್ತು ಬಾರ್‌ಗಳು ಮಧ್ಯಾಹ್ನದ ನಂತರ ತೆರೆದು ರಾತ್ರಿ 10ಗಂಟೆಗೆ ಮುಚ್ಚಬೇಕು ಎಂದು ಆದೇಶಿಸಿದ್ದಾರೆ.

ಸಂಪ್ರದಾಯ ಮುರಿದ ಡಿಎಂಕೆ: ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ವಿರೋಧಪಕ್ಷ ಡಿಎಂಕೆ ನಾಯಕರೂ ತಮ್ಮ ಹಳೆಯ ಸಂಪ್ರದಾಯವನ್ನು ಮುರಿದರು.

ಡಿಎಂಕೆಯ ಎಂ.ಕೆ. ಸ್ಟಾಲಿನ್‌, ಮಾಜಿ ಸಚಿವರಾದ ಇ.ವಿ. ವೇಲು, ಪೊನ್ಮುಡಿ, ಪಕ್ಷದ ಶಾಸಕರಾದ ಶೇಖರ್‌ ಬಾಬು, ವಗೈ ಚಂದ್ರಶೇಖರ್‌ ಹಾಗೂ ಸೆಲ್ವಂ ಸಮಾರಂಭದಲ್ಲಿ ಹಾಜರಿದ್ದರು.

ಪುಷ್ಪವೃಷ್ಟಿ, ನಾದಸ್ವರದ ಸ್ವಾಗತ: ಪ್ರಮಾಣವಚನ ಸ್ವೀಕರಿಸಲು ಬರುತ್ತಿದ್ದ ಜಯಲಲಿತಾ ಅವರ ಮನೆಯಿಂದ ಸಭಾಂಗಣದವರೆಗಿನ ರಸ್ತೆಯ ಇಕ್ಕೆಲದಲ್ಲೂ ಪಕ್ಷದ ಕಾರ್ಯಕರ್ತರು, ಮುಖಂಡರು ತುಂಬಿಹೋಗಿದ್ದರು.

ಜಯಲಲಿತಾ ಕಾರು ಸಭಾಂಗಣದತ್ತ ಬರುತ್ತಿದ್ದಾಗ  ಕಾರ್ಯಕರ್ತರು ಕಾರಿನ ಮೇಲೆ ಗುಲಾಬಿ ಪಕಳೆಗಳನ್ನು ಚೆಲ್ಲಿ ಅವರನ್ನು ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ವಾದ್ಯ ನಾದಸ್ವರ, ಚೆಂಡೆಮೇಳ ನುಡಿಸಲಾಯಿತು.

ರಸ್ತೆಯ ಇಕ್ಕೆಲದಲ್ಲಿ ಪಕ್ಷದ ಧ್ವಜಗಳನ್ನು ಹಿಡಿದಿದ್ದ ಕಾರ್ಯಕರ್ತರು ಜಯಘೋಷ ಮೊಳಗಿಸುತ್ತಿದ್ದರು. ವಿವಿಧ ಪಕ್ಷಗಳ ರಾಜಕೀಯ ಮುಖಂಡರ ಜೊತೆಗೆ, ಚುನಾವಣೆ ಸಂದರ್ಭದಲ್ಲಿ ಜಯಲಲಿತಾ ಪರ ಪ್ರಚಾರ ಮಾಡಿದ್ದ ಚಲನಚಿತ್ರ ನಟರು ಸಹ ಸಮಾರಂಭದಲ್ಲಿ ಇದ್ದರು.

ಹೊಸಮುಖಗಳು:  ಜಯಲಲಿತಾ ಅವರ  ಹಿಂದಿನ ಸಂಪುಟದಲ್ಲಿದ್ದ 15 ಮಂದಿಉಳಿಸಿಕೊಂಡಿದ್ದರೆ, ಮೂವರು ಮಹಿಳೆಯರೂ ಸೇರಿದಂತೆ ಈ ಬಾರಿ 13 ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಿದ್ದಾರೆ.

ಕರುಣಾನಿಧಿ ಆರೋಪ
‘ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಂ.ಕೆ. ಸ್ಟಾಲಿನ್‌ಗೆ 16ನೇ ಸಾಲಿನಲ್ಲಿ ಕುಳಿತುಕೊಳ್ಳಲು ಸ್ಥಾನ ಕಲ್ಪಿಸುವ ಮೂಲಕ ಜಯಲಲಿತಾ ಡಿಎಂಕೆಗೆ ಅವಮಾನ ಮಾಡಿದ್ದಾರೆ’ ಎಂದು ಡಿಎಂಕೆ ಮುಖಂಡ ಎಂ. ಕರುಣಾನಿಧಿ ಆರೋಪಿಸಿದ್ದಾರೆ.

ಸಂಪುಟದಲ್ಲಿ 28 ಸಚಿವರು
ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಯಲಲಿತಾ ತಮಿಳುನಾಡಿನ 32 ವರ್ಷಗಳ ಇತಿಹಾಸ ಮುರಿದಿದ್ದಾರೆ. ಅವರು ಆರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ADVERTISEMENT

ತನ್ನ ಅಚ್ಚುಮೆಚ್ಚಿನ ಹಸಿರು ಬಣ್ಣದ ಸೀರೆಯುಟ್ಟು ಸಭಾಂಗಣಕ್ಕೆ ಬಂದ 68 ವರ್ಷದ ಜಯಲಲಿತಾ, ತಮಿಳು ಭಾಷೆಯಲ್ಲಿ, ದೇವರ ಹೆಸರಿನಲ್ಲಿ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಕೆ. ರೋಸಯ್ಯ ಪ್ರಮಾಣವಚನ ಬೋಧಿಸಿದರು.

ರಾಜ್ಯದಲ್ಲಿ 89 ಸ್ಥಾನಗಳನ್ನು ಗೆದ್ದಿರುವ ಡಿಎಂಕೆ ಪಕ್ಷದ ಮುಖಂಡ, ತನ್ನ ಪುತ್ರ ಸ್ಟಾಲಿನ್‌ಗೆ ವಿಧಾನಸಭೆಯ ವಿರೋಧಪಕ್ಷದ ನಾಯಕನಾಗುವ ಅರ್ಹತೆ ಇದೆ. ಅಂತಹ ನಾಯಕನಿಗೆ ಸಾರ್ವಜನಿಕರ ಮಧ್ಯದಲ್ಲಿ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಮತ್ತೆ ಅದೇ ದಿನ ಪ್ರಮಾಣ
ಸೋಮವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಯಲಲಿತಾ  ಕಾಕತಾಳೀಯವಾಗಿ ಒಂದು ವರ್ಷದ ಅಂತರದಲ್ಲಿ ಸತತವಾಗಿ ಎರಡನೇ ಬಾರಿ ಮೇ 23ರಂದೇ ಪ್ರಮಾಣವಚನ ಸ್ವೀಕರಿಸಿದಂತಾಗಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿದ್ದ ಜಯಲಲಿತಾ ಅವರನ್ನು ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷ ಆರೋಪಮುಕ್ತಗೊಳಿಸಿದ ನಂತರ 2015ರ ಮೇ 23ರಂದೇ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.