ADVERTISEMENT

ಕಾಶ್ಮೀರ: ಸತತ ಆರನೇ ದಿನವೂ ಪತ್ರಿಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಕಾಶ್ಮೀರ: ಸತತ ಆರನೇ ದಿನವೂ ಪತ್ರಿಕೆ ಇಲ್ಲ
ಕಾಶ್ಮೀರ: ಸತತ ಆರನೇ ದಿನವೂ ಪತ್ರಿಕೆ ಇಲ್ಲ   

ಶ್ರೀನಗರ (ಪಿಟಿಐ): ಸತತ ಆರನೇ ದಿನವಾದ ಬುಧವಾರವೂ ಕಾಶ್ಮೀರದಲ್ಲಿ ಸ್ಥಳೀಯ ಪತ್ರಿಕೆಗಳು ಪ್ರಕಟವಾಗಲಿಲ್ಲ. ಆದರೆ, ಪತ್ರಿಕೆಗಳ ಮುದ್ರಣ ಮತ್ತು ಪ್ರಸಾರದ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

ಪತ್ರಿಕೆಗಳನ್ನು ಪ್ರಕಟಿಸದಂತೆ ಶುಕ್ರವಾರ ರಾತ್ರಿ ಸರ್ಕಾರ ತಮ್ಮ ಮೇಲೆ ನಿರ್ಬಂಧ ಹೇರಿದೆ ಎಂದು ಪತ್ರಿಕೆಗಳ ಮಾಲೀಕರು ಆರೋಪಿಸಿದ್ದಾರೆ. ನಿರ್ಬಂಧ ಹೇರಿರುವುದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ಮುಂದೆ ಮಾಧ್ಯಮದ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪತ್ರಿಕಾ ಕಚೇರಿ ಮತ್ತು ಮುದ್ರಣಾಲಯಗಳಿಗೆ ಪೊಲೀಸರು ದಾಳಿ ಮಾಡಿದ್ದು, ಪತ್ರಿಕೆಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮುದ್ರಣ ವಿಭಾಗದ ಕೆಲವು ಸಿಬ್ಬಂದಿಯನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಪತ್ರಿಕೆಗಳ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರ ಸಭೆಯೊಂದು ಶನಿವಾರ ನಡೆದಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಪತ್ರಕರ್ತರು ಪ್ರತಿಭಟನೆ ನಡೆಸಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿದ್ದಾರೆ.

ಶ್ರೀನಗರ ಮತ್ತು ಬುದ್‌ಗಾಮ್‌ನ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಪತ್ರಿಕೆಗಳ ಪ್ರಕಟಣೆ ಮೇಲೆ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿಸಿದ್ದಾರೆ.

ಮುಂದುವರಿದ ಕರ್ಫ್ಯೂ: ಕಾಶ್ಮೀರದ ಹತ್ತು ಜಿಲ್ಲೆಗಳಲ್ಲಿ ಬುಧವಾರವೂ ಕರ್ಫ್ಯೂ ಮುಂದುವರಿಸಲಾಗಿದೆ. ಇತ್ತೀಚೆಗೆ ನಡೆದ ಹತ್ಯೆಗಳನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ‘ಕರಾಳ ದಿನ’ ಆಚರಿಸಲು ಕರೆ ನೀಡಿದ ಕಾರಣ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ರಾಜ್ಯದಲ್ಲಿ ಪರಿಸ್ಥಿತಿ ಬಹುತೇಕ ಶಾಂತಿಯುತವಾಗಿತ್ತು.
ಇದೇ 8ರಂದು ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಬುರ್ಹಾನ್‌ ವಾನಿ ಹತ್ಯೆಯ ನಂತರ ಉಂಟಾಗಿರುವ ಸಂಘರ್ಷದಲ್ಲಿ ಒಟ್ಟು 42 ಮಂದಿ ಮೃತಪಟ್ಟಿದ್ದು 3,400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಮುಷ್ಕರ ಕರೆಯಿಂದಾಗಿ ಕಳೆದ 12 ದಿನಗಳಿಂದ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.  ಇದು ಶುಕ್ರವಾರದ ವರೆಗೆ ಮುಂದುವರಿಯಲಿದೆ.  ಮೊಬೈಲ್‌ ಸಂಪರ್ಕ ಮತ್ತು ಮೊಬೈಲ್ ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.