ADVERTISEMENT

ಉತ್ತರ ಪ್ರದೇಶಕ್ಕೆ ಸಿನ್ಹಾ ಸಿ.ಎಂ?

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
ಸಿನ್ಹಾ
ಸಿನ್ಹಾ   

ನವದೆಹಲಿ: ಬಿಜೆಪಿ ಭಾರಿ ಬಹುಮತ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ನಡೆಯಲಿದ್ದು, ಕೇಂದ್ರ ಸಚಿವ ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ಸಂಜೆಗೆ ನಿಗದಿಯಾಗಿದೆ. ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮದಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಸಿನ್ಹಾ ಅವರು ‘ನಾನು ಯಾವ ಹುದ್ದೆಯ ಸ್ಪರ್ಧೆಯಲ್ಲಿಯೂ ಇಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ.

ಗಾಜಿಪುರದಿಂದ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಸಿನ್ಹಾ ಅವರೇ ಮುಖ್ಯಮಂತ್ರಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಉತ್ತರ ಪ್ರದೇಶದಂತಹ ಬೃಹತ್‌ ಮತ್ತು ಸಂಕೀರ್ಣ ರಾಜ್ಯವನ್ನು ನಿಭಾಯಿಸಲು ನುರಿತ ರಾಜಕಾರಣಿಯೇ ಬೇಕು. ಹಾಗಾಗಿ ಸಿನ್ಹಾ ಅವರೇ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಸಿನ್ಹಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಚ್ಚುಗೆ ಇದೆ. ಪ್ರಚಾರ ಪ್ರಿಯರಲ್ಲದ ಸಿನ್ಹಾ ಅವರು ಕಠಿಣ ದುಡಿಮೆಯ ವ್ಯಕ್ತಿ ಎಂಬ ಹೆಸರು ಸಂಪಾದಿಸಿದ್ದಾರೆ. ಹಾಗಾಗಿಯೇ ರೈಲ್ವೆಯ ರಾಜ್ಯ ಸಚಿವರಾಗಿದ್ದ ಸಿನ್ಹಾ ಅವರಿಗೆ ಕಳೆದ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ದೂರಸಂಪರ್ಕ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ, ಯೋಗಿ ಆದಿತ್ಯನಾಥ ಮತ್ತು ದಿನೇಶ್‌ ಶರ್ಮಾ ಸ್ಪರ್ಧೆಯಲ್ಲಿರುವ ಇತರರು.
ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಗುರುತಿಸುವಂತೆ ಮೌರ್ಯ ಅವರಿಗೆ ಸೂಚಿಸಿದ್ದೇನೆ ಎಂದು ಕೆಲ ದಿನಗಳ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹೇಳಿದ್ದರು. ಈ ಮೂಲಕ ಮೌರ್ಯ ಅವರು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ ಎಂಬುದನ್ನು ಸೂಚಿಸಿದ್ದರು.

ಭಾನುವಾರ ಪ್ರಮಾಣ
* ಶನಿವಾರ ಸಂಜೆ 4 ಗಂಟೆಗೆ ಉತ್ತರ ಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

* ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ
* ಭಾನುವಾರ ಪ್ರಮಾಣವಚನ
* ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಷಾ, ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ

ಉತ್ತರಾಖಂಡಕ್ಕೆ ತ್ರಿವೇಂದ್ರ
ಉತ್ತರಾಖಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ. ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.