ADVERTISEMENT

ಕಾಶ್ಮೀರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಜಮ್ಮು– ಕಾಶ್ಮೀರ ಹಾಗೂ ಜಾರ್ಖಂಡ್‌ ವಿಧಾನ­ಸಭೆಗಳಿಗೆ ನ. ೨೫ ರಿಂದ ಡಿ. ೨೦ರ ವರೆಗೆ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ. ೨೩ ರಂದು ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌.ಸಂಪತ್‌ ಅವರು ಶನಿವಾರ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿ ವಿಧಾನಸಭೆಯ ಮೂರು ಸ್ಥಾನಗಳಿಗೆ ನ. ೨೫ರಂದು ಉಪ­ಚುನಾ­­ವಣೆ ನಡೆಯಲಿದೆ. ಲೋಕಸಭೆ ಚುನಾ­ವಣೆಯಲ್ಲಿ ಗೆದ್ದ ಕಾರಣ ಈ ಮೂರು ಕ್ಷೇತ್ರ­ಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀ­ನಾಮೆ ನೀಡಿದ್ದರು. ಪ್ರವಾಹ ಪೀಡಿತ ಜಮ್ಮು–ಕಾಶ್ಮೀರ­ದಲ್ಲಿ ಚುನಾವ­ಣೆ­ಯನ್ನು ಮುಂದೂ­ಡಬೇಕು ಎಂದು ಆಡಳಿ­ತಾರೂಢ ನ್ಯಾಷ­ನಲ್‌ ಕಾನ್ಫರೆನ್ಸ್ ಒತ್ತಾ­ಯ­­ವನ್ನು ಒಪ್ಪದ ಆಯುಕ್ತರು, ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸಿದ ನೈಸ­ರ್ಗಿಕ ವಿಕೋಪ ಚುನಾವಣೆ ಮೇಲೆ ‘ವಿಶೇಷ ಪರಿಣಾಮ’ ಬೀರುವುದಿಲ್ಲ ಎಂದರು.

ಪ್ರವಾಹದ ನಂತರದ ಪರಿಸ್ಥಿತಿ ಜತೆಗೆ ಹವಾಮಾನ, ಹಬ್ಬಗಳು ಮತ್ತು ಕಾನೂನು–ಸುವ್ಯವಸ್ಥೆ ಗಮನ­ದ­ಲ್ಲಿ­­ಟ್ಟುಕೊಂಡು ಚುನಾವಣೆ ದಿನಾಂಕ  ನಿಗದಿ ಮಾಡಲಾಗಿದೆ. ಜಮ್ಮು– ಕಾಶ್ಮೀರದಲ್ಲಿ ಒಂದು ರಾಜಕೀಯ ಪಕ್ಷವನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದಕ್ಕೆ ಸಮ್ಮತಿ ಸೂಚಿಸಿವೆ. ಸಕಾಲಕ್ಕೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿಯಾಗಿದೆ’ ಎಂದು ಸಂಪತ್‌ ವಿವರಿಸಿದರು. ಜಮ್ಮು–ಕಾಶ್ಮೀರದಲ್ಲಿ ಪ್ರಸಕ್ತ ವಿಧಾನಸಭೆ ಅವಧಿ ೨೦೧೫ರ ಜನವರಿ ೧೬ ಹಾಗೂ ಜಾರ್ಖಂಡ್‌ನಲ್ಲಿ ಜನವರಿ ೩ಕ್ಕೆ ಕೊನೆಗೊಳ್ಳುತ್ತದೆ.

ಸೂಕ್ಷ್ಮ ರಾಜ್ಯಗಳು: ‘ಭದ್ರತೆಯ ದೃಷ್ಟಿ­ಯಿಂದ ಇವೆರಡೂ ಸೂಕ್ಷ್ಮ ರಾಜ್ಯಗಳು. ಈ ಸಂಬಂಧ ನಾವು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ.  ಮುಕ್ತ ಹಾಗೂ ನ್ಯಾಯಸಮ್ಮತ ಚುನಾ­ವಣೆ ನಡೆಯುವುದಕ್ಕೆ ಅಗತ್ಯವಿರುವ ಭದ್ರತಾ ಪಡೆಗಳನ್ನು ನಿಯೋಜಿಸಲಾ­ಗುತ್ತದೆ’ ಎಂದು ಸಂಪತ್‌ ಹೇಳಿದರು.

ಮಾದರಿ ನೀತಿ ಸಂಹಿತೆ ಜಾರಿ: ತಕ್ಷಣದಿಂದಲೇ ಎರಡೂ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯ­ಗಳಿಗೆ ಇದು ಅನ್ವಯವಾಗುತ್ತದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.