ADVERTISEMENT

ಎಸ್ಐಗೆ ಗುಂಡಿಕ್ಕಿ ತಾನೂ ಸತ್ತ ಎಎಸ್‌ಐ

​ಪ್ರಜಾವಾಣಿ ವಾರ್ತೆ
Published 3 ಮೇ 2015, 12:56 IST
Last Updated 3 ಮೇ 2015, 12:56 IST

ಮುಂಬೈ (ಪಿಟಿಐ): ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಹಿರಿಯ ಅಧಿಕಾರಿಗೆ ಸರ್ವೀಸ್‌ ರಿವಾಲ್ವರ್‌ನಿಂದ ಗುಂಡಿಕ್ಕಿದ ಘಟನೆ ಮುಂಬೈ  ಹೊರವಲಯ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.  ಘಟನೆಯಲ್ಲಿ ಗಾಯಗೊಂಡಿದ್ದ   ಪೊಲೀಸ್ ಅಧಿಕಾರಿಯೂ ಕೊನೆಯುಸಿರೆಳೆದಿದ್ದು, ಈ ಸಂಬಂಧ ವಿಸ್ತೃತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.

ಶನಿವಾರ ಸಂಜೆ 7.30ರ ಸುಮಾರಿಗೆ ಈ ಅವಘಡ ನಡೆದಿದೆ.  ಹಿರಿಯ ಸಬ್ ಇನ್‌ಸ್ಪೆಕ್ಟರ್‌ ವಿಲಾಸ್ ಜೋಷಿ (54) ಹಾಗೂ ಅಸಿಸ್ಟಂಟ್‌ ಸಬ್ ಇನ್‌ಸ್ಪೆಕ್ಟರ್ ದಿಲೀಪ್ ಶಿರ್ಕೆ (55) ಮೃತರು.

ಯಾರು ಯಾರಿಗೆ ಗುಂಡಿಕ್ಕಿದರು?: ಮುಂಬೈನ ಸಾಂತಾುರ್ಜ್‌ನ ವಕೋಲಾ ಪೊಲೀಸ್‌ ಠಾಣೆಯ ಎಎಸ್‌ಐ ದಿಲೀಪ್‌ ಅವರು ತಮ್ಮ ಹಿರಿಯ ಅಧಿಕಾರಿಯಾದ ಎಸ್‌ಐ ವಿಲಾಸ್‌ ಜೋಷಿ ಅವರಿಗೆ ಗುಂಡಿಕ್ಕಿದ್ದಾರೆ. ಬಳಿಕ ತಾನೂ ಅದೇ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಯಗೊಂಡಿದ್ದ ವಿಲಾಸ್‌ ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರೂ ಆಗಿರುವ ಮುಂಬೈ ಪೊಲೀಸ್ ವಕ್ತಾರ ಧನಂಜಯ ಕುಲಕರ್ಣಿ ತಿಳಿಸಿದ್ದಾರೆ.

ಘಟನೆ ನಡೆದಿದ್ದು ಹೀಗೆ..: ಪ್ರಾಥಮಿಕ ವರದಿಯ ಪ್ರಕಾರ, ಶಿರ್ಕೆ ಅವರನ್ನು ಶುಕ್ರವಾರ ರಾತ್ರಿ ಪಾಳಿಗೆ ನಿಯೋಜಿಸಲಾಗಿದ್ದರೂ ಗೈರಾಗಿದ್ದರು.

ಮರು ದಿನ ಠಾಣೆಗೆ ಬಂದ ಶಿರ್ಕೆ ಅವರಿಗೆ ‘ಬೇಜವಾಬ್ದಾರಿ ತೋರಿದ್ದಕ್ಕಾಗಿ’  ಹಿರಿಯ ಅಧಿಕಾರಿ ಜೋಷಿ ಅವರು ಛೀಮಾರಿ ಹಾಕಿದರು. ಈ ವೇಳೆ ರಿವಾಲ್ವರ್‌ನಿಂದ ಶಿರ್ಕೆ  ಗುಂಡು ಹಾರಿಸಿದರು.

‘ಶಿರ್ಕೆ ಅವರು ಐದು ಸುತ್ತು ಗುಂಡು ಹಾರಿಸಿದರು. ಅದರಲ್ಲಿ ಮೂರು ಗುಂಡುಗಳು ಜೋಷಿ ಅವರ ದೇಹ ಹೊಕ್ಕವು. ಒಂದು ಗುಂಡು ವೈರ್‌ಲೆಸ್‌ ಕಂಟ್ರೋಲರ್ ಆಗಿರುವ ಅಧಿರ್ ಅವರಿಗೆ ತಗುಲಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಸ್ತೃತ ತನಿಖೆಗೆ ಸೂಚನೆ ಮುಖ್ಯಮಂತ್ರಿ ಸೂಚನೆ: ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ  ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ವಿಸ್ತೃತ ತನಿಖೆ ನಡೆಸುವಂತೆ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರಿಗೆ ಸೂಚಿಸಿದ್ದಾರೆ.

ಅಲ್ಲದೇ, ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥಿತಿ ಹಾಗೂ ನಡವಳಿಕೆಯನ್ನು ಅಧ್ಯಯನ ಮಾಡಲಾಗುವುದು ಹಾಗೂ ಅವರ ಒತ್ತಡವನ್ನು ನಿವಾರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವರೂ ಆಗಿರುವ ಫಡಣವೀಸ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.