ADVERTISEMENT

ಕಾವೇರಿ ಮಂಡಳಿಯಿಂದ ಕಷ್ಟ

ಉಮಾಪತಿ
Published 20 ಸೆಪ್ಟೆಂಬರ್ 2016, 19:30 IST
Last Updated 20 ಸೆಪ್ಟೆಂಬರ್ 2016, 19:30 IST

ನವದೆಹಲಿ: ಕಳೆದ ಹಲವು ವರ್ಷಗಳಿಂದ ಕರ್ನಾಟಕ ಸತತವಾಗಿ ವಿರೋಧಿಸಿಕೊಂಡು ಬಂದಿದ್ದ ಕಾವೇರಿ ನಿರ್ವಹಣಾ ಮಂಡಳಿಯ ಅಪಾಯ ಇದೀಗ ಹೊಸ್ತಿಲ ಬಳಿ ನಿಂತು ಬೆದರಿಸತೊಡಗಿದೆ.

ನಾಲ್ಕು ವಾರಗಳಲ್ಲಿ ಈ ಮಂಡಳಿ ರಚನೆಯ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ಆದೇಶ ರಾಜ್ಯದ ಪಾಲಿಗೆ ಕೆಟ್ಟ ಸುದ್ದಿ.

ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ತಮಿಳುನಾಡಿಗೆ ನೀರು ಬಿಡದೆ ಹೋದರೆ ಕರ್ನಾಟಕದ ಕಾವೇರಿ ಜಲಾಶಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ನಿರ್ವಹಣಾ ಮಂಡಳಿಯು ಹೊಂದಿರುತ್ತದೆ.

ಕಾವೇರಿ ಕಣಿವೆಯ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳನ್ನು ಆಯಾ ರಾಜ್ಯಗಳು ಕಾವೇರಿ ನಿರ್ವಹಣಾ ಮಂಡಳಿಯ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲೇ ನಿರ್ವಹಿಸಬೇಕು.

ಕಾವೇರಿ ಕಣಿವೆಯ ಮೇಲ್ಭಾಗದಲ್ಲಿರುವ ಕರ್ನಾಟಕ ಎಂದಿನಂತೆ ಮಳೆ ಬಿದ್ದ ವರ್ಷಗಳಲ್ಲಿ ಪ್ರತಿವರ್ಷ 192 ಟಿಎಂಸಿ ಅಡಿಗಳಷ್ಟು ನೀರನ್ನು ತಮಿಳುನಾಡಿಗೆ ತನ್ನ ಜಲಾಶಯಗಳಿಂದ ಹರಿಸಬೇಕಿದೆ.

ಹೀಗಾಗಿ ನಾಲ್ಕೂ ಜಲಾಶಯಗಳು ಮಂಡಳಿಯ ಉಸ್ತುವಾರಿ ಇಲ್ಲವೇ ನೇರ ನಿಯಂತ್ರಣಕ್ಕೆ ಒಳಪಡಲಿವೆ. ಕಣಿವೆಯ ಕೆಳಭಾಗದಲ್ಲಿರುವ ತಮಿಳುನಾಡು ತನ್ನೇ ಜಲಾಶಯಗಳಿಂದ ಪುದುಚೆರಿಗೆ ಹರಿಸಬೇಕಿರುವ ನೀರಿನ ಪ್ರಮಾಣ ಕೇವಲ ಏಳು ಟಿಎಂಸಿ ಅಡಿಗಳು. ಹೀಗಾಗಿ ನಿರ್ವಹಣಾ ಮಂಡಳಿಯ ಬಿಸಿ ತಟ್ಟುವುದು ಕರ್ನಾಟಕಕ್ಕೇ ವಿನಾ ತಮಿಳುನಾಡಿಗೆ ಅಲ್ಲ.

ನ್ಯಾಯಮಂಡಳಿಯು 2007ರಲ್ಲಿ ಐತೀರ್ಪು ನೀಡಿ ಕೇರಳಕ್ಕೆ 30 ಟಿಎಂಸಿ ಅಡಿಗಳು, ಕರ್ನಾಟಕಕ್ಕೆ 270 ಟಿಎಂಸಿ ಅಡಿಗಳು, ತಮಿಳುನಾಡಿಗೆ 419 ಟಿಎಂಸಿ ಅಡಿಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ ಏಳು ಟಿಎಂಸಿ ಅಡಿಗಳಷ್ಟು ನೀರನ್ನು ಹಂಚಿಕೆ ಮಾಡಿತ್ತು.

ಈ ಐತೀರ್ಪನ್ನು ಜಾರಿಗೆ ತರುವ ಮೊದಲ ಹೆಜ್ಜೆಯಾಗಿ ಕೇಂದ್ರ ಸರ್ಕಾರ 2013ರಲ್ಲಿ ಅಧಿಸೂಚನೆ ಹೊರಡಿಸಿತು. ಆದರೆ ಮೂರೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿ ಈ ಐತೀರ್ಪಿನ ವಿರುದ್ಧದ ಮೇಲ್ಮನವಿಗಳು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.