ADVERTISEMENT

‘ಒಕ್ಕೂಟ ರಂಗ’ ರಚನೆಗೆ ಕಸರತ್ತು

ವಿರೋಧ ಪಕ್ಷಗಳ ನಾಯಕರ ಜತೆ ಮಮತಾ ಬ್ಯಾನರ್ಜಿ ಸಮಾಲೋಚನೆ

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಸಂಸತ್‌ ಭವನದಲ್ಲಿ ಮಂಗಳವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾದರು. ಎನ್‌ಸಿಪಿ ನಾಯಕರಾದ ತಾರೀಖ್‌ ಅನ್ವರ್‌, ಪ್ರಫುಲ್‌ ಪಟೇಲ್‌ ಮತ್ತು ಟಿಎಂಸಿ ನಾಯಕ ದಿನೇಶ್‌ ತ್ರಿವೇದಿ ಇದ್ದರು. -ಪಿಟಿಐ ಚಿತ್ರ
ಸಂಸತ್‌ ಭವನದಲ್ಲಿ ಮಂಗಳವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾದರು. ಎನ್‌ಸಿಪಿ ನಾಯಕರಾದ ತಾರೀಖ್‌ ಅನ್ವರ್‌, ಪ್ರಫುಲ್‌ ಪಟೇಲ್‌ ಮತ್ತು ಟಿಎಂಸಿ ನಾಯಕ ದಿನೇಶ್‌ ತ್ರಿವೇದಿ ಇದ್ದರು. -ಪಿಟಿಐ ಚಿತ್ರ   

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ ವಿರುದ್ಧ ‘ಒಕ್ಕೂಟ ರಂಗ’ ರಚಿಸುವ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ವಿರೋಧ ಪಕ್ಷಗಳ ಹಲವು ಮುಖಂಡರ ಜತೆ ಸಮಾಲೋಚನೆ ನಡೆಸಿದರು.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಶಿವಸೇನಾ ನಾಯಕ ಸಂಜಯ್‌ ರಾವತ್‌ ಹಾಗೂ ಹಲವು ಪ್ರಾದೇಶಿಕ ಪಕ್ಷಗಳ ನಾಯಕರ ಜತೆ ಅವರು ಚರ್ಚಿಸಿದರು. ಸಂಸತ್‌ ಭವನದ ಕಚೇರಿಯಲ್ಲಿ ಶರದ್‌ ಪವಾರ್‌ ಮತ್ತು ಇತರ ಎನ್‌ಸಿಪಿ ನಾಯಕರ ಜತೆ ಮಮತಾ ಒಂದು ಗಂಟೆ ಚರ್ಚಿಸಿದರು.

ಕಾಂಗ್ರೆಸ್‌ ಹೊರತಾದ ‘ಒಕ್ಕೂಟ ರಂಗ’ ರಚಿಸುವ ಕುರಿತು ಮಮತಾ ಬ್ಯಾನರ್ಜಿ ಒಲವು ತೋರಿಸಿದ್ದಾರೆ. ವಿರೋಧ ಪಕ್ಷಗಳ ಈ ಒಕ್ಕೂಟದಲ್ಲಿ ಕಾಂಗ್ರೆಸ್‌ ಸೇರಿಸಿಕೊಂಡರೆ ಟಿಡಿಪಿ, ಬಿಜೆಡಿ ಸೇರಿದಂತೆ ಹಲವು ಪಕ್ಷಗಳು ದೂರ ಉಳಿಯುತ್ತವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಎನ್‌ಸಿಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ADVERTISEMENT

ಎನ್‌ಡಿಎ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಸಂಘಟಿಸುವ ಬಗ್ಗೆ ಮಮತಾ ಹೆಚ್ಚು ಆಸಕ್ತಿ ಹೊಂದಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು, ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪರ್ಯಾಯವಾಗಿ  ‘ಪೀಪಲ್ಸ್‌ ಫ್ರಂಟ್‌ ಆಫ್‌ ಇಂಡಿಯಾ’ ರಚಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಹೊಸ ರಂಗ ರಚನೆಗೆ ಚಾಲನೆ ದೊರೆತಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ತೆಲುಗು ದೇಶಂ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಬಿಜು ಜನತಾ ದಳ, ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕರ ಜತೆ ಮಮತಾ ಬ್ಯಾನರ್ಜಿ ಸಮಾಲೋಚನೆ ನಡೆಸಿದರು.

‘ಬಿಜೆಪಿಯನ್ನು ಸೋಲಿಸಲು ರಾಜ್ಯವಾರು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ. ಬಿಜೆಪಿ ಸೋಲಿಸಲು ಆಯಾ ರಾಜ್ಯಗಳಲ್ಲಿ ಬಲಿಷ್ಠವಾಗಿರುವ ಪಕ್ಷಕ್ಕೆ ವಿರೋಧ ಪಕ್ಷಗಳು ನೆರವು ನೀಡಬೇಕು’ ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.

‘ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಡುವೆ ಮೈತ್ರಿಯಾಗಿರುವುದು ಉತ್ತಮ ಬೆಳವಣಿಗೆ. ಅಖಿಲೇಶ್‌ ಮತ್ತು ಮಾಯಾವತಿ ಅವರು ಲಖನೌದಲ್ಲಿ ಸಭೆ ಕರೆದರೆ ನಾವು ಹೋಗುತ್ತೇವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜತೆಯೂ ಸಂಪರ್ಕದಲ್ಲಿದ್ದೇನೆ. ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದೇನೆ’ ಎಂದು ತಿಳಿಸಿದ್ದಾರೆ.

ಬಿಜೆಪಿಯ ಭಿನ್ನಮತೀಯ ನಾಯಕರಾದ ಶತ್ರುಘ್ನ ಸಿನ್ಹಾ, ಯಶವಂತ್‌ ಸಿನ್ಹಾ ಮತ್ತು ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ ಅವರನ್ನು ಬುಧವಾರ ಮಮತಾ ಭೇಟಿಯಾಗಲಿದ್ದಾರೆ.

‘ಯಾವುದೇ ರಂಗ ಸೇರುತ್ತಿಲ್ಲ’
‘ಶಿವಸೇನಾ ಯಾವುದೇ ರಂಗವನ್ನು ಸೇರುತ್ತಿಲ್ಲ. ಮಮತಾ ಬ್ಯಾನರ್ಜಿ ಅವರ ಜತೆ ಶಿವಸೇನಾ ಉತ್ತಮ ಬಾಂಧವ್ಯ ಹೊಂದಿದೆ’ ಎಂದು  ಪಕ್ಷದ ನಾಯಕ ಸಂಜಯ್‌ ರಾವತ್‌ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಅವರು, ‘ಶಿವಸೇನಾವನ್ನು ನಾನು ಗೌರವಿಸುತ್ತೇನೆ. ಆ ಪಕ್ಷವು ಕೈಯಲ್ಲಿ ಬಂದೂಕು ಹಿಡಿದು ರಾಜಕೀಯ ಮಾಡುವುದಿಲ್ಲ. ಬಿಜೆಪಿಗಿಂತ ಕೋಮುವಾದ ಪಕ್ಷ ಇನ್ನೊಂದಿಲ್ಲ’ ಎಂದು ಟೀಕಿಸಿದರು.

*
ಬಿಜೆಪಿ ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು. ನೋಟು ರದ್ದು ಮತ್ತು ಬ್ಯಾಂಕ್‌ ವಂಚನೆ ಪ್ರಕರಣಗಳಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗುವ ಸಮಯ ಈಗ  ಬಿಜೆಪಿಗೆ ಬಂದಿದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

*
ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಸನ್ನಿವೇಶ ಸೃಷ್ಟಿಯಾಗಲಿದೆ. ವಿರೋಧ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಗ್ಗೂಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
-ಪ್ರಫುಲ್‌ ಪಟೇಲ್‌, ಎನ್‌ಸಿಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.