ADVERTISEMENT

ಉತ್ತರ ಪ್ರದೇಶದಲ್ಲಿ ನಿಲ್ಲದ ಅತ್ಯಾಚಾರ ಸರಣಿ

ದೌರ್ಜನ್ಯಕ್ಕೆ ಒಳಗಾದ ಹದಿಹರೆಯದ ಸೋದರಿಯರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 19:30 IST
Last Updated 6 ಜೂನ್ 2014, 19:30 IST

ಲಖನೌ: ಬದಾಯೂಂ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ಪ್ರಟಕವಾ­ಗುತ್ತಿರುವ ಆಕ್ರೋಶದ ಮಧ್ಯೆಯೇ ಅಂತಹುದೇ ಮತ್ತೊಂದು ಘಟನೆ ಇಟಾವಾ ಜಿಲ್ಲೆಯಲ್ಲಿ ವರದಿ­ಯಾಗಿದೆ.

ಇಟಾವಾ ಜಿಲ್ಲೆಯ ಸಿಯಾಪುರ್‌ ಗ್ರಾಮದಲ್ಲಿ 13 ಮತ್ತು 15 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಗುರುವಾರ ಸಾಮೂಹಿಕ ಅತ್ಯಾಚಾ­ರಕ್ಕೆ ಒಳಗಾಗಿದ್ದಾರೆ. ಇಬ್ಬರು ಸಹೋ­ದ­ರಿಯರು ಗೋಧಿ ಹಿಟ್ಟು ಮಾಡಿಸು­ವುದಕ್ಕಾಗಿ ನೆರೆಯ ಗ್ರಾಮದ ಗಿರಣಿಗೆ ಗೋಧಿ ಹೊತ್ತುಕೊಂಡು ಹೋಗುತ್ತಿ­ದ್ದಾಗ ಮೂವರು ಯುವಕರು ಅತ್ಯಾ­ಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕರನ್ನು ಮಹಿಪಾಲ್‌, ರಾಜ್‌­ಪಾಲ್‌ ಮತ್ತು ಸಂಜಯ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಈ ಬಾಲಕಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ­ಗಳು ಅವರನ್ನು ಸಮೀಪದ ಹೊಲಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಕೂಗಿದರೆ ಕೊಲ್ಲು­ವುದಾಗಿಯೂ ಬೆದರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ತಮ್ಮ ಗ್ರಾಮ ಮನುಪುರಕ್ಕೆ ಬಾಲಕಿಯರು ಹಿಂದಿರುಗಿ ಹೆತ್ತವರಿಗೆ ಮಾಹಿತಿ ನೀಡುವುದರೊಂದಿಗೆ ಪ್ರಕ­ರಣ ಬೆಳಕಿಗೆ ಬಂತು.
ಬದಾಯೂಂ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಿಷ್ಕ್ರಿಯರಾ­ಗಿದ್ದರು ಎಂಬ ಕಾರಣಕ್ಕೆ ಎಲ್ಲೆಡೆ­ಯಿಂದ ಭಾರಿ ಟೀಕೆಗೆ ಒಳಗಾಗಿದ್ದ ಪೊಲೀಸರು ಇಟಾವಾ ಜಿಲ್ಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾ­ಗಿ­ದ್ದಾರೆ. ಎಲ್ಲ ಮೂವರು ಆರೋಪಿಗ­ಳನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ­ಯ­ರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಬಾಲ­ಕಿಯ ಮನೆಗೆ ಸಾಕಷ್ಟು ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಕಳೆದ ಮೂರೇ ದಿನಗಳಲ್ಲಿ 12ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.