ADVERTISEMENT

ಎಡದಿಂದ ‘ಬಲ’ಕ್ಕೆ ತ್ರಿಪುರಾ

ಪಿಟಿಐ
Published 3 ಮಾರ್ಚ್ 2018, 19:57 IST
Last Updated 3 ಮಾರ್ಚ್ 2018, 19:57 IST
ಎಡದಿಂದ ‘ಬಲ’ಕ್ಕೆ ತ್ರಿಪುರಾ
ಎಡದಿಂದ ‘ಬಲ’ಕ್ಕೆ ತ್ರಿಪುರಾ   

ಅಗರ್ತಲಾ/ಕೋಹಿಮಾ/ಶಿಲ್ಲಾಂಗ್‌: ಎರಡು ದಶಕಗಳಿಂದ ಎಡಪಕ್ಷದ ಭದ್ರಕೋಟೆಯಾಗಿದ್ದ ತ್ರಿಪುರಾದಲ್ಲಿ ಅಮೋಘ ಜಯ ಸಾಧಿಸುವ ಮೂಲಕ ಬಿಜೆಪಿ ಈಶಾನ್ಯ ರಾಜ್ಯಗಳಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸಿದೆ.

ಇದರೊಂದಿಗೆ ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್‌ ಪಕ್ಷದ ಆಡಳಿತಕ್ಕೆ ತೆರೆ ಬಿದ್ದಿದೆ. ಸತತ ನಾಲ್ಕು ಅವಧಿಗೆ(20 ವರ್ಷ) ರಾಜ್ಯವನ್ನಾಳಿದ ದೇಶದ ಬಡ ಮುಖ್ಯಮಂತ್ರಿ ಎಂದೇ ಖ್ಯಾತರಾಗಿದ್ದ ಮಾಣಿಕ್‌ ಸರ್ಕಾರ್‌ ಆಡಳಿತವೂ ಕೊನೆಯಾಗಲಿದೆ.

ಒಟ್ಟು 60 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಇಂಡಿಜಿನಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರಾ (ಐಪಿಎಫ್‌ಟಿ) 43 ಸ್ಥಾನ ಗೆದ್ದಿವೆ.

ADVERTISEMENT

ಸಿಪಿಎಂ 16 ಸ್ಥಾನದಲ್ಲಿ ಗೆದ್ದಿದ್ದು, ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದೆ. ಸಿಪಿಎಂ ಅಭ್ಯರ್ಥಿ ಮೃತಪಟ್ಟ ಕಾರಣ 59 ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆದಿತ್ತು.

ಕುತೂಹಲ ಕೆರಳಿಸಿದ ನಾಗಾಲ್ಯಾಂಡ್‌:

ನಾಗಾಲ್ಯಾಂಡ್‌ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತು ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಪಾರ್ಟಿ(ಎನ್‌ಡಿಪಿಪಿ) ಮೈತ್ರಿಕೂಟ 28 ಸ್ಥಾನ ಗೆದ್ದಿದೆ. ವಿರೋಧ ಪಕ್ಷ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌) ಸಹ 27 ಸ್ಥಾನ ಗೆದ್ದಿದೆ.

ಎರಡು ಸ್ಥಾನಗಳಲ್ಲಿ ಗೆದ್ದಿರುವ ನಾಗಾ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಕೂಡ ಬಿಜೆಪಿ ಜತೆ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ಗೆ ಇಲ್ಲಿ ಒಂದೇ ಒಂದು ಸ್ಥಾನವನ್ನೂ ಗಳಿಸಲೂ ಸಾಧ್ಯವಾಗಿಲ್ಲ. ಎರಡು ಕಡೆ ಗೆಲುವು ಸಾಧಿಸಿರುವ ಪಕ್ಷೇತರರು ಇಲ್ಲಿ ನಿರ್ಣಾಯಕರಾಗಿದ್ದಾರೆ. ಒಂದು ಕ್ಷೇತ್ರದ ಫಲಿತಾಂಶ ಪ್ರಕಟವಾಗಿಲ್ಲ.


ಮೇಘಾಲಯ ಅತಂತ್ರ:

ಮೇಘಾಲಯದಲ್ಲಿ 21 ಸ್ಥಾನ ಗೆದ್ದಿರುವ ಆಡಳಿತಾರೂಢ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಸ್ವತಂತ್ರವಾಗಿ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ದೊರೆತಿಲ್ಲ.

* ತ್ರಿಪುರಾದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸೂರ್ಯ ಮುಳುಗುವಾಗ ಕೆಂಪಗಿದ್ದ, ಉದಯಿಸುವಾಗ ಕೇಸರಿಯಾಗಿದ್ದಾನೆ

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.