ADVERTISEMENT

ಕಾಂಗ್ರೆಸ್‌–ಹಾರ್ದಿಕ್ ಒಪ್ಪಂದ ಅಂತಿಮ

ಪಟೇಲ್‌ ಮನವೊಲಿಕೆಯ ಕಾಂಗ್ರೆಸ್‌ ಯತ್ನಕ್ಕೆ ಯಶಸ್ಸು: ಇಂದು ಘೋಷಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಕಾಂಗ್ರೆಸ್‌–ಹಾರ್ದಿಕ್ ಒಪ್ಪಂದ ಅಂತಿಮ
ಕಾಂಗ್ರೆಸ್‌–ಹಾರ್ದಿಕ್ ಒಪ್ಪಂದ ಅಂತಿಮ   

ಅಹಮದಾಬಾದ್‌: ಮೀಸಲಾತಿಗೆ ಸಂಬಂಧಿಸಿ ಕಾಂಗ್ರೆಸ್‌ ಜತೆಗಿನ ಒಪ್ಪಂದ ಅಂತಿಮವಾಗಿದೆ ಎಂದು ಪಟೇಲ್‌ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಡುತ್ತಿರುವ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಿಎಎಎಸ್‌) ಭಾನುವಾರ ಹೇಳಿದೆ.

‘ಮುಖ್ಯಮಂತ್ರಿ ವಿಜಯ ರೂಪಾಣಿ ಅವರ ಕ್ಷೇತ್ರವಾದ ರಾಜಕೋಟ್‌ನಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಒಪ್ಪಂದದ ವಿವರಗಳನ್ನು ಹಾರ್ದಿಕ್‌ ಪಟೇಲ್‌ ಅವರು ಬಹಿರಂಗಪಡಿಸಲಿದ್ದಾರೆ’ ಎಂದು ಪಿಎಎಎಸ್‌ನ ಸಂಚಾಲಕ ದಿನೇಶ್‌ ಭಂಭಾನಿಯಾ ಅವರು ಹೇಳಿದ್ದಾರೆ.

ಪಟೇಲ್‌ ಮೀಸಲಾತಿ ಹೋರಾಟದ ಮುಖಂಡರು ಮತ್ತು ಕಾಂಗ್ರೆಸ್‌ ನಡುವೆ ಭಾನುವಾರ ಸುದೀರ್ಘ ಸಭೆ ನಡೆದಿದೆ. ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿಂಹ ಸೋಲಂಕಿಮತ್ತು ಸಿದ್ಧಾರ್ಥ ಪಟೇಲ್‌ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಮೀಸಲಾತಿ ವಿಚಾರದಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ಸೋಲಂಕಿ ಅವರೂ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ಮುಖಂಡರಾಗಲಿ, ಪಿಎಎಎಸ್‌ ಮುಖಂಡರಾಗಲಿ ಒಪ್ಪಂದದ ವಿವರಗಳನ್ನು ನೀಡಿಲ್ಲ.

ADVERTISEMENT

ಇತರ ಹಿಂದುಳಿದ ವರ್ಗಗಳ ಯುವ ನಾಯಕ ಅಲ್ಪೇಶ್‌ ಠಾಕೊರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ದಲಿತ ಯುವ ಮುಖಂಡ ಜಿಗ್ನೇಶ್‌ ಮೆವಾನಿ ಅವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ರಾಜ್ಯದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠ
ವಾಗಿರುವ ಪಟೇಲ್‌ ಸಮುದಾಯದ ಯುವ ಮುಖಂಡ ಹಾರ್ದಿಕ್‌ ಪಟೇಲ್‌ ಅವರನ್ನು ಒಲಿಸಿಕೊಳ್ಳುವ ಕಾಂಗ್ರೆಸ್‌ ಪ್ರಯತ್ನ ಫಲ ನೀಡಿದಂತೆ ಕಾಣುತ್ತಿದೆ.

ಗುಜರಾತಿನಲ್ಲಿ ಪಟೇಲ್‌ ಸಮುದಾಯದ ಜನಸಂಖ್ಯೆ ಪ್ರಮಾಣ ಶೇ 12–14ರಷ್ಟಿದೆ. 182 ವಿಧಾನಸಭಾ ಕ್ಷೇತ್ರಗಳ ಪೈಕಿ 60ರಲ್ಲಿ ಈ ಸಮುದಾಯ ನಿರ್ಣಾಯಕ.

ಪಿಎಎಎಸ್‌ನ ಕೆಲವು ಮುಖಂಡರು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಪಿಎಎಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ಮೀಸಲಾತಿಗೆ ಸಂಬಂಧಿಸಿ ಒಮ್ಮತಕ್ಕೆ ಬಂದಿರುವ ಕಾರಣ ಈಗ ಟಿಕೆಟ್‌ ಹಂಚಿಕೆ ಬಗ್ಗೆ ಪಿಎಎಎಸ್‌ ಗಮನ ಹರಿಸುತ್ತಿದೆ ಎಂದು ಹೇಳಲಾಗಿದೆ. ಪಟೇಲ್‌ ಸಮುದಾಯ ಪ್ರಬಲವಾಗಿರುವ ಪ್ರದೇಶಗಳಲ್ಲಿ ಕನಿಷ್ಠ 9 ಟಿಕೆಟ್‌ಗಳನ್ನು ಪಿಎಎಎಸ್‌ ಮುಖಂಡರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಪಿಎಎಎಸ್‌ ಮುಂದಿಟ್ಟಿದೆ ಎಂದು ತಿಳಿದು ಬಂದಿದೆ.

ಆದರೆ, ಹಾರ್ದಿಕ್‌ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ಲೈಂಗಿಕ ಸಂಬಂಧದ ವಿಡಿಯೊಗಳು ಬಹಿರಂಗವಾದ ಬಳಿಕ ಕಾಂಗ್ರೆಸ್‌ ತನ್ನ ನಿಲುವನ್ನು ಹೆಚ್ಚು ಗಟ್ಟಿಗೊಳಿಸಿದೆ. ಅದು ನಾಲ್ಕು ಕ್ಷೇತ್ರಗಳಿಗಷ್ಟೇ ಟಿಕೆಟ್‌ ನೀಡಲು ಮುಂದಾಗಿದೆ. ಸಣ್ಣ ಮಟ್ಟದ ಅತೃಪ್ತಿಗೆ ಇದು ಕಾರಣವಾಗಿದೆ. ಹಾಗಿದ್ದರೂ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಮುಖಂಡರು ಹೇಳಿದ್ದಾರೆ. ಪಿಎಎಎಸ್‌ಗೆ ಎಷ್ಟು ಟಿಕೆಟ್‌ ದೊರೆಯಲಿದೆ ಎಂಬುದನ್ನು ಹಾರ್ದಿಕ್‌ ಅವರು ಸೋಮವಾರ ಘೋಷಿಸುವ ಸಾಧ್ಯತೆ ಇದೆ.

* ರಾಜ್ಯ  ಮತ್ತು ರಾಜ್ಯದ ಜನರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಪಿಎಎಎಸ್‌ನ ಕೆಲವು ಮುಖಂಡರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ

–ಭರತ್‌ಸಿಂಹ ಸೋಲಂಕಿ 

ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ

* ನಾವು ಹಿಂದೆಯೂ ಟಿಕೆಟ್‌ ಕೇಳಿಲ್ಲ, ಈಗಲೂ ಕೇಳಿಲ್ಲ. ಸಮುದಾಯಕ್ಕೆ ಮೀಸಲಾತಿ ಬೇಕು ಎಂಬುದೇ ನಮ್ಮ ಮೊದಲ ಮತ್ತು ಕೊನೆಯ ಬೇಡಿಕೆ

–ದಿನೇಶ್‌ ಭಂಭಾನಿಯಾ

ಪಿಎಎಎಸ್‌ ಸಂಚಾಲಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.