ADVERTISEMENT

ಎಡೆಸ್ನಾನ: ತಡೆಯಾಜ್ಞೆ ರದ್ದು– ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2014, 19:30 IST
Last Updated 24 ಸೆಪ್ಟೆಂಬರ್ 2014, 19:30 IST

ನವದೆಹಲಿ: ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ‘ಮಡೆಸ್ನಾನ’ಕ್ಕೆ ಬದಲಾಗಿ ‘ಎಡೆಸ್ನಾನ’ಕ್ಕೆ ಅವಕಾಶ ಇರಬೇಕು ಎಂಬ ರಾಜ್ಯ ಹೈಕೋರ್ಟ್‌ ಆದೇಶದ ವಿರುದ್ಧ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಪಡಿಸಿತು.

ನ್ಯಾ. ಮದನ ಬಿ. ಲೋಕೂರ್‌ ಹಾಗೂ ನ್ಯಾ. ಸಿ. ನಾಗಪ್ಪ ಅವರಿದ್ದ ನ್ಯಾಯಪೀಠವು ಅರ್ಜಿದಾರರಾದ ‘ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ’ ಅಧ್ಯಕ್ಷ ಭಾಸ್ಕರ ಬಂದೋಡಿ ಅವರಿಗೆ ಅರ್ಜಿ ಹಿಂದಕ್ಕೆ ಪಡೆ­ಯಲು ಅವಕಾಶ ನೀಡಿ, ಪ್ರಕರಣವನ್ನು ಇತ್ಯರ್ಥ­ಪಡಿಸಿತು. ಅರ್ಜಿದಾರರು ಹೈಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಅನುಮತಿ ನೀಡಿತು.

ಹೈಕೋರ್ಟ್‌ ಕಾಲಮಿತಿ ಪ್ರಶ್ನೆ ಎತ್ತದೆ ಪುನರ್‌ ಪರಿಶೀಲನಾ ಅರ್ಜಿ ವಿಚಾರಣೆಗೆ ಅಂಗೀಕರಿಸಬೇಕು, ಆದರೆ, ಅರ್ಹತೆ ಆಧಾರದ ಮೇಲೆ ಪ್ರಕರಣ ಇತ್ಯರ್ಥಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಹೈಕೋರ್ಟ್‌ ತಮ್ಮ ವಾದವನ್ನು ಆಲಿಸಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿರುವುದು ಹೈಕೋರ್ಟ್‌ ನಡಾವಳಿ­ಯಲ್ಲಿ ದಾಖಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪಂಕ್ತಿ ಭೇದ, ಮಡೆ ಸ್ನಾನ, ಮಡೆ ಸೇವೆ ಹಾಗೂ ಮಡೆ ಸೇವನೆ ಆಚರಣೆಗಳನ್ನು  ಇನ್ನು ಮುಂದೆ ಹೈಕೋರ್ಟ್ ತೀರ್ಪಿನ ವ್ಯಾಪ್ತಿಗೊಳ­ಪಟ್ಟು ಆಚರಣೆ ಮಾಡುವುದಾಗಿ ಸರ್ಕಾರ ಹೇಳಿದೆ ಎಂದು ಪ್ರತಿವಾದಿ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅವರ ವಕೀಲರು ನ್ಯಾಯಪೀಠದ ಮುಂದೆ ವಾದಿಸಿದರು.

ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಆಚರಣೆ­ಯಲ್ಲಿ­ರುವ ಬ್ರಾಹ್ಮಣರು ಉಂಡು ಬಿಟ್ಟು ಎಲೆಯ ಮೇಲೆ ಹಿಂದುಳಿದವರು ಉರುಳಾಡುವ ಮಡೆಸ್ನಾದ ಆಚರಣೆ ಬದಲಾಗಿ, ದೇವರಿಗೆ ಇಟ್ಟ ಎಡೆಯನ್ನು ಹೊರ­ತಂದು ಪ್ರಸಾದವೆಂದು ಪರಿಭಾವಿಸಿ ಹೊರಳಾಡಲು ಅವಕಾಶ ನೀಡಬಹುದು ಎಂದು ಹೈಕೋರ್ಟ್‌ ಹೇಳಿತ್ತು. ದೇವಾಲಯದಲ್ಲಿ ಪಂಕ್ತಿ ಭೇದ ಮಾಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ಅವರ ಪೀಠ ಆದೇಶಿಸಿತ್ತು, ಹೈಕೋರ್ಟ್‌ ತೀರ್ಪಿನ ವಿರುದ್ಧ ಆದಿವಾಸಿ ಬುಡಕಟ್ಟು  ಹಿತರಕ್ಷಣಾ ವೇದಿಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.