ADVERTISEMENT

ಐಎಸ್‌ ಸಂಪರ್ಕ: ಇಬ್ಬರಿಗೆ ಏಳು ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಐಎಸ್‌ ಸಂಪರ್ಕ: ಇಬ್ಬರಿಗೆ ಏಳು ವರ್ಷ ಜೈಲು
ಐಎಸ್‌ ಸಂಪರ್ಕ: ಇಬ್ಬರಿಗೆ ಏಳು ವರ್ಷ ಜೈಲು   

ನವದೆಹಲಿ: ಐಎಸ್‌ ಭಯೋತ್ಪಾದಕ ಸಂಘಟನೆಗೆ ಜನರನ್ನು ಸೇರಿಸಲು ಹಾಗೂ ನಿಧಿ ಸಂಗ್ರಹ ಮಾಡಲು ಸಂಚು ರೂಪಿಸಿದ್ದಾಗಿ  ಒಪ್ಪಿಕೊಂಡಿರುವ ಇಬ್ಬರು ವ್ಯಕ್ತಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜಮ್ಮು ಮತ್ತು ಕಾಶ್ಮೀರದ ಅಜರ್‌–ಉಲ್‌– ಇಸ್ಲಾಂ (24) ಹಾಗೂ ಮಹಾರಾಷ್ಟ್ರದ ಮೊಹಮ್ಮದ್‌ ಫರ್ಹಾನ್‌್ ಶೇಖ್‌ (25) ಶಿಕ್ಷೆಗೆ ಗುರಿಯಾದವರು.

ಭಾರತೀಯ ದಂಡಸಂಹಿತೆಯ ಅಕ್ರಮ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನ್ಯಾಯಾಲಯ ತಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಒಂದು ತಿಂಗಳ ಬಳಿಕ, ಈ ಇಬ್ಬರೂ ತಾವು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದರು.

ADVERTISEMENT

ವಕೀಲ ಎಂ.ಎಸ್‌. ಖಾನ್‌ ಅವರ ಮೂಲಕ ಆರೋಪಿಗಳು ಇದಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ್ದರು.

‘ತಮ್ಮ ವಿರುದ್ಧ ಇರುವ ಆರೋಪಗಳ ಬಗ್ಗೆ ಇಬ್ಬರೂ ತೀವ್ರ ಪಶ್ಚಾತ್ತಾಪ ಪಡುತ್ತಿದ್ದಾರೆ. ಇವರ ವಿರುದ್ಧ  ಈ ಹಿಂದೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ. ಅರ್ಜಿದಾರರು ಮುಖ್ಯವಾಹಿನಿ ಸೇರಿ ಸಮಾಜಕ್ಕೆ ಉಪಯೋಗವಾಗುವ ರೀತಿ ಇರಲು ಬಯಸುತ್ತಿದ್ದಾರೆ. ಯಾವುದೇ ಒತ್ತಡ, ಬೆದರಿಕೆ, ಪ್ರಭಾವ ಇಲ್ಲದೆ ಅವರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಇಬ್ಬರು ಹಾಗೂ 36 ವರ್ಷದ ಅದ್ನಾನ್‌ ಹಸನ್‌ ಅವರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಕಳೆದ ವರ್ಷದ ಜನವರಿ 28ರಂದು ಪ್ರಕರಣ ದಾಖಲಿಸಿತ್ತು. ಮಾರನೇ ದಿನ ಅಬುಧಾಬಿಯಿಂದ ದೆಹಲಿಗೆ ಬಂದ ತಕ್ಷಣ ಅವರನ್ನು ಬಂಧಿಸಲಾಗಿತ್ತು.

ಯುಎಇಗೆ ಭೇಟಿ: ಹಸನ್‌ ಮತ್ತು ಶೇಖ್‌ 2008ರಿಂದ 2012ರವರೆಗೆ ಉದ್ಯೋಗ ಸಂಬಂಧವಾಗಿ ಪದೇಪದೇ ಅರಬ್‌ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಭೇಟಿ ನೀಡಿದ್ದರು. 2015ರ ಜುಲೈನಲ್ಲಿ ಅಜರ್‌ ಇವರ ಜತೆ ಸೇರಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಹಸನ್‌ ವಿರುದ್ಧ ಪ್ರತ್ಯೇಕವಾಗಿ ವಿಚಾರಣೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.