ADVERTISEMENT

ಎಲ್‌ಪಿಜಿ, ಸೀಮೆಎಣ್ಣೆ ಬೆಲೆ ಏರಿಕೆ?

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 11:29 IST
Last Updated 4 ಜುಲೈ 2014, 11:29 IST

ನವದೆಹಲಿ (ಪಿಟಿಐ): ಸೀಮೆಎಣ್ಣೆ ಬೆಲೆ ಪ್ರತಿ ಲೀಟರ್‌ಗೆ ರೂ 4 ಮತ್ತು ಅಡುಗೆ ಅನಿಲ (ಎಲ್‌ಪಿಜಿ) ದರ ಪ್ರತಿ ಸಿಲಿಂಡರ್‌ಗೆ ರೂ 250 ಹೆಚ್ಚುವ ಸಾಧ್ಯತೆ ಇದೆ. ತೈಲ ಸಚಿವಾಲಯ ಶೀಘ್ರದಲ್ಲೇ ಈ ಪ್ರಸ್ತಾವವನ್ನು ರಾಜಕೀಯ ವ್ಯವಹಾರಗಳಿಗೆ ಸಂಬಂ­ಧಿಸಿದ ಸಂಪುಟ ಸಮಿತಿ (ಸಿಸಿಪಿಎ) ಮುಂದಿಡಲಿದೆ.

ಸೀಮೆಎಣ್ಣೆ, ಡೀಸೆಲ್‌ ಮತ್ತು ಎಲ್‌ಪಿಜಿ ದರ ಪರಿಷ್ಕರಣೆಗೆ ಸಂಬಂಧಿ­ಸಿದಂತೆ ಯೋಜನಾ ಆಯೋಗದ ಮಾಜಿ ಸದಸ್ಯ ಕೀರ್ತಿ ಎಸ್‌, ಪಾರೀಖ್‌ ನೇತೃತ್ವದ ತಜ್ಞರ ಸಮಿತಿ ನೀಡಿದ ವರದಿ ಆಧರಿಸಿ, ತೈಲ ಸಚಿವಾಲಯ ಕರಡು ಪ್ರತಿ ಸಿದ್ಧಪಡಿಸಿದ್ದು ಶೀಘ್ರದಲ್ಲೇ ‘ಸಿಸಿಪಿಎ’ ಪರಿಶೀಲನೆಗೆ ಕಳುಹಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಡೀಸೆಲ್‌ ಬೆಲೆಯು ಸದ್ಯಕ್ಕೆ ಈಗಿನಂತೆ ಪ್ರತಿ ತಿಂಗಳಿಗೆ ಸರಾಸರಿ 40 ರಿಂದ 50 ಪೈಸೆಯಷ್ಟು ಹೆಚ್ಚುತ್ತಾ ಹೋಗಲಿದೆ. ಯುಪಿಎ ಸರ್ಕಾರ ಅವಧಿಯಲ್ಲಿ ಇದನ್ನು ಜಾರಿಗೊಳಿಸಲಾಗಿತ್ತು.

2010ರಲ್ಲಿ ಪೆಟ್ರೋಲ್‌ ಬೆಲೆ ನಿಗದಿಯನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸ­ಲಾಗಿತ್ತು. ಇದೇ ರೀತಿ ಡೀಸೆಲ್‌ ಬೆಲೆ­ಯನ್ನೂ ನಿಯಂತ್ರಣ ಮು­ಕ್ತಗೊಳಿಸಬೇಕು ಎನ್ನುವ  ಪ್ರಸ್ತಾವ­ವನ್ನೂ ತೈಲ ಸಚಿವಾಲಯ ‘ಸಿಸಿಪಿಎ’ ಮುಂದಿರಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಅನಿಲ, ತೈಲ ಬೆಲೆ ಏರಿಕೆಯಿಂದ ಸರ್ಕಾರಕ್ಕೆ ವಾರ್ಷಿಕ ರೂ 72 ಸಾವಿರ ಕೋಟಿಯಷ್ಟು ಸಬ್ಸಿಡಿ ಹೊರೆ ತಗ್ಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT