ADVERTISEMENT

ಕಾಶ್ಮೀರ: ಗೊಂದಲದಲ್ಲಿ ಸರ್ಕಾರ ರಚನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ಶ್ರೀನಗರ (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ ಸರ್ಕಾರ ರಚನೆ ಕಸರತ್ತು ಗೊಂದಲ ಗುರುವಾರವೂ ಬಗೆಹರಿದಿಲ್ಲ. ೨೫ ಸದಸ್ಯರನ್ನು ಹೊಂದಿರುವ ಎರಡನೇ ಅತಿ ದೊಡ್ಡ ಪಕ್ಷ ಬಿಜೆಪಿಯು ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ) ಜತೆ ಸೇರಿಕೊಂಡು ಸರ್ಕಾರ ರಚಿಸುವ ಇರಾದೆಯಲ್ಲಿದೆ. ಆದರೆ ಬಿಜೆಪಿ ಜತೆ ಕೈಜೋಡಿಸುವ ಸಾಧ್ಯತೆಯನ್ನು ಎನ್‌ಸಿ ಅಲ್ಲಗಳೆದಿದೆ.

ಎರಡೂ ಪಕ್ಷಗಳ ಮುಖಂಡರು  ಈ ದಿಸೆಯಲ್ಲಿ ನಡೆಸಿದ ಚರ್ಚೆ ಫಲ ನೀಡಿಲ್ಲ ಎಂದು ಹೇಳಲಾಗಿದೆ.
ಒಮರ್‌ ಅಬ್ದುಲ್ಲಾ ಹಾಗೂ ಬಿಜೆಪಿ  ಅಧ್ಯಕ್ಷ ಅಮಿತ್‌ ಷಾ ಅವರು ಬುಧವಾರ ರಾತ್ರಿ ದೆಹಲಿಯಲ್ಲಿ  ಭೇಟಿಯಾಗಿದ್ದಾಗಿ ವರದಿಯಾಗಿದೆ. ಆದರೆ ಬಿಜೆಪಿ ಇದನ್ನು ಅಲ್ಲಗಳೆದಿದೆ.

ಬಿಜೆಪಿ ಹಾಗೂ ಎನ್‌ಸಿ ಮಧ್ಯೆ ಮೂಲ­ಸಿದ್ಧಾಂತದಲ್ಲಿಯೇ ವ್ಯತ್ಯಾಸವಿದೆ. ಆದ್ದರಿಂದ ಬಿಜೆಪಿ ಜತೆ ಕೈಜೋಡಿಸುವುದು ಅಸಾಧ್ಯ ಎಂದು ಎನ್‌ಸಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಒಮರ್‌ ಅವರು ಪಿಡಿಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
‘ಪಿಡಿಪಿಗೆ ಬೆಂಬಲದ ಆಹ್ವಾನ ಮುಂದಿಟ್ಟಿದ್ದೇವೆ. ನಿರ್ಧಾರ ಪಿಡಿಪಿಗೆ ಬಿಟ್ಟಿದ್ದು’ ಎಂದು ಒಮರ್‌ ಹೇಳಿದ್ದಾರೆ.
ಈ ನಡುವೆ ಬಿಜೆಪಿ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಅವರು ಪಕ್ಷದ ನೂತನ ಶಾಸಕರನ್ನು ಭೇಟಿಯಾಗುವುದಕ್ಕೆ ಜಮ್ಮುವಿಗೆ ತೆರಳಿದ್ದಾರೆ.  ಇದರ ನಂತರದಲ್ಲಿ ಪಕ್ಷವು ಕಾಶ್ಮೀರದ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.

ದ್ವಂದ್ವ: ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬೇಕೋ ಅಥವಾ ಎನ್‌ಸಿ ಬೆಂಬಲವನ್ನು ಒಪ್ಪಿಕೊಳ್ಳಬೇಕೋ ಎನ್ನುವ ದ್ವಂದ್ವದಲ್ಲಿದೆ ಪಿಡಿಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.