ADVERTISEMENT

ಕಪ್ಪು ಹಣ ಎಲ್ಲಿದೆ? ಇದ್ದದ್ದೆಲ್ಲಾ ಬಿಳಿಯಾಯಿತೇ?

ಕಪ್ಪು ಹಣದ ಮೇಲಿನ ಸರ್ಜಿಕಲ್ ಸ್ಟ್ರೈಕ್ ವಿಫಲ

ಏಜೆನ್ಸೀಸ್
Published 1 ಡಿಸೆಂಬರ್ 2016, 14:32 IST
Last Updated 1 ಡಿಸೆಂಬರ್ 2016, 14:32 IST
ಕಪ್ಪು ಹಣ ಎಲ್ಲಿದೆ? ಇದ್ದದ್ದೆಲ್ಲಾ ಬಿಳಿಯಾಯಿತೇ?
ಕಪ್ಪು ಹಣ ಎಲ್ಲಿದೆ? ಇದ್ದದ್ದೆಲ್ಲಾ ಬಿಳಿಯಾಯಿತೇ?   

ನವದೆಹಲಿ: ನೋಟು ನಿಷೇಧದ ಮೂಲಕ ಕಪ್ಪು ಹಣವನ್ನು ಹೊರತರುವ ಸರ್ಕಾರದ ಪ್ರಯತ್ನ ಬೆಟ್ಟ ಅಗೆದು ಇಲಿ ಹಿಡಿದಂತಾಯಿತೇ?

ರಿಸರ್ವ್ ಬ್ಯಾಂಕ್ ಒದಗಿಸುತ್ತಿರುವ ಅಂಕಿ-ಅಂಶಗಳನ್ನು ನೋಡಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ದೇಶದೊಳಗೆ ಇದ್ದ ಕಪ್ಪು ಹಣ ಅದರಲ್ಲೂ ಮುಖ್ಯವಾಗಿ ಐದು ನೂರು ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳ ರೂಪದಲ್ಲಿದ್ದ ಕಪ್ಪು ಹಣ ಎಷ್ಟೆಂಬ ಖಚಿತ ಲೆಕ್ಕಾಚಾರ ಯಾರ ಬಳಿಯೂ ಇರಲಿಲ್ಲ. ಇಲ್ಲಿಯ ತನಕ ಈ ಮೊತ್ತವನ್ನು ಮೂರರಿಂದ ಐದು ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗುತ್ತಿತ್ತು.

ನವೆಂಬರ್ ಎಂಟರಂದು ನೋಟು ನಿಷೇಧವನ್ನು ಘೋಷಿಸಿದ ನಂತರ ಬ್ಯಾಂಕ್ ಖಾತೆಗಳಿಗೆ ಬಂದಿರುವ ಮೊತ್ತದ ಲೆಕ್ಕಾಚಾರ ನೋಡಿದರೆ ನೋಟು ನಿಷೇಧ ಕಪ್ಪು ಹಣವನ್ನು ಇಲ್ಲವಾಗಿಸಿತೇ ಎಂಬ ಪ್ರಶ್ನೆಯನ್ನು ಕೇಳಲೇಬೇಕಾಗುತ್ತದೆ.

ADVERTISEMENT

ಮಂಗಳವಾರದಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘ್ವಾಲ್ ಅವರು 'ನವೆಂಬರ್ 8ರವರೆಗಿನ ಲೆಕ್ಕಾಚಾರದಂತೆ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟುಗಳ ಮೌಲ್ಯ 15.44 ಲಕ್ಷ ಕೋಟಿ ರೂಪಾಯಿಗಳು'

ರಿಸರ್ವ್ ಬ್ಯಾಂಕ್ ನವೆಂಬರ್ 28ರಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳು ಹೇಳುತ್ತಿರುವಂತೆ ನವೆಂಬರ್ 27ರ ತನಕ 8.45 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳು ಬ್ಯಾಂಕ್‌ಗಳಿಗೆ ಠೇವಣಿಯಾಗಿ ಬಂದಿದೆ. ಇದು ಕೇವಲ 18 ದಿನಗಳ ಲೆಕ್ಕಾಚಾರ.

ವಿವಿಧ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಲ್ಲಿ ಮೀಸಲು ನಿಧಿಯೊಂದನ್ನು ಇಟ್ಟಿರಬೇಕಾಗುತ್ತದೆ. ಈ ಮೀಸಲು ನಿಧಿಗೆ ಸಾಮಾನ್ಯವಾಗಿ 500 ಮತ್ತು 1000 ರೂಪಾಯಿಗಳ ನೋಟುಗಳನ್ನೇ ಬಳಸಲಾಗುತ್ತಿತ್ತು. ಈ ನಿಧಿಯ ರೂಪದಲ್ಲಿದ್ದ ಹಣ 4.06 ಲಕ್ಷ ಕೋಟಿ ರೂಪಾಯಿಗಳು.

ಇದರ ಹೊರತಾಗಿ ಬ್ಯಾಂಕುಗಳಲ್ಲಿ ಇದ್ದ ಹಣದ ಪ್ರಮಾಣ 70,000 ಕೋಟಿ ರೂಪಾಯಿಗಳು. ಇದರಲ್ಲಿ ಬೇರೆ ಬೇರೆ ಮುಖ ಬೆಲೆಯ ನೋಟುಗಳೂ ಇರುತ್ತವೆ ಎಂಬ ಅಂಶವನ್ನು ಪರಿಗಣಿಸಬೇಕು. ಹಾಗೆಯೇ ಒಟ್ಟಾರೆ ನೋಟುಗಳಲ್ಲಿ 1000 ಮತ್ತು 500 ರೂಪಾಯಿ ನೋಟುಗಳೇ ಶೇಕಡಾ 86ರಷ್ಟಿದ್ದವು ಎಂಬ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಬೇಕಾಗುತ್ತದೆ. ಸುಮಾರು 50,000 ಕೋಟಿಯಷ್ಟು ಹಣ ದೊಡ್ಡ ಮೊತ್ತದ ನೋಟುಗಳಲ್ಲಿದ್ದವು ಎಂದುಕೊಳ್ಳಬಹುದು.

ಅಂದರೆ ನವೆಂಬರ್ 27ರ ತನಕ ಜನರು ಬ್ಯಾಂಕ್‌ಗಳಿಗೆ ತಂದುಕೊಟ್ಟ ದೊಡ್ಡ ಮೊತ್ತದ ನೋಟುಗಳು, ರಿಸರ್ವ್ ಬ್ಯಾಂಕ್‌ನಲ್ಲಿದ್ದ ಮೀಸಲು ನಿಧಿ ಮತ್ತು ಬ್ಯಾಂಕ್‌ಗಳ ಬಳಿ ಇದ್ದ ನೋಟುಗಳನ್ನೆಲ್ಲಾ ಒಟ್ಟು ಸೇರಿಸಿದರೆ 13 ಲಕ್ಷ ಕೋಟಿ ರೂಪಾಯಿಗಳಾಗುತ್ತದೆ.

ಇನ್ನು ಉಳಿದಿರುವುದು 2.44 ಲಕ್ಷ ಕೋಟಿ ರೂಪಾಯಿಗಳ ಮೊತ್ತದ ದೊಡ್ಡ ನೋಟುಗಳು ಮಾತ್ರ.  ಈಗಲೂ ಬ್ಯಾಂಕುಗಳಿಗೆ ಹಳೆಯ ನೋಟುಗಳು ಹರಿದು ಬರುತ್ತಲೇ ಇವೆ. ಬ್ಯಾಂಕಿಗೆ ಬರುತ್ತಿರುವ ನೋಟುಗಳ ಪ್ರಮಾಣವೇನೂ ಇಳಿಮುಖವಾಗಿಲ್ಲ. ಇದೇ ಗತಿಯಲ್ಲಿ ಹಳೆಯ ನೋಟುಗಳ ಹರಿವು ಮುಂದುವರಿದರೆ ದೇಶದೊಳಗೆ ಕಪ್ಪು ಹಣವೇ ಇರಲಿಲ್ಲ ಎಂಬ ನಿರ್ಧಾರಕ್ಕೇ ಬರಬೇಕಾಗುತ್ತದೆಯೇನೋ...?

ಈವರೆಗಿನ ಲೆಕ್ಕಾಚಾರಗಳಂತೆ ಎರಡು ತೀರ್ಮಾನಕ್ಕೆ ಬರಬಹುದು. ಮೊದಲನೆಯದ್ದು 500 ಮತ್ತು 1000 ರೂಪಾಯಿಗಳ ನೋಟಿನ ರೂಪದಲ್ಲಿದ್ದ ಕಪ್ಪು ಹಣದ ಪ್ರಮಾಣ ಬಹಳ ಸಣ್ಣದಾಗಿತ್ತು. ಎರಡನೆಯದ್ದು ಕಪ್ಪು ಹಣವನ್ನು ಇಟ್ಟುಕೊಂಡಿದ್ದವರು ಯಶಸ್ವಿಯಾಗಿ ಅದನ್ನು ಚಲಾವಣೆಗೆ ಅರ್ಹವಾಗಿರುವ ನೋಟುಗಳಾಗಿ ಪರಿವರ್ತಿಸಿಕೊಂಡಿದ್ದಾರೆ.

ಈ ಎರಡು ತರ್ಕಗಳಲ್ಲಿ ಯಾವು ನಿಜವಾದರೂ ಸರ್ಕಾರ ಬೆಟ್ಟ ಅಗೆದು ಇಲಿಯನ್ನು ಹಿಡಿವ ಕೆಲಸ ಮಾಡಿತು ಎನ್ನಬೇಕಾಗುತ್ತದೆ. ಪ್ರಧಾನ ಮಂತ್ರಿಯವರು ಕಪ್ಪು ಹಣದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌‌ನಲ್ಲಿ ಗಾಯಗೊಂಡವರು ಬಡವರು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.