ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 87 ಸ್ಥಾನಗಳಿಗೆ ಐದು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ನ್ಯಾಶನಲ್ ಕಾನ್ಫೆರೆನ್ಸ್ (ಎನ್ಸಿ), ಬಿಜೆಪಿ, ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಹಾಗೂ ಜೆಕೆಎನ್ಪಿಪಿ ಸೇರಿದಂತೆ ಬಹುತೇಕ ಪಕ್ಷಗಳು ಏಕಾಂಗಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿವೆ.
ಮೊದಲ ಹಂತದ ಚುನಾವಣೆಗೆ ಚುನಾವಣಾ ಆಯೋಗವು ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಆದರೂ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನಾಗಲಿ ಅಥವಾ ಚುನಾವಣಾ ಪ್ರಣಾಳಿಕೆಯನ್ನಾಗಲಿ ಈವರೆಗೂ ಪ್ರಕಟಿಸಿಲ್ಲ.
ಬಿಜೆಪಿ, ಬಿಎಸ್ಪಿ, ಎನ್ಸಿಪಿಗಳಂತಹ ರಾಷ್ಟ್ರೀಯ ಪಕ್ಷಗಳು ಏಕಾಂಗಿಯಾಗಿ ಚುನಾವಣೆ ಎದುರಿಸುವ ಸುಳಿವು ನೀಡಿವೆ. ಆದರೆ ನ್ಯಾಷನಲ್ ಕಾಂಗ್ರೆಸ್ ಅಂಗಪಕ್ಷವಾಗಿರುವ ಕಾಂಗ್ರೆಸ್ ಮಾತ್ರ ಚುನಾವಣಾ ಪೂರ್ವ ಮೈತ್ರಿಯ ಬಗೆಗೆ ಮೌನ ಮುರಿದಿಲ್ಲ.
ಮತ್ತೊಂದೆಡೆ, ನ್ಯಾಷನಲ್ ಕಾಂಗ್ರೆಸ್, ಪಿಡಿಪಿ ಹಾಗೂ ಜೆಕೆಎನ್ಪಿಪಿಯಂತಹ ಪ್ರಾದೇಶಿಕ ಪಕ್ಷಗಳೂ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿವೆ.
ಚುನಾವಣಾ ಪೂರ್ವ ಮೈತ್ರಿಯನ್ನು ತಳ್ಳಿಹಾಕಿರುವ ಬಿಜೆಪಿ, ಎಲ್ಲಾ 87 ಸ್ಥಾನಗಳಲ್ಲಿಯೂ ಸ್ಪರ್ಧಿಸುವುದಾಗಿ ಸೋಮವಾರವಷ್ಟೇ ಸ್ಪಷ್ಟಪಡಿಸಿದೆ.
‘ಯಾವುದೇ ರಾಜಕೀಯ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ನಮಗೆ 44ಕ್ಕಿಂತ ಹೆಚ್ಚಿನ ಸೀಟುಗಳು ಲಭಿಸಲಿವೆ’ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಿಜೆಪಿ ಉಸ್ತುವಾರಿ ಅವಿನಾಶ್ ರೈ ಖನ್ನಾ ಅವರು ಸೋಮವಾರವಷ್ಟೇ ಹೇಳಿದ್ದರು.
‘ಚುನಾವಣಾ ಪೂರ್ವ ಮೈತ್ರಿಯಿಲ್ಲದೇ ಏಕಾಂಗಿಯಾಗಿ ಚುನಾವಣೆ ಎದುರಿಸಲಿದ್ದೇವೆ’ ಎಂದು ಬಿಎಸ್ಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಮುಖ್ಯಸ್ಥ ತುಲಸಿದಾಸ್ ತಿಳಿಸಿದ್ದಾರೆ.
ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಅಂಗ ಪಕ್ಷವಾಗಿದ್ದ ಎನ್ಸಿಪಿ ಕೂಡ ಸ್ವತಂತ್ರವಾಗಿ ಚುನಾವಣೆ ಎದುರಿಸುವುದಾಗಿ ಹೇಳಿದೆ.
‘ರಾಜ್ಯದಲ್ಲಿ ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸಲಿದ್ದೇವೆ. ಯಾವುದೇ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯಿಲ್ಲ’ ಎಂದು ಎನ್ಸಿಪಿ ರಾಜ್ಯ ಘಟಕದ ಮುಖ್ಯಸ್ಥ ಠಾಕೂರ್ ರಂಧೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 25ರಿಂದ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.