ADVERTISEMENT

ಎನ್‌ಸಿಪಿ ಬೆಂಬಲಕ್ಕೆ ಚಿಂತನೆ

ಮಹಾರಾಷ್ಟ್ರ: ಬಿಜೆಪಿ–ಸೇನಾ ಮೈತ್ರಿ ಅಸ್ಪಷ್ಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ/ಐಎಎನ್‌ಎಸ್):  ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ, ತನ್ನ ಬಹು­ಕಾಲದ ಮಿತ್ರ ಶಿವಸೇನಾವನ್ನು  ದೂರ ಇಟ್ಟು ಎನ್‌ಸಿಪಿ ಬೆಂಬಲ­ದೊಂದಿಗೆ ಸರ್ಕಾರ ರಚಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಈ ನಡುವೆ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಸಮಾಲೋಚನೆ ನಡೆಸಿದರು.ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಿನ ಕಾರ್ಯತಂತ್ರ ರೂಪಿಸುವ ಬಗ್ಗೆ ಸುಮಾರು ೪೫ ನಿಮಿಷಗಳ ಕಾಲ ಇಬ್ಬರು ನಾಯಕರು ಚರ್ಚಿಸಿದರು.

ಬಿಜೆಪಿ ದ್ವಂದ್ವ: ೨೫ ವರ್ಷಗಳ ಹಳೆಯ ಮಿತ್ರ ಶಿವ­ಸೇನಾ­ವನ್ನು ಸಂಪೂರ್ಣವಾಗಿ ದೂರ­ಮಾ­ಡ­ಬೇಕೇ ಅಥವಾ ಎನ್‌ಸಿಪಿ ಬೆಂಬಲ ಪಡೆಯಬೇಕೆ ಎಂಬ ದ್ವಂದ್ವ ಬಿಜೆಪಿ ಮುಖಂಡರನ್ನು ಕಾಡುತ್ತಿದೆ. ಚುನಾವಣೆ ಪೂರ್ವದಲ್ಲಿ  ಒಣ­ಪ್ರತಿಷ್ಠೆ­ಯಿಂದಾಗಿ  ಬಿಜೆಪಿ–ಸೇನಾ ಮೈತ್ರಿ ಕಡಿದುಕೊಂಡಿದ್ದವು. ಚುನಾವಣೆಯ ನಂತರವೂ ಇದು ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಎನ್‌ಸಿಪಿ ಬೆಂಬಲಕ್ಕೆ ಬಿಜೆಪಿ ಸಮ್ಮತಿ ಸೂಚಿಸಿದ್ದು, ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ಬಳಿಕ ಸರ್ಕಾರ ರಚಿಸುವ ಹಕ್ಕು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಗಾದಿಗೆ ದೇವೇಂದ್ರ ಫಡ್ನವಿಸ್‌ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಸರ್ಕಾರ ರಚನೆಗೆ ಮುನ್ನ ಬಹುಮತ ಸಾಬೀತುಪಡಿಸುವ ಅಗತ್ಯವಿಲ್ಲ ಎನ್ನು­ವುದು ಪಕ್ಷದ ಅನಿಸಿಕೆಯಾಗಿದೆ. ‘ನಾವು ಅತಿ ದೊಡ್ಡ ಪಕ್ಷವಾಗಿ ಹೊರ­ಹೊಮ್ಮಿದ್ದೇವೆ. ಆದ್ದರಿಂದ ಸರ್ಕಾರ ರಚಿಸುವುದಾಗಿ ರಾಜ್ಯಪಾಲರ ಬಳಿ ಹಕ್ಕು ಮಂಡಿಸುವುದಕ್ಕೆ ಸಂಪೂರ್ಣ ಬಹು­ಮತದ ಅಗತ್ಯವಿಲ್ಲ’ ಎಂದು ಮಹಾ­ರಾಷ್ಟ್ರದ ಬಿಜೆಪಿ ಉಸ್ತುವಾರಿ ರಾಜೀವ್‌ ಪ್ರತಾಪ್‌ ರೂಡಿ ಹೇಳಿದ್ದಾರೆ.

ಠಾಕ್ರೆ ಭೇಟಿ: ಹೊಸದಾಗಿ ಆಯ್ಕೆ ಆಗಿ­ರುವ ಸೇನಾ ಶಾಸಕರು ಉದ್ಧವ್‌ ಠಾಕ್ರೆ ಅವರನ್ನು ಸೋಮವಾರ ಭೇಟಿ ಮಾಡಿ­ದರು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಷಯವಾಗಿ ಸಮಾಲೋಚನೆ ನಡೆಯಿತು. ಆದರೆ, ಬಿಜೆಪಿ ಜತೆ ಮರು­ಮೈತ್ರಿ ಕುರಿತು ಚರ್ಚೆ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.