ADVERTISEMENT

ಕಪ್ಪಗಿದ್ದರೆ ಒಳ್ಳೆಯ ವರ ಸಿಗುವುದಿಲ್ಲ: ಗೋವಾ ಸಿಎಂ

ಆರೋಪ ಅಲ್ಲಗಳೆದ ಪರ್ಸೇಕರ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 10:21 IST
Last Updated 1 ಏಪ್ರಿಲ್ 2015, 10:21 IST

ಪಣಜಿ  (ಪಿಟಿಐ): ‘ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರೂ ಸುಂದರಿಯರು’ ಎಂಬ ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಅವರ ವಿವಾದಿತ ಹೇಳಿಕೆ ಇನ್ನೂ ಹಸಿಯಾಗಿರುವಾಗಲೇ, ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್‌ ಕೂಡ ಇಂಥದೊಂದು ವಿವಾದಿತ ಹೇಳಿಕೆ  ನೀಡಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಮುಖ್ಯಮಂತ್ರಿ ಕಚೇರಿ ಮುಂದೆ 108 ಆಂಬುಲೆನ್ಸ್‌ ಸೇವೆಗೆ ನಿಯೋಜನೆಗೊಂಡಿದ್ದ ದಾದಿಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು, ‘ಹೆಣ್ಣು ಮಕ್ಕಳು ಈ ರೀತಿ ಬಿಸಿಲಿನಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡಬಾರದು. ಪ್ರಖರ ಬಿಸಿಲಿಗೆ  ಮುಖದ ಬಣ್ಣ ಕಪ್ಪಾಗುತ್ತದೆ.  ಮುಖದ ಬಣ್ಣ ಕಪ್ಪಾದರೆ ಒಳ್ಳೆಯ ವರ ಸಿಗುವುದಿಲ್ಲ’ ಎಂದರು ಎಂದು, ಪ್ರತಿಭಟನೆಯಲ್ಲಿ ಭಾಗವಹಿಸಿದ ದಾದಿ ಅನುಶಾ ಸಾವಂತ್‌ ಆರೋಪಿಸಿದ್ದಾರೆ.

ಆದರೆ, ಪರ್ಸೇಕರ್‌ ಇದನ್ನು ತಳ್ಳಿಹಾಕಿದ್ದಾರೆ. ತಾವು ಈ ರೀತಿ ಹೇಳಿಕೆ ನೀಡಿಲ್ಲ. ತಾವು ಹೇಳಿದ್ದನ್ನು ತಪ್ಪಾಗಿ ಗ್ರಹಿಸಿಕೊಂಡು ಬರೆಯಲಾಗಿದೆ ಎಂದು ಅವರು  ಹೇಳಿದ್ದಾರೆ.

ಕೆಲವು ದಾದಿಯರು ತುಂಬಾ ಹೊತ್ತಿನಿಂದ ಬಿಸಿಲಿನಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು.  ಆರಂಭದಲ್ಲಿ ನಾನು ಅವರನ್ನು ಗಮನಿಸಿದ್ದೆ. ಸ್ವಲ್ಪ ಹೊತ್ತಿನ ನಂತರ ಅವರು ನನ್ನ ಬಳಿ ಮನವಿ ಸಲ್ಲಿಸಲು ಬಂದರು. ಆಗ ಅವರೆಲ್ಲರೂ ಬಳಲಿದಂತೆ ಕಾಣುತ್ತಿದ್ದರು. ಪ್ರಖರ ಬಿಸಿಲಿಗೆ ದಾದಿಯರ ಮುಖ ಕಳಾಹೀನವಾಗಿತ್ತು.  ಹಾಗಾಗಿ ಸಹಜವಾಗಿಯೇ ನಾನು  ಬಿಸಿಲಿನಲ್ಲಿ ಉಪವಾಸ ಕುಳಿತು ಯಾಕೆ ಪ್ರತಿಭಟನೆ ಮಾಡುತ್ತೀರಿ ಎಂದಷ್ಟೇ ಕೇಳಿದೆ. ಅವರ ಚರ್ಮದ ಬಣ್ಣದ ಬಗ್ಗೆ, ಮದುವೆ ಬಗ್ಗೆ ಏನೂ ಕೇಳಿಲ್ಲ, ಏನೂ ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಮನವಿ ಕೊಡಲು ಬಂದವರಲ್ಲಿ ಕೆಲವರು ನನ್ನ ಮಾತುಗಳನ್ನು ಮೊಬೈಲ್‌ನಲ್ಲಿ ಧ್ವನಿಮುದ್ರಿಸಿಕೊಂಡಿದ್ದಾರೆ. ಬೇಕಿದ್ದರೆ ಅದನ್ನು ಪರಿಶೀಲಿಸಲಿ. ಎಲ್ಲಿಯೂ ನಾನು ಈ ರೀತಿಯ ಹೇಳಿಕೆ ನೀಡಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT