ADVERTISEMENT

ಒಬಿಸಿ ಕೆನೆಪದರ ಮಿತಿ ₹8 ಲಕ್ಷ

ಒಬಿಸಿ ಉಪಜಾತಿಗಳ ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 20:30 IST
Last Updated 23 ಆಗಸ್ಟ್ 2017, 20:30 IST
ಒಬಿಸಿ ಕೆನೆಪದರ ಮಿತಿ ₹8 ಲಕ್ಷ
ಒಬಿಸಿ ಕೆನೆಪದರ ಮಿತಿ ₹8 ಲಕ್ಷ   

ನವದೆಹಲಿ: ಕೇಂದ್ರದ ಪಟ್ಟಿಯಲ್ಲಿರುವ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು ಮೀಸಲಾತಿ ಪಡೆಯಲು ಇರುವ ಕೆನೆಪದರ ವಾರ್ಷಿಕ ಆದಾಯದ ಗರಿಷ್ಠ ಮಿತಿಯನ್ನು ₹8 ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಹಾಗೆಯೇ ಒಬಿಸಿ ಉಪಜಾತಿಗಳ ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚಿಸುವ ಇನ್ನೊಂದು ಮಹತ್ವದ ನಿರ್ಧಾರವನ್ನೂ ಕೈಗೊಂಡಿದೆ.

ಒಬಿಸಿಗೆ ನೀಡಲಾದ ಮೀಸಲಾತಿ ಸೌಲಭ್ಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅದರ ಎಲ್ಲ ಉಪಜಾತಿಗಳಿಗೂ ತಲುಪಬೇಕು ಎಂಬ ಆಶಯದೊಂದಿಗೆ ಉಪಜಾತಿಗಳ ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ.

ADVERTISEMENT

ಒಬಿಸಿ ಉಪಜಾತಿಗಳಿಗೂ ಸಮವಾಗಿ ಮತ್ತು ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯಗಳನ್ನು ತಲುಪಿಸುವ ಹೊಣೆಯನ್ನು ಆಯೋಗ ನಿಭಾಯಿ ಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಅಸ್ತಿತ್ವಕ್ಕೆ ಬಂದ 12 ವಾರಗಳ ಒಳಗಾಗಿ ಆಯೋಗವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.  ಕೇಂದ್ರ ಪಟ್ಟಿಯಲ್ಲಿರುವ ಒಬಿಸಿಯಲ್ಲಿ ಸದ್ಯ ಯಾವುದೇ ಉಪಜಾತಿಗಳಿಲ್ಲ. ಆದರೆ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ವಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಯ ಉಪಜಾತಿಗಳಿಗೂ ಮೀಸಲಾತಿ ಸೌಲಭ್ಯ ನೀಡುತ್ತಿವೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಒಬಿಸಿ ‘ಕೆನೆಪದರ’ದ ಆದಾಯ ಮಿತಿಯನ್ನು ₹10.50 ಲಕ್ಷಕ್ಕೆ ಏರಿಸುವಂತೆ ಇತ್ತೀಚೆಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಅದರ ಆಧಾರದಲ್ಲಿ ಕೇಂದ್ರ ನಿರ್ಧಾರ ಕೈಗೊಂಡಿದ್ದು ₹8 ಲಕ್ಷಕ್ಕೆ ಏರಿಸಲಾಗಿದೆ.

ಈ ಪ್ರಸ್ತಾಪ ಜಾರಿಗೆ ಬಂದಲ್ಲಿ ಮತ್ತಷ್ಟು ‘ಒಬಿಸಿ’ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯ ಸೌಲಭ್ಯ ಪಡೆಯಲಿದ್ದಾರೆ.

**

ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ!

ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಕಲ್ಪಿಸುವ ಸರ್ಕಾರದ ಈ ನಡೆ ರಾಷ್ಟ್ರ ರಾಜಕಾರಣದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೂರು ದಶಕಗಳ ಹಿಂದೆ ಮಂಡಲ ಆಯೋಗದ ಮೀಸಲಾತಿ ನೀತಿಯ ಅನುಕೂಲ ಪಡೆದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿರುವ ಯಾದವ ಸಮುದಾಯಗಳಿಗೆ ಈ ನಿರ್ಧಾರದ ಬಿಸಿ ತಟ್ಟಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ರೀತಿಯಲ್ಲಿಯೇ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಚಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ. ಇದು ರಾಜಕೀಯ ಪರಿಣಾಮ ಬೀರುವ ಸಾಧ್ಯತೆ ಇದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.