ADVERTISEMENT

ಕಲಾಂಗೆ ಭಾವಪೂರ್ಣ ವಿದಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ರಾಮೇಶ್ವರ /ತಮಿಳುನಾಡು (ಪಿಟಿಐ): ಮಾಜಿ ರಾಷ್ಟ್ರಪತಿ, ‘ಭಾರತ ರತ್ನ’ ಡಾ. ಅಬ್ದುಲ್‌ ಕಲಾಂ ಅವರಿಗೆ ದೇಶ ಗುರುವಾರ ಭಾವಪೂರ್ಣ ವಿದಾಯ  ಹೇಳಿತು.

ಅವರ ಹುಟ್ಟೂರಾದ ರಾಮೇಶ್ವರ ಬಳಿಯ ಪೆಯಿಕರಂಬುವಿನಲ್ಲಿ ಗುರುತಿಸಲಾದ ಎರಡು ಎಕರೆ ವಿಶಾಲ ಜಾಗದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಕ್ಷಿಪಣಿ ಪಿತಾಮಹನ ಅಂತ್ಯಕ್ರಿಯೆ  ನಡೆಯಿತು.

ಕಲಾಂ ಅವರ ಹಿರಿಯ ಸಹೋದರ 99 ವರ್ಷದ ಎ.ಪಿ.ಜೆ.ಎಂ.ಕೆ. ಶೇಖ್ ಸಲೀಮ್, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮುಸ್ಲಿಂ ಧರ್ಮದ ವಿಧಿ, ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮೊದಲು ರಾಮೇಶ್ವರ ಮಸೀದಿಯಲ್ಲಿ ನಮಾಜ್‌ ಸಲ್ಲಿಸಿದ ಬಳಿಕ ತ್ರಿವರ್ಣ ಧ್ವಜ ಹೊದಿಸಿದ್ದ ಕಲಾಂ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ತರಲಾಯಿತು.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ,  ಸಿದ್ದರಾಮಯ್ಯ ಸೇರಿದಂತೆ  ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸಚಿವರು, ಕಲಾಂ  ಮಾಜಿ ಸಹೋದ್ಯೋಗಿ ವಿಜ್ಞಾನಿಗಳು ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಸೇನಾ ಬ್ಯಾಂಡ್‌ ಚರಮಗೀತೆ ನುಡಿಸಿದ ಬಳಿಕ ಮೂರು ಪಡೆಗಳ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೇಶದ ಮೂಲೆ, ಮೂಲೆಗಳಿಂದ  ಸಾವಿರಾರು ಜನರು ರಾಮೇಶ್ವರಕ್ಕೆ ಬಂದಿದ್ದರು. ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು, ಕೇರಳ ಹಾಗೂ ತಮಿಳುನಾಡು ರಾಜ್ಯಪಾಲರಾದ ಪಿ.ಸದಾಶಿವಂ, ಕೆ.ರೋಸಯ್ಯ  ಸೇರಿ ದಂತೆ ಅನೇಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.  ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಜಯಲಲಿತಾ  ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಮಾಜಿ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಹಾಗೂ ಇನ್ನಿತರ ಸಚಿವರು   ಹಾಜರಿದ್ದರು.

ಪ್ರಧಾನಿ ಮೋದಿ ಸೇರಿದಂತೆ ಎಲ್ಲ ಗಣ್ಯರು ಕಲಾಂ ಅಣ್ಣ ಶೇಖ್ ಸಲೀಮ್ ಹಾಗೂ ಕುಟುಂಬ ಸದಸ್ಯರ ಬಳಿ ತೆರಳಿ ಸಾಂತ್ವನ ಹೇಳಿದರು.

‘ಸೋನಿಯಾ  ಪ್ರಧಾನಿಯಾಗಲು  ಆಕ್ಷೇಪ ಇರಲಿಲ್ಲ’
2004ರಲ್ಲಿ ಯುಪಿಎ ಸರ್ಕಾರ ರಚನೆ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗಲು ಅಂದು ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಸುದ್ದಿಯನ್ನು ‘ಶುದ್ಧ ಸುಳ್ಳು’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಗುರುವಾರ ಖಾಸಗಿ ಸುದ್ದಿವಾಹಿನಿ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಹೆಮ್ಮೆಯ ಕಲಾಂ, ದೇಶದ್ರೋಹಿ ಮೆಮನ್‌
ಇಬ್ಬರು ಭಾರತೀಯ ಮುಸ್ಲಿಮರ ಅಂತ್ಯಕ್ರಿಯೆ ಒಂದೇ ದಿನ ನಡೆದಿರುವುದು ಎಂತಹ ಕಾಕತಾಳಿಯ! ಒಬ್ಬರು ತಮ್ಮ ಸಾಧನೆಯ ಮೂಲಕ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥ ಸಾಧನೆ ಮಾಡಿದ ಡಾ. ಕಲಾಂ.  ಮತ್ತೊಬ್ಬ ದೇಶದ್ರೋಹದಿಂದ ಇಡೀ ಸಮುದಾಯ ತಲೆತಗ್ಗಿಸುವಂತೆ ಮಾಡಿದ ಮೆಮನ್‌.- ದಿಗ್ವಿಜಯ ಸಿಂಗ್ , ಕಾಂಗ್ರೆಸ್‌ ನಾಯಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.