ADVERTISEMENT

ಐಎಸ್‌ ಸೇರಿದ್ದ ಯುವಕ ಮುಂಬೈಗೆ ವಾಪಸ್‌

ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ಮುಂಬೈ (ಪಿಟಿಐ): ಸಿರಿಯಾದಲ್ಲಿ ಐಎಸ್‌ ಉಗ್ರ ಸಂಘಟನೆ ಪರ ಹೋರಾ­ಡುವಾಗ ಮೃತಪಟ್ಟಿದ್ದ ಎಂದು ಈವರೆಗೆ ನಂಬಲಾದ ಕಲ್ಯಾಣದ 23 ವರ್ಷದ ಯುವಕ ಶುಕ್ರವಾರ ಮುಂಬೈಗೆ ಮರ­ಳಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಈತ­ನನ್ನು ವಿಚಾರಣೆಗೆ ಒಳಪಡಿಸುತ್ತಿದೆ.

ಐಎಸ್‌ ತೊರೆದು ವಾಪಸ್‌ ಬಂದ ಯುವಕನನ್ನು ಆರೀಫ್‌ ಮಜೀದ್‌ ಎಂದು ಗುರುತಿಸಲಾಗಿದೆ.

  ಕಲ್ಯಾಣದ ಯುವಕರಾದ ಆರೀಫ್‌ ಮಜೀದ್‌, ಶಹೀನ್‌ ಟಂಕಿ, ಫಹದ್‌ ಶೇಖ್‌ ಹಾಗೂ ಅಮಾನ್‌ ತಾಂಡೇಲ್‌ ಮಧ್ಯಪ್ರಾಚ್ಯದ ಪವಿತ್ರ ಸ್ಥಳಗಳನ್ನು ನೋಡ­ಲೆಂದು ಮೇನಲ್ಲಿ ಭಾರತ ಬಿಟ್ಟಿ­ದ್ದರು. ಆದರೆ ನಂತರದಲ್ಲಿ ಅವರ ಪತ್ತೆಯೇ ಇರಲಿಲ್ಲ. ಇವರು ಐಎಸ್‌ ಸಂಘಟನೆ ಸೇರಿದ್ದಾಗಿ ಶಂಕಿಸ­ಲಾಗಿತ್ತು.

‘ಆರೀಫ್‌ ತಂದೆ ಏಜಾಜ್‌ ಅವರಿಗೆ ಭದ್ರತಾ ಸಂಸ್ಥೆಗಳು ಕರೆ ಮಾಡಿ ಅವರ ಪುತ್ರ ಮುಂಬೈನಲ್ಲಿ ಇದ್ದಾನೆ ಎಂದು ಮಾಹಿತಿ ನೀಡಿದರು’ ಎಂದು ಆರೀಫ್‌ ಕುಟುಂಬದ ಸ್ನೇಹಿತ ಇಫ್ತಿಕಾರ್‌ ಖಾನ್‌ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಆರೀಫ್‌ ನಾಪತ್ತೆಯಾದ ಬಳಿಕ ಮಹಾರಾಷ್ಟ್ರದ ಭಯೋ­ತ್ಪಾದನಾ ನಿಗ್ರಹ ದಳವು  ಆತನ ಮನೆಯವರನ್ನು ಪ್ರಶ್ನಿಸಿತ್ತು.

‘ಈ ನಾಲ್ವರು ಯುವಕರು ಎಂಜಿನಿಯರಿಂಗ್‌ ವಿದ್ಯಾರ್ಥಿಗ­ಳು. 22 ಯಾತ್ರಾರ್ಥಿಗಳ ತಂಡದಲ್ಲಿದ್ದ ಇವರು ಇರಾಕ್‌ನ ಧಾರ್ಮಿಕ ಸ್ಥಳ ನೋಡಲೆಂದು ಮೇ 23ರಂದು ಬಾಗ್ದಾದ್‌ ಬಿಟ್ಟಿದ್ದರು. ಮಾರನೆಯ ದಿನ ಮನೆಗೆ ಕರೆ ಮಾಡಿದ್ದ ಆರೀಫ್‌, ತಾನು ಮನೆಯವರಿಗೆ ಹೇಳದೇ ಬಂದಿದ್ದಕ್ಕೆ ಕ್ಷಮೆಯಾಚಿಸಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

 ‘ಆರೀಫ್‌, ಫಹದ್‌, ಅಮಾನ್‌ ಹಾಗೂ ಶಹೀನ್‌ ಟಂಕಿ ಬಾಗ್ದಾದ್‌ನ ಫುಲ್ಲಜಾ ನಗರಕ್ಕೆ ಬಾಡಿಗೆ ಕಾರಿನಲ್ಲಿ ಹೋಗಿದ್ದರು’ ಎಂದು ಇತರ ಯಾತ್ರಿಕರು ಪೊಲೀಸರಿಗೆ ತಿಳಿಸಿದ್ದರು.

ಆಗಸ್ಟ್‌ 26ರಂದು ಶಹೀನ್‌ ಟಂಕಿ ಆರೀಫ್‌ ಮನೆಯವರಿಗೆ ಕರೆ ಮಾಡಿ, ‘ನಿಮ್ಮ ಮಗ ಸಿರಿಯಾದಲ್ಲಿ ಐಎಸ್‌ ಪರ ಹೋರಾಡುವಾಗ ಹುತಾತ್ಮ­ನಾದ’ ಎಂದು ಹೇಳಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.