ADVERTISEMENT

ಕೇಂದ್ರಕ್ಕೆ ಸಂಸದೀಯ ಸಮಿತಿ ತರಾಟೆ

ಪಠಾಣ್‌ಕೋಟ್‌ ದಾಳಿ ತಡೆಗೆ ಕೇಂದ್ರ ಸರ್ಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಕೇಂದ್ರಕ್ಕೆ ಸಂಸದೀಯ ಸಮಿತಿ ತರಾಟೆ
ಕೇಂದ್ರಕ್ಕೆ ಸಂಸದೀಯ ಸಮಿತಿ ತರಾಟೆ   

ನವದೆಹಲಿ (ಪಿಟಿಐ): ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರ ದಾಳಿ ತಡೆಯುವುದಕ್ಕೆ ವಿಫಲವಾದ ಕೇಂದ್ರ ಸರ್ಕಾರವನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ತರಾಟೆಗೆ ತೆಗೆದುಕೊಂಡಿದೆ.

ಭಯೋತ್ಪಾದನೆ ತಡೆ ಸಂಸ್ಥೆಗಳಿಂದ ಗಂಭೀರ ತಪ್ಪುಗಳಾಗಿವೆ ಮತ್ತು ವಾಯುನೆಲೆಯ ಭದ್ರತೆ ಸಮರ್ಪಕವಾಗಿರಲಿಲ್ಲ ಎಂದು ಸಮಿತಿ ಹೇಳಿದೆ. ಜನವರಿ 2ರಂದು ನಡೆದ ದಾಳಿಯ ಸಂದರ್ಭದಲ್ಲಿ ಪಂಜಾಬ್‌ ಪೊಲೀಸ್‌ ಇಲಾಖೆಯ ಪಾತ್ರ ಅತ್ಯಂತ ‘ಪ್ರಶ್ನಾರ್ಹ ಮತ್ತು ಶಂಕಾಸ್ಪದ’ ಎಂದು ಸಮಿತಿಯು ಹೇಳಿದೆ.

ಸಾಕಷ್ಟು ಮೊದಲೇ ಉಗ್ರರ ದಾಳಿಯ ಬಗ್ಗೆ ಮುನ್ಸೂಚನೆ ದೊರೆತಿತ್ತು. ಹಾಗಿದ್ದರೂ ಇಂತಹ ಗರಿಷ್ಠ ಭದ್ರತೆಯ ವಾಯುನೆಲೆಗೆ ಉಗ್ರರು ನುಸುಳಿ ದಾಳಿ ನಡೆಸಲು ಹೇಗೆ ಸಾಧ್ಯವಾಯಿತು ಎಂದು ಸಮಿತಿಯು ಆಶ್ಚರ್ಯ ವ್ಯಕ್ತಪಡಿಸಿದೆ.

ಉಗ್ರರಿಂದ ಅಪಹರಣಕ್ಕೆ ಒಳಗಾದ  ಪಂಜಾಬ್‌ನ ಎಸ್‌ಪಿ ಮತ್ತು ಅವರ ಸ್ನೇಹಿತ ಉಗ್ರರ ದಾಳಿಯ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡಿದ್ದರು. ಉಗ್ರರು ಮತ್ತು ಪಾಕಿಸ್ತಾನದಲ್ಲಿರುವ ಸಂಚುಕೋರರ ನಡುವಣ ಸಂಭಾಷಣೆಯನ್ನು ಭದ್ರತಾ ಸಿಬ್ಬಂದಿ ಆಲಿಸಿದ್ದರು. ಇದು ಕೂಡ ಉಗ್ರರ ದಾಳಿ ನಡೆಯಲಿದೆ ಎಂಬುದನ್ನು ದೃಢಪಡಿಸಿತ್ತು. ಹಾಗಿದ್ದರೂ ಉಗ್ರರ ದಾಳಿ ಎದುರಿಸಲು ಭದ್ರತಾ ಸಂಸ್ಥೆಗಳು ಸರಿಯಾದ ರೀತಿಯಲ್ಲಿ ಸಜ್ಜಾಗಿರಲಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

‘ನಮ್ಮ ಭಯೋತ್ಪಾದನೆ ತಡೆ ವ್ಯವಸ್ಥೆಯಲ್ಲಿಯೇ ಗಂಭೀರವಾದ ಲೋಪಗಳಿವೆ’ ಎಂದು ಕಳವಳ ವ್ಯಕ್ತಪಡಿಸಿದೆ.

ವಾಯುನೆಲೆಯ ಹೊರಭಾಗದಲ್ಲಿ ಸೂಕ್ತವಾದ ರಸ್ತೆಗಳೇ ಇಲ್ಲ ಮತ್ತು ಆವರಣ ಗೋಡೆಯ ಸುತ್ತಲೂ ಎತ್ತರದ ಪೊದೆಗಳು ಮತ್ತು ಗಿಡಗಳು ಬೆಳೆದಿವೆ. ಇದು ಉಗ್ರರಿಗೆ ಅಡಗಿಕೊಳ್ಳಲು ನೆರವಾಗಿದೆ. ಅವರನ್ನು ಹೊರದಬ್ಬಲು ಇದರಿಂದ ಯೋಧರಿಗೆ ತೊಂದರೆಯಾಗಿದೆ ಎಂಬುದು ಇತ್ತೀಚೆಗೆ ವಾಯುನೆಲೆಗೆ ಭೇಟಿ ನೀಡಿದಾಗ ತಿಳಿದು  ಬಂದಿದೆ ಎಂದು ಸಮಿತಿ ಹೇಳಿದೆ.

ಪಾಕಿಸ್ತಾನದ ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯೇ ಈ ದಾಳಿ ನಡೆಸಿರುವುದು ಎಂಬುದರಲ್ಲಿ ಅನುಮಾನ ಇಲ್ಲ. ಪಾಕಿಸ್ತಾನದಲ್ಲಿರುವ ಸಂಚುಕೋರರ ಜತೆ ಉಗ್ರರು ನಡೆಸಿರುವ ಸಂಭಾಷಣೆಯಿಂದ ಇದು ಸ್ಪಷ್ಟ ಎಂದು ಸಮಿತಿ ತಿಳಿಸಿದೆ.
ಜ. 2ರಂದು ನಡೆದ ಉಗ್ರರ ದಾಳಿಯಲ್ಲಿ ಏಳು ಯೋಧರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.