ADVERTISEMENT

ಕಾಶ್ಮೀರ ಜತೆಗೆ ಬಿಹಾರ ತೆಗೆದುಕೊಳ್ಳಿ

ವಿವಾದ ಸೃಷ್ಟಿಸಿದ ಕಟ್ಜು ವ್ಯಂಗ್ಯ ಹೇಳಿಕೆ:ಸಿ.ಎಂ ನಿತೀಶ್ ಆಕ್ರೋಶ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST

ಪಟ್ನಾ: ‘ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧ. ಆದರೆ ಜತೆಗೆ ಬಿಹಾರ ವನ್ನೂ ತೆಗೆದುಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಹೇಳಿರುವುದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ರೋಶಕ್ಕೆ ಕಾರಣವಾಗಿದೆ.

‘ಕಟ್ಜು ಅವರು ನಮ್ಮ ರಾಜ್ಯದ ಸಂರಕ್ಷಕ ಆಗಲು ಹೊರಟಿದ್ದಾರೆ’ ಎಂದು ನಿತೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಜು ಹೇಳಿಕೆಗೆ ರಾಜಕೀಯ ವಲಯದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾ ಗಿದ್ದು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

‘ನಾವು ನಿಮಗೆ (ಪಾಕಿಸ್ತಾನಕ್ಕೆ) ಕಾಶ್ಮೀರವನ್ನು ನೀಡುತ್ತೇವೆ. ಆದರೆ ನೀವು ಅದರ ಜೊತೆ ಬಿಹಾರವನ್ನೂ ತೆಗೆದುಕೊಳ್ಳಬೇಕು’ ಎಂದು ಕಟ್ಜು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

‘ನಾನು ಪಾಕಿಸ್ತಾನ ಸರ್ಕಾರದಿಂದ ಖಚಿತ ಮಾಹಿತಿ ಪಡೆದಿದ್ದೇನೆ. ಕಾಶ್ಮೀರದ ಜೊತೆ ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂಬ ಕೊಡುಗೆ ಯನ್ನು ಅವರು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಕಾಶ್ಮೀರವನ್ನು ಕೇಳಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ, ಇನ್ನೆಂದೂ ಕಾಶ್ಮೀರವನ್ನು ಕೇಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂಬುದು ಅವರಲ್ಲಿ ತೀವ್ರ ಭಯ ಮೂಡಿಸಿದ್ದಿರಬೇಕು’ ಎಂದೂ ಕಟ್ಜು ಬರೆದಿದ್ದರು.

‘ಭಾರತಕ್ಕೆ ಆಪತ್ತು ಇರುವುದು ಪಾಕಿಸ್ತಾನದಿಂದ ಅಲ್ಲ, ಬಿಹಾರದಿಂದ ಎಂದು ಅಲಹಾಬಾದ್ ವಿಶ್ವವಿದ್ಯಾಲಯ ದಲ್ಲಿ ನನಗೆ ಇಂಗ್ಲಿಷ್ ಬೋಧಿಸಿದ ಫಿರಾಕ್ ಗೋರಖಪುರಿ ಒಮ್ಮೆ ಹೇಳಿ ದ್ದರು’ ಎಂದು ಕಟ್ಜು ಬರೆದುಕೊಂಡಿದ್ದರು.

‘ಅವರು ಮನೆಯಲ್ಲಿ ಕುಳಿತೇ ಬಿಹಾರದ ಸಂರಕ್ಷಕ ಆಗಲು ಹೊರಟಿ ದ್ದಾರೆ’ ಎಂದು ನಿತೀಶ್ ಅವರು ಕಟ್ಜು ಅವರ ಹೆಸರು ಉಲ್ಲೇಖಿಸದೆ ಟೀಕಿಸಿದರು.

ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ನಿತೀಶ್, ‘ಕೆಲವರಿಗೆ ಪತ್ರಿಕೆಗಳಲ್ಲಿ ಹೆಸರು ಹಾಕಿ ಸಿಕೊಳ್ಳುವ ರೋಗ ಅಂಟಿಕೊಂಡಿದೆ’ ಎಂದು ಹರಿಹಾಯ್ದರು.

‘ಬಿಹಾರದಲ್ಲಿ ಕೆಲವು ಸಂಪನ್ಮೂಲಗಳು ಇಲ್ಲದಿರಬಹುದು. ಆದರೆ, ರಾಜ್ಯವನ್ನು ಅವಮಾನಿಸುವ ಸ್ವಾತಂತ್ರ್ಯವನ್ನು ಕಟ್ಜು ಅವರಿಗೆ ನೀಡಿಲ್ಲ’ ಎಂದು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ಬಿಹಾರವು ದೇಶಕ್ಕೆ ಮಾರ್ಗದರ್ಶನ ಮಾಡಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಹೇಳಿದ್ದಾರೆ.
ಕಟ್ಜು ಅವರನ್ನು ದೇಶದ್ರೋಹದ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸ ಬೇಕು ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಆಗ್ರಹಿಸಿದ್ದಾರೆ.

ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಗಮನಿಸಿ ಕಟ್ಜು ಅವರು, ‘ನಾನು ಹಾಗೆ ಹೇಳಿದ್ದು ತಮಾಷೆಗೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.