ADVERTISEMENT

ಒಪ್ಪಿಗೆಯ ವಿಚ್ಛೇದನ: 6 ತಿಂಗಳ ಮರುಚಿಂತನೆ ಅವಧಿ ಕಡ್ಡಾಯವಲ್ಲ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 19:30 IST
Last Updated 12 ಸೆಪ್ಟೆಂಬರ್ 2017, 19:30 IST
ಒಪ್ಪಿಗೆಯ ವಿಚ್ಛೇದನ: 6 ತಿಂಗಳ ಮರುಚಿಂತನೆ ಅವಧಿ ಕಡ್ಡಾಯವಲ್ಲ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ
ಒಪ್ಪಿಗೆಯ ವಿಚ್ಛೇದನ: 6 ತಿಂಗಳ ಮರುಚಿಂತನೆ ಅವಧಿ ಕಡ್ಡಾಯವಲ್ಲ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ   

ನವದೆಹಲಿ: ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಯ ಮರು ಹೊಂದಾಣಿಕೆಗೆ ನೀಡಲಾಗುವ ಆರು ತಿಂಗಳ ಕಡ್ಡಾಯ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ಈ ಮಹತ್ವದ ಆದೇಶ ವಿಚ್ಛೇದನ ಬಯಸುವ ಹಿಂದೂ ದಂಪತಿಗೆ ಅನುಕೂಲ ಮಾಡಿಕೊಡಲಿದೆ.

ಸದ್ಯದ ಹಿಂದೂ ವಿವಾಹ ಕಾಯಿದೆ ಅಡಿ ಗಂಡ ಮತ್ತು ಹೆಂಡತಿ ಬೇರೆಯಾಗಲು ಪರಸ್ಪರ ಒಪ್ಪಿಗೆ ಸೂಚಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ಅಧಿಕೃತ ಅನುಮತಿಗಾಗಿ ಕಡ್ಡಾಯವಾಗಿ ಆರು ತಿಂಗಳು ಕಾಯಬೇಕು. ಈ ಅವಧಿಯಲ್ಲಿ ದಂಪತಿಯ ಮನ ಪರಿವರ್ತನೆಯಾಗಿ ಪುನಃ ಒಂದಾಗುವುದಾದರೆ ಆಗಲಿ ಎಂಬ ಉದ್ದೇಶದೊಂದಿಗೆ ಈ ಕಾಲಾವಕಾಶ ನೀಡಲಾಗುತ್ತದೆ.

ADVERTISEMENT

ಒಂದು ವೇಳೆ ದಂಪತಿ ಒಂದಾಗುವ ಪ್ರಶ್ನೆಯೇ ಇಲ್ಲ ಎಂದಾದ ಮೇಲೆ ಆರು ತಿಂಗಳ ಕಾಲಾವಕಾಶದ ಅಗತ್ಯವೇನಿದೆ ಎಂದು ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಮತ್ತು ಯು.ಯು. ಲಲಿತ್‌ ಅವರು ಪ್ರಶ್ನಿಸಿದರು.

ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರವೂ ದಂಪತಿಯ ಮನಃ ಪರಿವರ್ತಿಸಿ ಅವರು ಒಂದಾಗುವಂತೆ ಪ್ರಯತ್ನಿಸುವುದು ಅಗತ್ಯ. ಆದರೆ, ಅವರು ಒಂದಾಗುವ ಸಾಧ್ಯತೆಯೇ ಇಲ್ಲ ಎಂದ ಮೇಲೆ ಅದಕ್ಕಿಂತ ಒಳ್ಳೆಯ ಆಯ್ಕೆ ಅವರ ಮುಂದಿದೆ ಎಂದರ್ಥ. ಅವರ ಮುಂದಿನ ದಾರಿಯ ಆಯ್ಕೆಯನ್ನು ಅವರ ವಿವೇಚನೆಗೆ ಬಿಡಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಹಿಂದೂ ವಿವಾಹ ಕಾಯ್ದೆ ಸೆಕ್ಷನ್‌ 13ಬಿ (2) ಅಡಿ ಪ್ರಸ್ತಾಪ ಮಾಡಲಾಗಿರುವ ಆರು ತಿಂಗಳ ಕಾಲಾವಕಾಶ ಕಡ್ಡಾಯವಲ್ಲ. ಅದೊಂದು ನಿರ್ದೇಶನ ಎನ್ನುವುದು ಭಾವನೆಯಾಗಿದೆ. ಪ್ರತಿ ಪ್ರಕರಣ ವಿಭಿನ್ನ ಹಿನ್ನೆಲೆ ಹೊಂದಿದ್ದು ಅವುಗಳ ಪೂರ್ವಾಪರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಪು ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ನ್ಯಾಯಾಲಯ ತನ್ನ ವಿವೇಚನೆಯನ್ನು ಬಳಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.